Advertisement

ಹಾಸನದಲ್ಲಿ ಭವಾನಿ ಬಿರುಸಿನ ಪ್ರಚಾರ

02:24 PM May 03, 2018 | Team Udayavani |

ಹಾಸನ: ನಗರದ ಸೀತಾರಾಮಾಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಸಚಿವ ಎಚ್‌.ಡಿ.ರೇವಣ್ಣರ ಪತ್ನಿ, ಜಿಪಂ ಸದಸ್ಯೆ ಭವಾನಿ ರೇವಣ್ಣ ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಎಸ್‌.ಪ್ರಕಾಶ್‌ ಪರ ಹಾಸನ ನಗರದಲ್ಲಿ ಬುಧವಾರ ಬಿರುಸಿನ ಪ್ರಚಾರ ನಡೆಸಿದರು.

Advertisement

ನೂರಾರು ಮಹಿಳಾ ಜೆಡಿಎಸ್‌ ಕಾರ್ಯಕರ್ತೆಯರು ಹಾಗೂ ಎಚ್‌.ಎಸ್‌. ಪ್ರಕಾಶ್‌ರ ಪತ್ನಿ ಲಲಿತಾ ಅವರೊಂದಿಗೆ
ಹಾಸನದ ಪ್ರಮುಖ ಬೀದಿಗಳಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ಹಿರಿಯ ಶಾಸಕ ಎಚ್‌.ಎಸ್‌.ಪ್ರಕಾಶ್‌ಗೆ ಮತ ನೀಡಿ ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬರಲು ಸಹಕರಿಸಬೇಕೆಂದು ಮನವಿ ಮಾಡಿದರು.

ಸುದ್ದಿಗಾರರೊಂದಿಗೆ ಭವಾನಿ ಮಾತನಾಡಿ, ಜಿಲ್ಲೆಯ ಎಲ್ಲಾ 7 ಕ್ಷೇತ್ರಗಳಲ್ಲೂ ಜೆಡಿಎಸ್‌ ಪರವಾದ ಅಲೆ ಇದೆ. ಹೊಳೆನರಸೀಪುರ ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಏನೇ ಹೋರಾಟ ನಡೆಸಿದರೂ ಜನರು ಜೆಡಿಎಸ್‌ ಪರವಾಗಿದ್ದು,
ಎಚ್‌.ಡಿ. ರೇವಣ್ಣ ಅತಿ ಹೆಚ್ಚು ಬಹುಮತದಿಂದ ಗೆಲುವು ಸಾಧಿಸಲಿದ್ದಾರೆ ಎಂದು ಜನರೇ ಹೇಳುತ್ತಿದ್ದಾರೆ ಎಂದರು.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಾಕಿಕೊಟ್ಟ ದಾರಿಯಲ್ಲಿ ಮತ್ತು ಅವರ ನಿರ್ದೇಶನದಲ್ಲಿ ಜಿಲ್ಲೆಯ 7 ತಾಲೂಕುಗಳಲ್ಲಿ ಜೆಡಿಎಸ್‌ ಅಧಿಕಾರದಲ್ಲಿದ್ದಾಗ ಮಾಡಿರುವ ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟುಕೊಂಡು ಜನರ ಬಳಿ ಮತ ಕೇಳಲು ಹೋಗುತ್ತಿದ್ದೇವೆ. ರಾಜ್ಯದಲ್ಲಿ ಜೆಡಿಎಸ್‌ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಾಸನ ಜಿಲ್ಲೆಯ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುವುದು. ಪ್ರಚಾರಕ್ಕೆ ಹೋದ ಕಡೆಯಲ್ಲೆಲ್ಲಾ ಜನರ ಪ್ರತಿಕ್ರಿಯೆ ಗಮನಿಸಿದರೆ ಜಿಲ್ಲೆಯ ಎಲ್ಲಾ 7 ಕ್ಷೇತ್ರಗಳನ್ನೂ ಜೆಡಿಎಸ್‌ ಗೆಲ್ಲುವ ವಾತಾವರಣ ನಿರ್ಮಾಣವಾಗಿದೆ ಎಂದು ಹೇಳಿದರು.

ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ನಾನು ಪ್ರವಾಸ ಹಮ್ಮಿಕೊಂಡು ಜೆಡಿಎಸ್‌ ಅಭ್ಯರ್ಥಿಗಳ ಪರ ಮತಯಾಚನೆ ಮಾಡುವೆ.
ದೇವೇಗೌಡರ ಸೂಚನೆಯಂತೆ ಪ್ರಜ್ವಲ್‌ ರೇವಣ್ಣ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ, ವಿಶೇಷವಾಗಿ ಮುಸಲ್ಮಾನರು ಹೆಚ್ಚು ಇರುವ ಪ್ರದೇಶಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳ ಪರ ಪ್ರಚಾರ ಕೈಗೊಳ್ಳಲಿದ್ದಾರೆ ಎಂದರು. 

Advertisement

ಹೊಳೆನರಸೀಪುರ ಕ್ಷೇತ್ರದಲ್ಲಿ ಸೋಲಿನ ಭೀತಿಯಲ್ಲಿರುವ ಕಾಂಗ್ರೆಸ್‌ನವರು ಯಾರನ್ನಾದರೂ ಟಾರ್ಗೆಟ್‌ ಮಾಡಬೇಕು
ಎಂಬ ಉದ್ದೇಶದಲ್ಲಿ ನನ್ನ ಮಗ ಡಾ.ಸೂರಜ್‌ ಮೇಲೆ ಆರೋಪಗಳನ್ನು ಮಾಡಿದ್ದಾರೆ ಎಂದು ಚನ್ನರಾಯಪಟ್ಟಣ
ತಾಲೂಕು ಎ.ಕಾಳೇನಹಳ್ಳಿ ಘಟನೆಯ ಸಂಬಂಧ ಸ್ಪಷ್ಟಪಡಿಸಿದರು. 

ಹಾಸನ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿ ಎಚ್‌.ಎಸ್‌. ಪ್ರಕಾಶ್‌ ಪತ್ನಿ ಲಲಿತಮ್ಮ, ನಗರಸಭೆ ಮಾಜಿ ಅಧ್ಯಕ್ಷರಾದ ಚನ್ನವೀರಪ್ಪ, ನೇತ್ರಾವತಿ ಗಿರೀಶ್‌, ಜಿಲ್ಲಾ ಸಹಕಾರ ಬ್ಯಾಂಕ್‌ ನಿರ್ದೇಶಕ ಗಿರೀಶ್‌, ಜಿಪಂ ಮಾಜಿ ಉಪಾಧ್ಯಕ್ಷೆ ಪ್ರೇಮಮ್ಮ, ಪಕ್ಷದ ಮುಖಂಡರಾದ ಕಾರ್ಲೆ ಇಂದ್ರೇಶ್‌, ರೇಖಾ, ಪುಷ್ಪಾ, ಕಿರಣ್‌ರಾಜ್‌ ಮತ್ತಿತರರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next