Advertisement

ಶ್ರೀ ನಾಗಯಕ್ಷೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಲಸಿಕಾಕರಣ ಸಭಾಂಗಣ ಲೋಕಾರ್ಪಣೆ

03:31 PM Oct 15, 2021 | Team Udayavani |

ಭಟ್ಕಳ: ಶ್ರೀ ನಾಗಯಕ್ಷೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಲಾದ ಲಸಿಕಾಕರಣ ಸಭಾಂಗಣವನ್ನು ಸಹಾಯಕ ಆಯುಕ್ತೆ ಮಮತಾದೇವಿ ಜಿ.ಎಸ್. ಅವರು ಲೋಕಾರ್ಪಣಗೊಳಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಮಕ್ಕಳ ವಾರ್ಡ್ ಆಗಬೇಕು ಎನ್ನುವಾಗ ಭಟ್ಕಳದಲ್ಲಿ ಆಗಬೇಕು ಎನ್ನುವ ಇಲ್ಲಿನ ವೈದ್ಯಾಧಿಕಾರಿಗಳ ಕಾಳಜಿ ಅತ್ಯಂತ ಶ್ಲಾಘನೀಯವಾಗಿದೆ. ಇಲ್ಲಿಗೆ ಹೆಚ್ಚಿನ ಅಗತ್ಯ ಸೌಲಭ್ಯ ನೀಡುವಲ್ಲಿ ಹಾಗೂ ಹೆಚ್ಚಿನ ಹಾಸಿಗೆಗಳ ಸೌಲಭ್ಯ ಕಲ್ಪಿಸುವಲ್ಲಿ ಸರಕಾರದ ಮಟ್ಟದಲ್ಲಿ ಹಿರಿಯ ಅಧಿಕಾರಿಗಳ ಮೂಲಕ ಪ್ರಯತ್ನಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪುರಸಭಾ ಅಧ್ಯಕ್ಷ ಪರ್ವೇಜ್ ಕಾಶಿಮಜಿ ಮಾತನಾಡಿ ತಾಲೂಕು ಆಸ್ಪತ್ರೆಯಿಂದ ಅನೇಕ ಜನರಿಗೆ ಅನುಕೂಲವಾಗಿದೆ. ದಾನ ಮಾಡುವುದಕ್ಕೆ ಅನೇಕ ದಾನಿಗಳು ಭಟ್ಕಳದಲ್ಲಿದ್ದಾರೆ, ಆದರೆ ದಾನ ತೆಗೆದುಕೊಳ್ಳುವ ನಿಜವಾಗಿ ಅಗತ್ಯವಿರುವವರನ್ನು ಹುಡುಕುವುದು ಕಷ್ಟ, ಆದರೆ ತಾಲೂಕು ಆಸ್ಪತ್ರೆಗೆ ದಾನ ಮಾಡಿದರೆ ಅದು ಎಲ್ಲರಿಗೂ ತಲುಪುತ್ತದೆ ಎನ್ನುವ ವಿಶ್ವಾಸ ಜನರಲ್ಲಿ ಬಂದಿದೆ ಎಂದರು.

ಲಸಿಕಾಕರಣ ಕಟ್ಟಡದ ಮೂಲ ರೂವಾರಿ ಶ್ರೀ ನಾಗಯಕ್ಷೆ ಧರ್ಮದೇವಿ ಸಂಸ್ಥಾನದ ಅಧ್ಯಕ್ಷ ರಾಮದಾಸ ಪ್ರಭು ಮಾತನಾಡಿ ತಾಲೂಕು ಆಸ್ಪತ್ರೆಯಲ್ಲಿ ಅನೇಕ ಬಡ ರೋಗಿಗಳಿಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ. ತಮ್ಮ ಟ್ರಸ್ಟ್ ವತಿಯಿಂದ ಪ್ರತಿ ವರ್ಷ ಒಂದು ಲಕ್ಷ ರೂಪಾಯಿಯ ಅಗತ್ಯ ಔಷಧಗಳನ್ನು ನೀಡುವುದಾಗಿ ಭರವಸೆಯನ್ನು ನೀಡಿದರು.

ಇದನ್ನೂ ಓದಿ:ದತ್ತು ಮಗಳ ಬರ್ತ್ ಡೇ ಅದ್ದೂರಿಯಾಗಿ ಆಚರಿಸಿದ ನಟಿ ಸನ್ನಿ ಲಿಯೋನ್

Advertisement

ಬೆಂಗಳೂರಿನ ಚಾರ್ಟರ್ಡ್ ಎಕೌಂಟೆಂಟ್ ರಘು ಪಿಕಳೆ ಮಾತನಾಡಿ ಇತಿಹಾಸದಲ್ಲಿ ದಾನ ಮಾಡಿದವರೆಲ್ಲರೂ ಶ್ರೀಮಂತರಾಗಿದ್ದಾರೆ, ದಾನದಿಂದ ಅವರು ಮತ್ತಷ್ಟು ಶ್ರೀಮಂತರಾದರು ಎಂದು ನೆನಪಿಸಿದರು. ನಾವು ಕ್ರೋಢೀಕರಿಸುವ ಹಣದಲ್ಲಿ ಸಮಾಜಕ್ಕೆ ನೀಡಬೇಕಾಗುತ್ತದೆ ಎಂದ ಅವರು ಉತ್ತಮ ಕಾರ್ಯವನ್ನು ಮಾಡುವವರನ್ನು ಗುರುತಿಸಿ ದಾನ ಮಾಡುವಂತೆ ಕರೆ ನೀಡಿದರು.

ಆಸರಕೇರಿ ಗುರು ಮಠದ ಅಧ್ಯಕ್ಷ ಕೃಷ್ಣಾ ನಾಯ್ಕ ಆಸರಕೇರಿ ಮಾತನಾಡಿ ತಾಲೂಕಾ ಆಸ್ಪತ್ರೆ ಇಂದು ಅನೇಕ ಬಡವರಿಗೆ ಸಂಜೀವಿನಿಯಾಗಿದೆ. ಇಲ್ಲಿನ ವೈದ್ಯರು, ಸಿಬ್ಬಂದಿಗಳ ಕಾರ್ಯ ಅತ್ಯಂತ ಉತ್ತಮವಾಗಿದ್ದರೂ ಸಹ ಕೆಲವರು ಹಳದಿ ಕಣ್ಣಿನಿಂದ ನೋಡುತ್ತಿರುವುದು ಸರಿಯಲ್ಲ, ಉತ್ತಮ ಕೆಲಸ ಮಾಡುವವರನ್ನು ಪ್ರೋತ್ಸಾಹಿಸಬೇಕು, ಇಲ್ಲವಾದರೆ ಸುಮ್ಮನಿರಬೇಕು, ಕೇವಲ ತಪ್ಪು ಹುಡುಕುವ ಕೆಲಸ ಮಾಡಬೇಡಿ ಎಂದು ಸಲಹೆ ನೀಡಿದರು.

ವೇದಿಕೆಯಲ್ಲಿ ಜಿ.ಎಸ್.ಬಿ. ಸಮಾಜದ ಪ್ರಮುಖರಾದ ಸುಬ್ರಾಯ ಕಾಮತ್, ಉದ್ಯಮಿ ಮಂಜುನಾಥ ಪ್ರಭು ಬೆಂಗಳೂರು ಮುಂತಾದವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ದಾನವಾಗಿ ಕಟ್ಟಡವನ್ನು ಕಟ್ಟಿಸಿಕೊಟ್ಟ ರಾಮದಾಸ ಪ್ರಭು ಅವರನ್ನು ಸರಕಾರಿ ಆಸ್ಪತ್ರೆಯ ಪರವಾಗಿ ಸನ್ಮಾನಿಸಲಾಯಿತು. ಶ್ರೀ ನಾಗಯಕ್ಷೆ ಧರ್ಮಾರ್ಥ ಟ್ರಸ್ಟ್ನಿಂದ ವೈದ್ಯರುಗಳನ್ನು ಹಾಗೂ ಕಟ್ಟಡವನ್ನು ಕಟ್ಟಲು ಸಹಕರಿಸಿದವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅರ್ಚನಾ ಶೇಟ್ ಸ್ವಾಗತಿಸಿದರು. ನಾರಾಯಣ ನಾಯ್ಕ ನಿರೂಪಿಸಿದರು. ಡಾ. ಸುಬ್ರಹ್ಮಣ್ಯ ಹೆಗಡೆ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next