Advertisement

ಕೆರೂರು ಘಟನೆಯಲ್ಲಿ ಭಟ್ಕಳ ಭಯೋತ್ಪಾದಕರ ಕೈವಾಡ : ಮುತಾಲಿಕ್ ಕಿಡಿ

02:51 PM Jul 22, 2022 | Team Udayavani |

ವಿಜಯಪುರ : ಭಾರತದಲ್ಲಿ ತಲ್ವಾರ್ ಸಂಸ್ಕೃತಿ ಬಿಡಲಾಗದವರು ಭಾರತ ಬಿಟ್ಟು ತೊಲಗಬೇಕಾಗುತ್ತದೆ. ಭಾರತೀಯ ಸಂವಿಧಾನ ಆಶಯದಂತೆ ಸಮಾಜದಲ್ಲಿ ಭೀತಿ ಹುಟ್ಟಿಸುವ, ರಕ್ತಪಿಪಾಸು ವ್ಯವಸ್ಥೆಯನ್ನು ಪೋಷಿಸುವ ತಲ್ವಾರ್ ಸಂಸ್ಕೃತಿ ಬಿಡಲಾಗದವದು ದೇಶಬಿಟ್ಟು ಜಾಗ ಖಾಲಿ ಮಾಡಬೇಕು. ನಿಮ್ಮಂಥವರಿಗಾಗಿ ಹಲವು ದೇಶಗಳಿದ್ದು, ಅಲ್ಲಿಗೆ ಹೋಗಿ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿ ಕಾರಿದರು.

Advertisement

ಶುಕ್ರವಾರ ನಗರದಲ್ಲಿರುವ ಜಿಲ್ಲಾ ಕೇಂದ್ರ ಕಾರಾಗ್ರಹಕ್ಕೆ ಭೇಟಿ ನೀಡಿ ಕೆರೂರ ಘಟನೆಯಲ್ಲಿ ಬಂಧಿತರಾದ ಹಿಂದೂ ಕಾರ್ಯಕರ್ತರನ್ನು ಭೇಟಿ ಮಾಡಿದ ಸಂದರ್ಭದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಬಾಗಲಕೋಟೆ ಜಿಲ್ಲೆಯ ಕೆರೂರು ಹಿಂದೂ ಯುವಕರ ಮೇಲಿನ ದಾಳಿಯಲ್ಲಿ ಮುಸ್ಲಿಂ ಪುಂಡಾಟಿಕೆ ವಿಜೃಂಭಿಸಿದೆ ಎಂದರು.

ಭಯೋತ್ಪಾದನೆಗೆ ಕುಮ್ಮಕ್ಕು ನೀಡುವ ಉಗ್ರಗಾಮಿಗಳು ಸಕ್ರೀಯವಾಗಿರುವ ನೆಲೆಯಿಂದಲೇ ಬಂದವರು ಕೆರೂರು ಘಟನೆಯಲ್ಲಿ ಭಾಗಿಯಾಗಿದ್ದಾರೆ. ಮತಾಂಧತೆ ಹರಡುತ್ತಿರುವ ಭಟ್ಕಳ ಇಸ್ಲಾಂ ಸಂಸ್ಕೃತಿ ಕೆರೂರ ಘಟನೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಕೈವಾಡ ತೋರಿದೆ. ಮುಸ್ಲಿಮರು ಹಿಂದೂ ಹುಡುಗಿಯರನ್ನು ಚುಡಾಯಿಸಿದರೆ ಹಿಂದೂ ಯುವಕರು ನೋಡಿಕೊಂಡು ಸುಮ್ಮನಿರಬೇಕೆ. ಇದೀಗ ಹಿಂದೂ ಸಮಾಜ ಜಾಗೃತವಾಗಿದೆ, ಹಿಂದೂ ಯುವಕರು ಕೆಚ್ಚಿನಿಂದ ಎದ್ದರೆ ನಿಮಗೆ ಉಳಿಗಾಲವಿಲ್ಲ, ಹೀಗಾಗಿ ಮುಸ್ಲಿಮರು ಇನ್ನು ತೆಪ್ಪಗಿರಲೇಬೇಕು ಎಂದು ಎಚ್ಚರಿಸಿದರು.

ಭಾರತೀಯ ಸಂವಿಧಾನದಂತೆ ತಲವಾರ್ ಇಲ್ಲದೇ ಭಾರತದಲ್ಲಿ ಬದುಕಬೇಕು, ಇಲ್ಲವಾದಲ್ಲಿ ನಿಮಗಿಲ್ಲ ನೆಲೆ ಇಲ್ಲ. ತಲ್ವಾರ ಸಂಸ್ಕೃತಿಯಲ್ಲೇ ಬದುಕುವವರಿಗೆ ಭಾರತದಲ್ಲಿ ಇರುವುದು ಬೇಡವೇ ಬೇಡ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಹಿಂದೂಗಳ ರಕ್ಷಣೆ ವಿಷಯದಲ್ಲಿ ಬಿಜೆಪಿ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಶಿವಮೊಗ್ಗದ ಹರ್ಷನ ಹತ್ಯೆ ಬಳಿಕ ಬಂಧಿತರು ಜೈಲಿನಿಲ್ಲಿ ಮೋಜಿನ ಜೀವನ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಮತ್ತೊಂದೆಡೆ ರಾಜ್ಯದಲ್ಲಿ ಹಲವೆಡೆ ಹಿಂದೂ ಯುವಕರ ಹಲ್ಲೆ ಮುಂದುವರೆದಿದೆ. ಬಿಜೆಪಿಗೆ ಅಧಿಕಾರ ಮುಖ್ಯ ಹೊರತು ಹಿಂದೂಗಳ ಸುರಕ್ಷತೆ ಅಲ್ಲ. ಹಿಂದುತ್ವಕ್ಕಾಗಿ ಬದುಕನ್ನು ಧಾರೆ ಎರೆದ ಆತನ ಕುಟುಂಬ ಎಂಥ ನೋವಿನಲ್ಲಿದೆ ಎಂಬ ಅರಿವು ಸರ್ಕಾರಕ್ಕೆ ಇದೆಯೇ ಎಂದು ಪ್ರಶ್ನಿಸಿದರು.

Advertisement

ಮತ್ತೊಂದೆಡೆ ರಾಜ್ಯದಲ್ಲಿ ಎಸ್ ಡಿಪಿಐ, ಪಿ.ಎಫ್.ಐ. ಗಳಂಥ ಸಂಘಟನೆಗಳು ಸಮಾಜದಲ್ಲಿ ಕ್ಯಾನ್ಸರ್ ನಂತೆ ಶಾಂತಿ ಕದಡುವ ಕೆಲಸ ಮಾಡುತ್ತಿವೆ. ಈ ಸಂಘಟನೆಗಳು ಇದೀಗ ಬಿಜೆಪಿ ಬಿ ಟೀಂ ರೀತಿಯಲ್ಲಿ ಕೆಲಸ ಮಾಡುತ್ತಿವೆ. ಇಂಥ ಸಂಸ್ಥೆಗಳ ಬಲವರ್ಧನೆಗೆ ಅವಕಾಶ ನೀಡಿ, ಮುಸ್ಲಿಂ ವೋಟ್ ಬ್ಯಾಂಕ್ ಒಡೆದು ಅಧಿಕಾರ ಗಿಟ್ಟಿಸಿಕೊಳ್ಳುವುದು ಬಿಜೆಪಿ ಕುತಂತ್ರ ಎಂದು ಕಿಡಿ ಕಾರಿದರು. ಹೀಗಾಗಿ ದೇಶದ್ರೋಹದ ಕೃತ್ಯದಲ್ಲಿ ತೊಡಗಿರುವ ಇಂಥ ಸಂಘಟನೆಗಳ ನಿಷೇಧಕ್ಕೆ ಆಗ್ರಹಿಸಿ ನಮ್ಮ ಸಂಘಟನೆಯಿಂದ ಅಭಿಯಾನ ಆರಂಭಿಸಲಿದೆ ಎಂದರು.

ಮುಸ್ಲಿಂ ಭಯೋತ್ಪಾದಕರನ್ನು ಕಾಂಗ್ರೆಸ್ ಎಂಬ ಮುಸ್ಲಿಂ ತುಷ್ಟೀಕರಣದ ಪಕ್ಷ ದೇಶಭಕ್ತರಂತೆ ಬಿಂಬಿಸುತ್ತಿದೆ. ಅದರಿಂದಾಗಿ ಇದೀಗ ಕಾಂಗ್ರೆಸ್ ಪಕ್ಷಕ್ಕೂ ಮುಸ್ಲೀಮರು ಮುಳುಗು ನೀರು ತಂದಿದ್ದಾರೆ. ಮೊನ್ನೆ ಸಿದ್ಧರಮಯ್ಯ ಅವರ ಮೇಲೆ ಮುಸ್ಲಿಂ ಮಹಿಳೆ ನೋಟಿನ ಬಂಡಲ್ ಎಸೆದ ಘಟನೆ ಜೀವಂತ ನಿದರ್ಶನ ಎಂದರು.

ಬಳಿಕ ಕೆರೂರ ಘಟನೆಯಿಂದಾಗಿ ಬಂಧಿತರಾಗಿ ವಿಜಯಪುರ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿರುವ ಹಿಂದೂ ಕಾರ್ಯಕರ್ತರನ್ನು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ್ ಭೇಟಿ ನೀಡಿ ಆತ್ಮಸ್ಥೈರ್ಯ ತುಂಬಿದರು. ಶ್ರೀರಾಮ ಸೇನೆಯ ನೀಲಕಂಠ ಕಂದಗಲ್ ಇತರರು ಈ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next