ವಿಜಯಪುರ : ಮಹಾರಾಷ್ಟ್ರ ರಾಜ್ಯದ ಜಲಾಶಯಗಳಿಂದ ಅವೈಜ್ಞಾನಿಕವಾಗಿ ಬಿಡುಗಡೆ ಮಾಡಿದ ಉತ್ತರ ಕರ್ನಾಟಕದಲ್ಲಿ ಭೀಮಾ ನದಿ ಪ್ರವಾಹ ನಿರೀಕ್ಷೆ ಮೀರಿ ಪ್ರವಾಹ ಸೃಷ್ಟಿಸಿ, ಭಾರಿ ಪ್ರಮಾಣದ ನಷ್ಟ ಉಂಟು ಮಾಡಿದೆ. ಪ್ರವಾಹದಿಂದಾದ ಹಾನಿ ಭರಿಸಲು ರಾಜ್ಯ ಸರ್ಕಾರದಿಂದ ಸಾಧ್ಯವಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಭೀಮಾ ನದಿ ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಬೇಕು ಎಂದು ಇಂಡಿ ಯಶವಂತ್ರಾಯಗೌಡ ಪಾಟೀಲ ಆಗ್ರಹಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಆಗ್ರಹ ಮಾಡಿದ ಅವರು, ರಾಷ್ಟ್ರೀಯ ವಿಪತ್ತು ಎಮದು ಘೋಷಿಸಿದಲ್ಲಿ ಮಾತ್ರವೇ ಭೀಮಾ ಪ್ರವಾಹ ಬಾಧಿತರಿಗೆ ಕನಿಷ್ಟ ಮಟ್ಟದ ಪರಿಹಾರ ದೊರೆಯಲು ಸಾಧ್ಯ. ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಹಿನ್ನಡೆಯಲ್ಲಿರುವ ರಾಜ್ಯ ಸರ್ಕಾರದಿಂದ ಭೀಮಾ ಪ್ರವಾಹ ಸಂತ್ರಸ್ತರಿಗೆ ಕನಿಷ್ಟ ಪರಿಹಾರದ ನೆರವು ನೀಡಲೂ ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ರಾಜ್ಯ ಸರ್ಕಾರ ತಕ್ಷಣ ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಪ್ರಧಾನಿ ನರೇಂದ್ರ ಮೋದಿ ರಾಜ್ಯದ ಪ್ರವಾಹ ಸಂಕಷ್ಟಕ್ಕೆ ಸ್ಪಂದಿಸುವ ಹೇಳಿದ ಮಾತನ್ನು ಉಳಿಸಿಕೊಳ್ಳಬೇಕು. ತುರ್ತಾಗಿ ಭೀಮಾ ಪ್ರವಾಹದ ಹಾನಿಯನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ, ಪರಿಹಾರ ಬಿಡುಗಡೆ ಮಾಡಿ ಮಾತಿಗೆ ತಪ್ಪದಂತೆ ನಡೆಯಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: : ಧೋನಿ ಆಯ್ತು, ಈಗ ವಿಜಯ್ ಸೇತುಪತಿ ಮಗಳಿಗೆ ಅತ್ಯಾಚಾರ ಬೆದರಿಕೆ!
ಮಹಾರಾಷ್ಟ್ರ ರಾಜ್ಯದಿಂದ ಭೀಮಾ ನದಿಗೆ ಹರಿದು ಬಂದ ನೀರಿನ ಪ್ರಮಾಣ ಎಷ್ಟು ಎಂದು ಯಾರೊಬ್ಬರೂ ಸ್ಪಷ್ವಪಡಿಸುತ್ತಿಲ್ಲ. ಒಬ್ಬೊಬ್ಬರು ಒಂದು ಸಂಖ್ಯೆ ಹೇಳುತ್ತಿದ್ದಾರೆ. ನಿಖರ ಮಾಹಿತಿ ಯಾರ ಬಳಿಯೂ ಇಲ್ಲ. ಪರಿಣಾಮ ಭೀಮಾ ತೀರದ ಪರಿಸರದಲ್ಲಿ ರೈತರ ಬದುಕು ನುಚ್ಚುನೂರಾಗಿದೆ. ಹೀಗಾಗಿ ಅಂತರಾಜ್ಯ ಜಲ ವಿವಾದ ಇರುವ ರಾಜ್ಯಗಳಲ್ಲಿ ಅಂತರಾಜ್ಯ ಪ್ರವಾಹ ಪರಿಸ್ಥಿತಿ ನಿರ್ವಹಣೆಗೂ ಕೇಂದ್ರ ಸರ್ಕಾರ ತಕ್ಷಣ ಮಧ್ಯಸ್ಥಿಕೆ ವಹಿಸಬೇಕು. ಅಂತರಾಜ್ಯ ಜಲಾಶಯಗಳ ನಿರ್ವಹಣೆ ಹಾಗೂ ಪ್ರವಾಹ ತಪ್ಪಿಸಲು ದೂರಗಾಮಿ ಯೋಜನೆಗಾಗಿ ಅಂತರಾಜ್ಯ ಜಲಾಶಯಗಳ ನಿರ್ವಹಣೆಗೆ ರಾಷ್ಟ್ರೀಯ ನೀತಿ ರೂಪಿಸಬೇಕು ಎಂದು ಆಗ್ರಹಿಸಿದರು.
ಭೀಮಾ ನದಿಯಲ್ಲಿ 1949 ರಿಂದ ಈ ವರೆಗೆ 5 ಬಾರಿ ಪ್ರವಾಹ ಸೃಷ್ಟಿಯಾಗಿದ್ದರೂ, ಈ ಬಾರಿಯ ಪ್ರವಾಹ ನದಿ ತೀರದ ಜನರ ಬದುಕನ್ನು ಸಂಪೂರ್ಣ ಸರ್ವನಾಶ ಮಾಡಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾಳೆ ವೈಮಾನಿಕ ಸಮೀಕ್ಷೆ ಮುಗಿಸುತ್ತಲೇ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ರಾಷ್ಟ್ರೀಯ ವಿಪತ್ತು ಘೋಷಣೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಒತ್ತಡ ಹೇರಬೇಕು. ಪ್ರಧಾನಿ ಕೂಡ ನೆರವಿಗೆ ಬರುವುದಾಗಿ ಹೇಳಿದ ಮಾತಿಗೆ ತಪ್ಪದೇ ನಡುದಂತೆ ನಡೆಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: ಕೊಪ್ಪಳದಲ್ಲಿ ಮತ್ತೆ ಮಳೆಯಾರ್ಭಟ: ಬೆಳೆ ಹಾನಿ, ಸಂಚಾರ ಅಸ್ತವ್ಯಸ್ತ
ಭೀಮಾ ನದಿ ಪ್ರವಾಹ ನಿಯಂತ್ರಣ ವಿಷಯದಲ್ಲಿ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳ ವೈಫಲ್ಯವೂ ಎದ್ದುಕಾಣುತ್ತಿದೆ. ಸೊನ್ನ ಬ್ಯಾರೇಜ್‍ನಿಂದ ತಕ್ಷಣವೇ ಒಳಹರಿವಿನ ನೀರನ್ನು ಹೊರ ಬಿಡುವಲ್ಲಿ ಕರ್ತವ್ಯ ಲೋಪ ಎಸಗಿ, ಭೀಮಾ ಪ್ರವಾಹ ಪರಿಸ್ಥಿತಿ ಗಂಭೀರ ಸ್ವರೂಪಕ್ಕೆ ಕಾರಣವಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಸತ್ಯಶೋಧನಾ ಸಮಿತಿ ರಚಿಸಬೇಕು ಎಂದು ಆಗ್ರಹಿಸಿದರು.