ಭಟ್ಕಳ: ತಾಲೂಕಿನ ಹಾಡುವಳ್ಳಿಯ ಒಣಿಬಾಗಿಲು ಎನ್ನುವಲ್ಲಿ ಕುಟುಂಬದ ನಾಲ್ವರನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಪೊಲೀಸರು ವಿಚಾರಣೆಯನ್ನು ತೀವ್ರಗೊಳಿಸಿದ್ದು ಕೊಲೆಯಾದ ಶಂಭು ಭಟ್ಟ ಅವರ ಹಿರಿಯ ಸೊಸೆ ವಿದ್ಯಾ ಶ್ರೀಧರ ಭಟ್ಟ ಹಾಗೂ ಆಕೆಯ ತಂದೆ ಶ್ರೀಧರ ಜನಾರ್ಧನ ಭಟ್ಟ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಕೊಲೆಗಾರ ಎಂದು ಸಂಶಯಿಸಲಾಗಿದ್ದ ವಿನಯ ಶ್ರೀಧರ ಭಟ್ಟ ಈತನ ಶೋಧ ಕಾರ್ಯಕ್ಕೆ ಮೂರು ತಂಡವನ್ನು ರಚಿಸಿದ್ದು ವಿವಿಧ ಕಡೆಗಳಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.
ಶಂಭು ವೆಂಕಟರಮಣ ಭಟ್ಟ ಇವರ ತಂದೆ ಪ್ರಸ್ತುತ ಕೇರಳಕ್ಕೆ ಸೇರಿದ ಕುಂಬ್ಳೆ ಕಾಸರಗೋಡಿನವರಾಗಿದ್ದು ಬಹಳ ವರ್ಷಗಳ ಹಿಂದೆ ಉದ್ಯೋಗವನ್ನರಸಿ ಭಟ್ಕಳಕ್ಕೆ ಬಂದಿದ್ದರು. ಆರಂಭದಲ್ಲಿ ಕೊಡುಕ್ಕಿ ಶಂಭುಲಿಂಗೇಶ್ವರ ದೇವರ ಪೂಜೆ ಮಾಡಿಕೊಂಡಿದ್ದ ಅವರು ನಂತರ ಕುಂಟವಾಣಿಯಲ್ಲಿ ಉಳಿದು ಬಂದಿದ್ದರು. ನಂತರ ಹಾಡುವಳ್ಳಿಯಲ್ಲಿ ಆಸ್ತಿ ಖರೀದಿ ಮಾಡಿ ಅಲ್ಲಿ ನೆಲೆಸಿದರು ಎನ್ನುವುದು ತಿಳಿದು ಬಂದಿದೆ.
ಶಂಭು ಭಟ್ಟರ ಹಿರಿಯ ಪುತ್ರ ಶ್ರೀಧರ ಶಂಭು ಭಟ್ಟ ಇವರು ಕಳೆದ ಕೆಲವು ಸಮಯದಿಂದ ಕಿಡ್ನಿ ವೈಫಲ್ಯಕ್ಕೊಳಗಾಗಿದ್ದು ಸುಮಾರು ಆರು ತಿಂಗಳ ಹಿಂದೆ ಡಯಾಲಿಸಿಸ್ ಮಾಡುತ್ತಿರುವಾಗಲೇ ಕೊನೆಯುಸಿರೆಳೆದಿದ್ದರು. ಅವರ ಮರಣದ ದಿನದಿಂದಲೇ ಆರಂಭವಾಗಿದ್ದ ಇವರ ಆಸ್ತಿ ಜಗಳ ನಾಲ್ವರನ್ನು ಬಲಿ ಪಡೆಯುವ ತನಕ ಬರುತ್ತದೆ ಎನ್ನುವುದನ್ನು ಯಾರೂ ಊಹಿಸಲಿಕ್ಕೂ ಸಾಧ್ಯವಿಲ್ಲ. ಹಿರಿಯ ಮಗ ಹಾಗೂ ಸೊಸೆ ಮೂಲ ಮನೆಯಲ್ಲಿಲ್ಲದೇ ತಮ್ಮ ಪೌರೋಹಿತ್ಯ ವೃತ್ತಿಗಾಗಿ ನಗರದಲ್ಲಿ ಮನೆ ಮಾಡಿಕೊಂಡಿದ್ದರು. ಮಗ ತೀರಿ ಹೋದ ನಂತರ ಸೊಸೆ ಇಲ್ಲಿಯೇ ಇದ್ದು ಆಕೆಯ ಸಹೋದರ ವಿನಯ ಈತನು ಆಗಾಗ ಹಾಡುವಳ್ಳಿಗೆ ಹೋಗಿ ಪಾಲು ಕೊಡುವಂತೆ ಜಗಳ ಮಾಡಿದ್ದರಿಂದ ಶಂಭು ಭಟ್ಟರು ಇಬ್ಬರು ಗಂಡು ಮಕ್ಕಳು, ಮೂವರು ಹೆಣ್ಣು ಮಕ್ಕಳು ಹಾಗೂ ತಾವು ಪತಿ-ಪತ್ನಿ ಹೀಗೆ ಆಸ್ತಿಯನ್ನು ಪಾಲು ಮಾಡಿ ಕೊಟ್ಟಿದ್ದರು.
ಶುಕ್ರವಾರ ಬೆಳಿಗ್ಗೆ ಕೊಟ್ಟಿಗೆ ಕಟ್ಟುತ್ತಿರುವ ಕುರಿತು ತಕರಾರು ಮಾಡಿದ್ದರೆನ್ನಲಾಗಿದೆ. ಬೆಳಿಗ್ಗೆಯಷ್ಟೇ ಕೊಟ್ಟಿಗೆ ವಿಚಾರವಾಗಿ ಜಗಳ ಆಗಿದ್ದು ಮಧ್ಯಾಹ್ನ ಈ ಬರ್ಬರ ಕೃತ್ಯ ನಡೆದು ಹೋಗಿದೆ. ಈಗಾಗಲೇ ದೂರು ನೀಡಿದಂತೆ ಹಿರಿಯ ಸೊಸೆ ವಿದ್ಯಾ ಹಾಗೂ ಆಕೆಯ ತಂದೆ ಶ್ರೀಧರ ಇವರ ಕುಮ್ಮಕ್ಕಿನಿಂದ ವಿನಯ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಅನಾಥರಾದ ಮಕ್ಕಳು: ಕುಟುಂಬದಲ್ಲಿ ಇದ್ದ ಹಿರಿಯರಾದ ಅಜ್ಜ, ಅಜ್ಜಿಯರನ್ನು ಹಾಗೂ ತಂದೆ-ತಾಯಿಯರನ್ನು ಕಳೆದುಕೊಂಡ ಇಬ್ಬರು ಮಕ್ಕಳು ಅನಾಥರಾಗಿದ್ದು ಮುಂದಿನ ಅವರ ಭವಿಷ್ಯವೇನು ಎನ್ನುವ ಚಿಂತೆ ಎಲ್ಲರನ್ನು ಕಾಡುತ್ತಿದೆ. ರಾಘು ಭಟ್ಟ ಅವರ ನಾಲ್ಕೂವರೆ ವರ್ಷದ ಮಗಳು ಹಾಗೂ ಒಂದೂವರೆ ವರ್ಷದ ಮಗ ಅಳುತ್ತಿರುವ ದೃಶ್ಯ ಇಡೀ ಊರಿಗೆ ಊರೇ ಮರುಗುವಂತೆ ಮಾಡಿದೆ. ಕೊಲೆಯಾದ ಸಮಯಕ್ಕೆ ಮನೆಯೊಳಗೆ ಮಲಗಿದ್ದ ಪುಟ್ಟ ಮಗು ನಂತರ ಹೊರ ಬಂದು ಅಳುತ್ತಿರುವಾಗ ಅದನ್ನು ಸಂತೈಸುವವರೇ ಇಲ್ಲವಾಗಿತ್ತು.
ಕೊಲೆಯಲ್ಲಿ ಸಂಚಿದೆಯೇ: ಕೊಲೆಯಾದ ಸನ್ನಿವೇಶ ನೋಡಿದರೆ ಹಾಗೂ ಪರಿಸ್ಥಿತಿಯನ್ನು ಅವಲೋಕಿಸಿದರೆ ಕೊಲೆಯನ್ನು ಒಬ್ಬನೇ ಮಾಡಿದನೇ ಎನ್ನುವ ಸಂಶಯ ಕೂಡಾ ಮೂಡಿಸುತ್ತದೆ. ನಾಲ್ವರನ್ನು ಕೊಚ್ಚಿದ ರೀತಿ ಒಂದೇ ತೆರನಾಗಿದ್ದು ತಲೆಯ ಹಿಂಬಾಗ, ಮುಖ, ತಲೆಯನ್ನು ಕಡಿದಿದ್ದು ಬೇರೆ ಎಲ್ಲಿಯೂ ಯಾವುದೇ ತರದ ಗಾಯ ಇರಲಿಲ್ಲ ಎನ್ನುವುದನ್ನು ನೋಡಿದರೆ ಕೊಲೆಗಾರ ವೃತ್ತಿಪರರ ಸಹಾಯ ಪಡೆದಿದ್ದನೇ ಇಲ್ಲ ಒಬ್ಬನೇ ಬಂದು ಕೊಲೆ ಮಾಡಿದ್ದಾನೆಯೇ ಎನ್ನುವ ಕುರಿತು ತನಿಖೆಯಾಗಬೇಕಾಗಿದೆ.