ಭಟ್ಕಳ: ಅಕ್ರಮವಾಗಿ ಹಿಂಸಾತ್ಮಕ ರೂಪದಲ್ಲಿ ಸಾಗಿಸುತ್ತಿದ್ದ ಎರಡು ಕೋಣಗಳನ್ನು ಬೊಲೆರೋ ವಾಹನ ಸಹಿತ ವಶಪಡಿಸಿಕೊಂಡ ಗ್ರಾಮೀಣ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದು ಇನ್ನೋರ್ವ ಆರೋಪಿ ತಪ್ಪಿಸಿಕೊಂಡಿರುವ ಕುರಿತು ವರದಿಯಾಗಿದೆ.
ಮಹೀಂದ್ರ ಬೊಲೆರೋ ವಾಹನದಲ್ಲಿ ಎರಡು ಕೋಣಗಳನ್ನು ಸಾಗಾಟ ಮಾಡುತ್ತಿರುವ ಖಚಿತ ಮಾಹಿತಿ ಪಡೆದ ಗ್ರಾಮೀಣ ಠಾಣೆಯ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಆರೋಪಿಗಳಾದ ಮಾದೇವ ನಾಯ್ಕ, ಇಬ್ರಾಹಿಂ ಜಬಾಲಿ ಹಾಗೂ ಇಬ್ರಾಹಿಂ ಖಲೀಲ್ ರನ್ನು ಬಂಧಿಸಿದ್ದು, ಇನ್ನೋರ್ವ ಆರೋಪಿ ಬೊಲೆರೋ ಚಾಲಕ ಮಂಜು ನಾಯ್ಕ ಪರಾರಿಯಾಗಿದ್ದಾನೆನ್ನಲಾಗಿದೆ.
ಬೊಲೆರೋ ವಾಹನ ಸಹಿತ ಕಪ್ಪು ಬಣ್ಣದ ಸುಮಾರು 30 ಸಾವಿರ ರೂಪಾಯಿ ಬೆಲೆಯ ಎರಡು ಕೋಣಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣಗಳನ್ನು ವಾಹನದಲ್ಲಿ ಕಾಲುಗಳನ್ನು ಕಟ್ಟಿ ಸಾಗಾಟ ಮಾಡುತ್ತಿದ್ದು, ಸಾಗಾಟ ಮಾಡಲು ಯಾವುದೇ ಪರವಾನಿಗೆ ಪಡೆದಿಲ್ಲ ಎನ್ನಲಾಗಿದೆ. ಹಿಂಸಾತ್ಮಕವಾಗಿ ಸಾಗಾಟ ಮಾಡುತ್ತಿದ್ದ ಕೋಣಗಳನ್ನು ವಶಕ್ಕೆ ಪಡೆದುಕೊಂಡಿದ್ದು ಆರೋಪಿಗಳ ವಿರುದ್ಧ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಬೊಲೆರೋ ಚಾಲಕ ಮಂಜು ನಾಯ್ಕನ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಪ್ರಕರಣದ ಆರೋಪಿಗಳಾದ ಮಾದೇವ ನಾಯ್ಕ ಹಾಗೂ ಮಂಜು ನಾಯ್ಕ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ.