Advertisement

ಭಟ್ಕಳ: ದಿನೇ ದಿನೇ ಏರುತ್ತಿದೆ ತಾಪ-ನೀರಿಗಾಗಿ ಜನರ ಪರಿತಾಪ

06:23 PM Apr 30, 2024 | |

■ ಉದಯವಾಣಿ ಸಮಾಚಾರ
ಭಟ್ಕಳ: ದಿನದಿಂದ ದಿನಕ್ಕೆ ಬಿಸಿಲ ತಾಪ ಏರುತ್ತಿದ್ದು ತಾಲೂಕಿನ ಹಲವೆಡೆ ಜೀವ ಜಲ ಪಾತಾಳಕ್ಕಿಳಿಯುತ್ತಿದ್ದು ಕೆಲವೇ ದಿನಗಳಲ್ಲಿ ನೀರಿಗೆ ಬರ ಬಂದರೂ ಆಶ್ಚರ್ಯವಿಲ್ಲ ಎನ್ನುವಂತಾಗಿದೆ. ತಾಲೂಕಿನಲ್ಲಿ ದಿನದಿಂದ ದಿನಕ್ಕೆ ತಾಪಮಾನ ಏರುತ್ತಲೇ ಇದ್ದು ಕಳೆದ ಸುಮಾರು ಒಂದು ವಾರದಿಂದ 28 ಡಿಗ್ರಿಯಿಂದ 36-38 ಡಿಗ್ರಿಯ ತನಕ ತಾಪಮಾನ ದಾಖಲಾಗುತ್ತಿದೆ. ಕೆಲ ದಿನಗಳ ಹಿಂದೆ ಎರಡು ಮಳೆ ಬಂದಾಗ ಮಾತ್ರ ಕೊಂಚ ತಾಪಮಾನ ಕಡಿಮೆಯಾಗಿದ್ದು ಬಿಟ್ಟರೆ ಮತ್ತೆ ಬಿಸಿಲ ಪ್ರಖರತೆ ಹೆಚ್ಚುತ್ತಲೇ ಇದ್ದು ಸೆಖೆ ತಡೆಯಲಾದ ಪರಿಸ್ಥಿತಿ ನಿರ್ಮಾಣವಾಗಿದೆ.

Advertisement

ಭಟ್ಕಳ ತಾಲೂಕಿನಾದ್ಯಂತ ಬಿರು ಬೇಸಿಗೆ ಹಾಗೂ ನೀರಿನ ಕೊರತೆ ಜನರನ್ನು ಹೈರಾಣಾಗಿಸಿದೆ. ಇನ್ನು ಕೆಲ ದಿನಗಳ ಕಾಲ ಮಳೆ ಬಾರದಿದ್ದರೆ ಹನಿ ನೀರಿಗೂ ಕಷ್ಟಪಡುವ ಪರಿಸ್ಥಿತಿ ಬಂದರೂ ಆಶ್ಚರ್ಯವಿಲ್ಲ. ಹಿಂದೆ ನದಿ, ಹೊಳೆ-ಹಳ್ಳಗಳಿಗೆ ಕಟ್ಟು (ಒಡ್ಡು) ಹಾಕಿ ಕೃಷಿ ಚಟುವಟಿಕೆಗೆ ನೀರು ನಿಲ್ಲಿಸುವುದರಿಂದ ಅಕ್ಕಪಕ್ಕದ ಕಿ.ಮೀ. ಗಟ್ಟಲೆ ಪ್ರದೇಶದಲ್ಲಿ ತಂಪು ಗಾಳಿಯಾದರೂ ಬೀಸುತ್ತಿತ್ತು. ಬಾವಿ, ಕೆರೆಗಳಲ್ಲಿ ನೀರಿನ ಸೆಲೆ ಉಳಿದುಕೊಂಡು ಕುಡಿಯುವ ನೀರಿಗೆ ಬರ ಎನ್ನುವುದು ಇರಲಿಲ್ಲ. ಆದರೆ ಇಂದು ಕೃಷಿಯೇ ನಾಸ್ತಿಯಾಗಿದೆ. ಮಳೆಗಾಲದಲ್ಲೂ ಕೂಡಾ ಕೆಲವೊಂದು ಗದ್ದೆಗಳನ್ನು ಪಾಳು ಬಿಡುತ್ತಿರುವ ಇಂದಿನ ಕಾಲದಲ್ಲಿ ಬೇಸಿಗೆ ಕೃಷಿಯಂತು ದೂರದ ಮಾತಾಗಿದೆ.

ಬತ್ತಿದ ನದಿ-ಬಾವಿ: ತಾಲೂಕಿನಲ್ಲಿ ನೂರಾರು ನದಿ, ಹಳ್ಳ-ಕೊಳ್ಳಗಳಿದ್ದು ಇವುಗಳಲ್ಲಿ ಅರ್ಧದಷ್ಟು ನವೆಂಬರ್‌-ಡಿಸೆಂಬರ್‌ ಕೊನೆ ವಾರವೇ ಒಣಗಿ ಹೋದರೆ ಮತ್ತೆ ಸುಮಾರು ಶೇ.25 ರಷ್ಟು ಮಾರ್ಚ್‌ ವೇಳೆಗೆ ಬತ್ತಿ ಬರಡಾಗಿವೆ. ಇನ್ನು ಕೆಲವೇ ಕೆಲವು ನದಿ, ಹಳ್ಳ-ತೊರೆಗಳು ಏಪ್ರಿಲ್‌, ಮೇ ತನಕ ಇರುತ್ತಿದ್ದು, ಅವು ಜೀವ ಸೆಲೆಗಳಾಗಿ ಇಲ್ಲಿನ ಬಾವಿ, ಕೆರೆಗಳಿಗೆ ನೀರುಣಿಸುವ ಜಲಮೂಲವಾಗಿವೆ. ಆದರೆ ಕಳೆದ ಎರಡು ದಶಕಗಳಿಂದ ಇವು ಕೂಡಾ ಬತ್ತಿ ಹೋಗುತ್ತಿದ್ದು ನೀರನ್ನು ಕಟ್ಟುಕಟ್ಟಿ ಹಿಡಿದಿರುವ ಸಂಪ್ರದಾಯವೂ ಮಾಯವಾಗಿದ್ದರಿಂದ ನೀರಿನ ಸೆಲೆಯೇ ಇಲ್ಲದಂತಾಗಿದೆ.

ಟ್ಯಾಂಕರ್‌ ನೀರೇ ಗತಿ: ಏಪ್ರಿಲ್‌ ತಿಂಗಳಿನಲ್ಲಿಯೇ ತಾಲೂಕಿನಲ್ಲಿ ಕುಡಿಯುವ ನೀರಿನ ಬರ ಉಂಟಾಗಿದ್ದು. ತಾಲೂಕಿನಲ್ಲಿ ವರ್ಷ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಕೊರತೆ ಹೆಚ್ಚುತ್ತಿದೆ. ಆದರೆ ಬೇಸಿಗೆ ಮಧ್ಯದಲ್ಲಿ ಒಂದೆರಡು ಉತ್ತಮ ಮಳೆ ಸುರಿದು ದಾಹ ತೀರಿಸುವಲ್ಲಿ ಸಫಲವಾಗುತ್ತಿತ್ತು. ಈ ಬಾರಿಯ ಮಳೆ ಕೇವಲ ಒಂದೆರಡು ತಾಸು ಬಂದು ಹೋಗಿದ್ದು, ಇರುವ ನೀರನ್ನು ಒಣಗಸಿದೆ ಎನ್ನುವುದು ಹಿರಿಯರ ಮಾತು. ಕೆಲವು ಪ್ರದೇಶದಲ್ಲಿ ಬಾವಿಗಳು ಸಂಪೂರ್ಣ ಬತ್ತಿ ಹೋಗಿ ಆ ಭಾಗದ ಜನ ಪಂಚಾಯತ್‌ ನೀಡುವ ಟ್ಯಾಂಕರ್‌ ನೀರು ಅಥವಾ ಹತ್ತಿರದಲ್ಲಿನ ಇರುವ ಯಾವುದಾದರೂ ಒಂದು ಬಾವಿಯನ್ನು ಆಶ್ರಯಿಸುವ ಸ್ಥಿತಿ ಎದುರಾಗಿದೆ.

ಹೆಚ್ಚಿದ ಆತಂಕ: ಆದರೆ ಈ ಬಾರಿ ಈಗಾಗಲೇ ಬಾವಿಗಳು ಒಣಗಿದ್ದರಿಂದ ಜನ ಹಾಗೂ ತಾಲೂಕಾಡಳಿತವನ್ನು ಆತಂಕಕ್ಕೆ ಈಡು ಮಾಡಿದೆ. ಎಲ್ಲರ ಬಾವಿಗಳೂ ಬತ್ತಿ ಹೋಗುತ್ತಾ ಬಂದಿದ್ದು ಜನರಲ್ಲಿ ನೀರಿಗಾಗಿ ಹಾಹಾಕಾರ ಎದ್ದಿದೆ. ನಗರಕ್ಕೆ ನೀರು ಸರಬರಾಜು ಮಾಡುತ್ತಿದ್ದ ಇಲ್ಲಿನ ಕಡವಿನ ಕಟ್ಟೆ ಡ್ಯಾಂ ಕೂಡಾ ಇನ್ನೇನು ಕೆಲವೇ ದಿನಗಳಲ್ಲಿ ಬತ್ತಿ ಹೋಗುವ ಸಾಧ್ಯತೆ ಇದ್ದು ನಗರಕ್ಕೆ, ಶಿರಾಲಿ, ಜಾಲಿ ಹಾಗೂ ಮಾವಿನಕುರ್ವೆ ನೀರು ಸರಬರಾಜು ವ್ಯತ್ಯಯವಾಗಲಿದೆ. ಇನ್ನಾದರೂ ಉತ್ತಮ ಮಳೆ ಬಂದು ಬಾವಿ, ಹಳ್ಳ, ನದಿ-ತೊರೆಗಳಲ್ಲಿ ನೀರು ತುಂಬಿಕೊಂಡರೆ ಮಾತ್ರ ಕುಡಿಯುವ ನೀರು ದೊರೆಯಬಹದು. ಇಲ್ಲವಾದಲ್ಲಿ ನೀರಿನ ಬವಣೆ ತಪ್ಪಿದ್ದಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next