ಹಾಸನ: ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಪತ್ನಿ, ಜಿಪಂ ಸದಸ್ಯೆ ಭವಾನಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರ್ಯಕ್ರಮಗಳ ಮೂಲಕ ಹಾಸನದಲ್ಲಿ ಸಕ್ರಿಯ ರಾ ಗುತ್ತಿದ್ದು, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಹಾಸನ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧತೆಗೆ ಮುಂದಾಗಿದ್ದಾರೆಯೇ ಎಂಬ ಶಂಕೆ ಮೂಡಿದೆ.
ಕಳೆದ ಭಾನುವಾರ ಹಾಸನದ ಹುಣಸಿನಕೆರೆ ಬಡಾವಣೆಯಲ್ಲಿ ನಡೆದ ಮಹಿಳಾ ದಿನಾಚರಣೆಯ ಕಾರ್ಯಕ್ರಮಕ್ಕೆ ನಟ ದರ್ಶನ್ ಅವರನ್ನು ಆಹ್ವಾನಿಸಿ ಅದ್ಧೂರಿಯಾಗಿಕಾರ್ಯಕ್ರಮ ನಡೆಸಿದ್ದರು. ನಗರದ ಕೆಂಪು ಚೆಲುವಾ ಜಮ್ಮಣ್ಣಿ ಮಹಿಳಾ ಸಮಾಜದಕಟ್ಟಡ ನಿರ್ಮಾಣಕ್ಕೆ 25 ಲಕ್ಷ ರೂ. ನೆರವಿನ ವ್ಯವಸ್ಥೆ ಮಾಡಿ ಕಾಮಗಾರಿಗೆ ಸೋಮವಾರಚಾಲನೆ ನೀಡಿದ್ದರು. ಮಾ.19ರಂದು ವಿವಿಧ ಮಹಿಳಾ ಸಂಘ, ಸಂಸ್ಥೆಗಳನ್ನುಒಗ್ಗೂಡಿಸಿ ಹಾಸನದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ತಮ್ಮ ನೇತೃತ್ವದಲ್ಲಿಯೇ ವಿಶ್ವ ಮಹಿಳಾ ದಿನಾಚರಣೆಯನ್ನು ನಡೆಸುತ್ತಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳು ಭವಾನಿ ರೇವಣ್ಣ ಅವರ ಭವಿಷ್ಯದ ರಾಜಕೀಯ ದಿಕ್ಸೂಚಿ ಎಂದೇ ಅರ್ಥೈಸಲಾಗುತ್ತಿದೆ. ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ನಲ್ಲಿ ಪ್ರಬಲ ಅಭ್ಯರ್ಥಿಗಳಿಲ್ಲ. ಹಾಗಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭವಾನಿ ರೇವಣ್ಣ ಅವರು ಸ್ಪರ್ಧೆಗಿಳಿಯುವ ಸಿದ್ಧತೆ ಮಾಡಿ ಕೊಳ್ಳುತ್ತಿರಬಹುದೆಂಬ ಚರ್ಚೆ ನಡೆದಿದೆ. ಆದರೆ, ಭವಾನಿ ಅವರು ಈ ಕಾರ್ಯಕ್ರಮ ಗಳ ಹಿಂದೆ ರಾಜಕೀಯ ಉದ್ದೇಶವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಕುಟುಂಬದಲ್ಲಿ ಇನ್ನೂ ಚರ್ಚೆ ನಡೆದಿಲ್ಲ: ನಾನು ಶಾಸಕಿಯಾಗುವುದು ಬಿಡುವುದು ದೇವರ ಇಚ್ಛೆ. ಆದರೆ, ಈ ಕಾರ್ಯಕ್ರಮಗಳ ಹಿಂದೆ ರಾಜಕೀಯಉದ್ದೇಶವಿಲ್ಲ. ಮಹಿಳೆಯರ ಒತ್ತಾಸೆಯಂತೆ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದ ಅವರು, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆಯಾಗಿ ಒಬ್ಬ ಶಾಸಕರು ಮಾಡಬಹುದಾದಷ್ಟು ಕೆಲಸವನ್ನು ಮಾಡಿದ್ದೇನೆ. 5 ವರ್ಷಗಳ ರಾಜಕೀಯ ಸೇವೆ ತೃಪ್ತಿ ತಂದಿದೆ. ಮುಂದಿನ ಮೇನಲ್ಲಿ ಜಿಪಂ ಚುನಾವಣೆ ನಡೆಯಲಿದ್ದು, ಚುನಾವಣೆ ಸ್ಪರ್ಧೆಯ ಬಗ್ಗೆ ಇನ್ನೂ ತೀರ್ಮಾನ ಮಾಡಿಲ್ಲ. ನಮ್ಮ ಕುಟುಂಬದಲ್ಲಿಯೂ ಈ ಬಗ್ಗೆ ಚರ್ಚೆ ನಡೆದಿಲ್ಲ ಎಂದು ಭವಾನಿ ಹೇಳಿದರು.
ದರ್ಶನ ಭೇಟಿ ವಿಶೇಷ ಅರ್ಥ ಇಲ್ಲ: ಕಳೆದ ಭಾನುವಾರ ನಡೆದ ಮಹಿಳಾ ದಿನಾಚರಣೆಯಲ್ಲಿ ನಟ ದರ್ಶನ್ ಪಾಲ್ಗೊಂಡಿದ್ದಕ್ಕೆ ವಿಶೇಷ ಅರ್ಥ ಕಲ್ಪಿಸುವುದುಬೇಡ. ಸಂಸದ ಪ್ರಜ್ವಲ್ , ದರ್ಶನ್ 8 ವರ್ಷಗಳಿಂದಲೂ ಗೆಳೆಯರು. ಅಂಬರೀಶ್ ಪುತ್ರ ಅಭಿಷೇಕ್ ಕೂಡ ಬೆಂಗಳೂರಿನಲ್ಲಿ ಹಲವು ಬಾರಿ ನಮ್ಮ ಮನೆಗೆ ಬರುತ್ತಿದ್ದರು. ರಾಜಕೀಯ ಬೇರೆ, ಸ್ನೇಹ ಸಂಬಂಧಗಳು ಬೇರೆ ಎಂದು ಹೇಳಿದರು.
ಸ್ಪರ್ಧೆ ಬಗ್ಗೆ ಚಿಂತಿಸಿಲ್ಲ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವ ಬಗ್ಗೆ ಚಿಂತನೆ ಮಾಡಿಲ್ಲ. ಮಹಿಳಾ ದಿನಾಚರಣೆಯ ಹಿಂದೆ ಅಂತಹ ಉದ್ಧೇಶಗಳೂ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ ಸುದ್ದಿಗೋಷ್ಠಿಯಲ್ಲಿದ್ದ ಹಲವು ಮಹಿಳೆಯರು ಭವಾನಿ ಮೇಡಂ ಮುಂದೆ ಶಾಸಕಿಯಾವುದು ಖಚಿತ ಎಂದು ಬಹಿರಂಗವಾಗಿಯೇ ಹೇಳಿದ್ದು ಮಾತ್ರ ಕುತೂಹಲ ಮೂಡಿಸಿದೆ.
ನಂಜುಂಡೇಗೌಡ.ಎನ್