ಭಟ್ಕಳ: ತಾಲೂಕಿನ ಹಾಡುವಳ್ಳಿಯಲ್ಲಿ ಕಳೆದ ಶುಕ್ರವಾರ ನಡೆದ ನಾಲ್ವರ ಹತ್ಯೆಯ ತನಿಖೆ ನಡೆಸುತ್ತಿರುವ ಪೊಲೀಸರು ಮಹತ್ವದ ಘಟ್ಟ ತಲುಪಿದ್ದು, ತನಿಖೆಗಾಗಿ ವಿವಿದೆಡೆಗಳಿಗೆ ತೆರಳಿದ್ದ ಪೊಲೀಸರ ತಂಡ ಚಿತ್ರದುರ್ಗದಲ್ಲಿ ಪ್ರಮುಖ ಆರೋಪಿಯೋರ್ವನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಚಿತ್ರದುರ್ಗದಲ್ಲಿ ಪೊಲೀಸರು ವಶಪಡಿಸಿಕೊಂಡ ವ್ಯಕ್ತಿ ವಿನಯ್ ಭಟ್ಟ ಎನ್ನಲಾಗಿದೆ.
ಕಳೆದ ಶುಕ್ರವಾರ ಹಾಡುವಳ್ಳಿಯಲ್ಲಿ ನಾಲ್ವರನ್ನು ಕೊಲೆ ಮಾಡಿದ ನಂತರ ತನ್ನ ತಂದೆಯೊಂದಿಗೆ ಹಲ್ಯಾಣಿಯ ಮನೆಗೆ ಹೋಗಿದ್ದ ಈತ ಮನೆಯಲ್ಲಿ ಸ್ನಾನ ಮಾಡಿ ಬಟ್ಟೆಯನ್ನು ಬದಲಿಸಿ ದ್ವಿಚಕ್ರ ವಾಹನದಲ್ಲಿ ಕಾರ್ಗಲ್ ತನಕ ತೆರಳಿ ಅಲ್ಲಿಯೇ ತನ್ನ ದ್ವಿಚಕ್ರ ವಾಹನವನ್ನು ಬಿಟ್ಟು ಬಸ್ಸಿನಲ್ಲಿ ಶಿವಮೊಗ್ಗಕ್ಕೆ ತೆರಳಿ ಅಲ್ಲಿಂದ ಚಿತ್ರದುರ್ಗಕ್ಕೆ ಹೋಗಿದ್ದ ಎನ್ನಲಾಗುತ್ತಿದೆ.
ಪೊಲೀಸರು ಆತನ ಜಾಡು ಹಿಡಿದು ಚಿತ್ರದುರ್ಗದಲ್ಲಿ ವಶಕ್ಕೆ ಪಡೆದಿರುವ ಕುರಿತು ತಿಳಿದು ಬಂದಿದ್ದು, ಇನ್ನಷ್ಟೇ ದೃಢಪಡಬೇಕಿದೆ.
Related Articles
ಈಗಾಗಲೇ ಪೊಲೀಸರ ವಶದಲ್ಲಿರುವ ಇನ್ನೋರ್ವ ಆರೋಪಿ ವಿದ್ಯಾ ಭಟ್ಟ ಎಂಬವರನ್ನು ಕಾರವಾರದ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೋರ್ವ ಆರೋಪಿ ಶ್ರೀಧರ ಭಟ್ಟ ಎಂಬವನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದ್ದು, ಈತನ ಕುರಿತು ಯಾವುದೇ ಮಾಹಿತಿ ಲಭ್ಯವಾಗಿಲ್ಲ.