Advertisement

ಹಾಯ್ ಫ್ರೆಂಡ್ಸ್,ನಾನು ಸುದರ್ಶನ್ ಭಟ್ ಬೆದ್ರಡಿ,ವೆಲ್ ಕಮ್ ಟು Bhat’n’Bhatಯೂಟ್ಯೂಬ್ ಚಾನೆಲ್

09:52 PM Jul 11, 2021 | Team Udayavani |

ನ್ಯಾಯಾಲಯದ ಕಟಕಟೆಯ ಎದುರು ನಿಂತು ವಾದ ವಿವಾದಿಸುವುದಕ್ಕೆ ಸಿದ್ಧವಾಗಿರುವ ಅಣ್ಣ ತಮ್ಮಂದಿರುವ ಅಡುಗೆ ಮಾಡಿ ಇಡೀ ಜಗತ್ತಿಗೆ ಉಣ ಬಡಿಸುತ್ತಿರುವ ಸುದರ್ಶನ್ ಭಟ್ ಬೆದ್ರಡಿ ಹಾಗೂ ಮನೋಹರ್ ಭಟ್ ಬೆದ್ರಡಿ ನಿಮ್ಮ ಉದಯವಾಣಿ ಡಾಟ್ ಕಾಮ್ ನ ‘ತೆರೆದಿದೆ ಮನೆ ಬಾ ಅತಿಥಿ’ ವಿಶೇಷ ಸಂದರ್ಶನ ಕಾರ್ಯ ಕ್ರಮದಲ್ಲಿ ಮಾತನಾಡಿದ್ದಾರೆ.

Advertisement

ತಲೆಗೊಂದು ಬಣ್ಣ ಮಾಸಿದ ಕೇಸರಿ ಶಾಲು ಕಟ್ಟಿಕೊಂಡು ನಗು ನಗುತ್ತಾ ತಲೆ ಅಲ್ಲಾಡಿಸುತ್ತಾ… “ಹಾಯ್ ಫ್ರೆಂಡ್ಸ್.. ನಾನು ಸುದರ್ಶನ್ ಭಟ್ ಬೆದ್ರಡಿ, ವೆಲ್ ಕಮ್ ಟು ಭಟ್ ಎನ್ ಭಟ್ ಯೂಟ್ಯೂಬ್ ಚಾನೆಲ್” ಎಂದು ಅಡುಗೆ ಮನೆಗೆ ಕರೆದುಕೊಂಡು ಹೋಗಿ ವಿಧ ವಿಧದ ಅಡುಗೆ ಮಾಡಿ ಕಲಿಸುವ ಈ ಸಹೋದರರ ಅನ್ಯೋನ್ಯತೆ ಎಲ್ಲರಿಗೂ ಇಷ್ಟವಾಗಲೇ ಬೇಕು.

ತೆರೆಯ ಮುಂದೆ ಸುದರ್ಶನ್ ಭಟ್, ತೆಳ್ಳಗೆ, ಸಾದಾ ಬೆಳ್ಳಗೆ, ಲುಂಗಿ, ಟೀ ಶರ್ಟ್ ಹಾಕಿಕೊಂಡು ಅಡುಗೆ ಮಾಡುವುದಕ್ಕೆ ಕೂತುಕೊಂಡ್ರೆ ಅಡುಗೆ ಆಗಿ ಅದು ಸವಿಯುವುದಕ್ಕೆ ತಯಾರಾಗುವ ತನಕ ಕೂತು ನೋಡಬೇಕು. ಅಂದರೇ, ಅವರ ಪ್ರಸ್ತುತಿ ಅಷ್ಟು ಚೆಂದ.

ಇದನ್ನೂ ಓದಿ : ಜನಸಂಖ್ಯೆ ಹೆಚ್ಚಳವು ದೇಶದ ಅಭಿವೃದ್ಧಿಗೆ ಮಾರಕ, ನಿಯಂತ್ರಿಸಬೇಕಾದ ಅಗತ್ಯವಿದೆ : ಯೋಗಿ

ಅಡುಗೆ ಭಟ್ಟರ ಮನೆತನದ ಹಿನ್ನೆಲೆ ಇಲ್ಲದ ಈ ಅವಳಿ ಸಹೋದರರು ಎಳವೆಯ ಬದುಕು ಕಂಡಿದ್ದು, ಆಶ್ರಮದಲ್ಲಿ. ತಂದೆ ವೈದಿಕರು, ತಾಯಿ ಮನೆಯಲ್ಲೆ ಸಂಡಿಗೆ, ಹಪ್ಪಳ ಮಾಡಿ ಮಾರಾಟ ಮಾಡಿ ಜೀವನ ಸಾಗುತ್ತಿರುವ ಮಹಿಳೆ. ಸಾಮಾನ್ಯ ಕುಟುಂಬದ ಹಿನ್ನೆಲೆಯಲ್ಲಿ ಬಂದ ಈ ಸಹೋದರರ ಜೋಡಿ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸೇಶನ್ ಸೆಲೆಬ್ರಿಟಿಗಳು.

Advertisement

ಬಾಳೆ ಕಾಯಿ ಚಿಪ್ಸ್ ನಿಂದ ಆರಂಭಿಸಿದ ಈ ಪಯಣ ಈಗ ಸುಮಾರು 163 ವಿಶೇಷ ಅಡುಗೆ ಮಾಡಿ ತೋರಿಸಿದ್ದಾರೆ. ಅಡುಗೆಗೆ ಎಲ್ಲಾ ತಯಾರಿ ಮಾಡಿಟ್ಟುಕೊಂಡು, ಬಾಣಲಿಗೆ ಎಣ್ಣೆ ಹಾಕಿ, ಬೇವಿನ ಸೊಪ್ಪು ಹಾಕಿ, ಒಗ್ಗರಣೆ ಮಾಡಿಕೊಳ್ಳಿ…ಹೀಗೆಲ್ಲದರೊಂದಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಅಂತ ಹೇಳಿಕೊಡುವ ಐಶಾರಾಮಿ ಅಡುಗೆ ಮನೆಯೊಳಗೆ, ಐಶಾರಾಮಿ ಬಟ್ಟೆಗಳನ್ನು ಹಾಕಿಕೊಂಡು ಕ್ಯಾಮೆರಾಗೆ ಪೋಸ್ ಕೊಡುವ ಅಡುಗೆ ಮಾಸ್ಟರ್ ಸುದರ್ಶನ್ ಭಟ್ ಅಲ್ಲ. ಸುದರ್ಶನ್ ಭಟ್ “ಪಕ್ಕಾ ಲೋಕಲ್” ಎನ್ನುವುದಕ್ಕೆ ಅನ್ವರ್ಥ ನಾಮ ಅಂತ ಹೇಳಿದರೇ ತಪ್ಪಿಲ್ಲ.

ತರಕಾರಿ ತೊಳೆಯುವುದರಿಂದ ಹಿಡಿದು, ಕೊಯ್ಯವುದು (ಸುದರ್ಶನ್ ಭಾಷೆಯಲ್ಲಿ ಕೊರೆಯುವುದು) ಹೀಗೆ.. ಕೇವಲ ಅಡುಗೆ ಅಷ್ಟೇ ಅಲ್ಲ ಅಡುಗೆಯ ಹಿಂದಿನ ಪ್ರಯತ್ನವನ್ನೂ ತೋರಿಸುವುದಿಂದ ‘ಭಟ್ ಎನ್ ಭಟ್’  ಹಾಗೂ ಸುದರ್ಶನ್ ಭಟ್ ಇಷ್ಟು ಫೇಮಸ್ ಆಗಿದ್ದು ಎನ್ನುವುದರಲ್ಲಿ ಅನುಮಾನ ಇಲ್ಲ.

(ಬೆದ್ರಡಿ ಸಹೋದರರು)

ನಮಗೆ ಚಾನೆಲ್ ಮಾಡುವ ಆಲೋಚನೆ ಇರಲಿಲ್ಲ : ಸುದರ್ಶನ್

ಸಮಯ ಸಿಕ್ಕಲ್ಲೆಲ್ಲಾ ಅಡುಗೆಗೆ ಹೋಗಿ ಸಂಪಾದನೆ ಮಾಡುತ್ತಿದ್ದೆವು.  ಅದರಲ್ಲಿ ದುಡಿದ ಹಣದಿಂದ ಕ್ಯಾಮೆರಾ ತೆಗೆದುಕೊಂಡು ಶಾರ್ಟ್ ಫಿಲ್ಮ್ ಎಲ್ಲಾ ಮಾಡುವ ಹವ್ಯಾಸ ರೂಢಿಸಿಕೊಂಡಿದ್ದು. ಮೊಬೈಲ್ ನಲ್ಲಿಯೇ ಆರಂಭದಲ್ಲಿ ಶಾರ್ಟ್ ಫಿಲ್ಮ್ ಗಳನ್ನೆಲ್ಲಾ ಮಾಡ್ತಿದ್ದೆವು. ನಂತರ ಸ್ನೇಹಿತರೆಲ್ಲಾ ಸಪೋರ್ಟ್ ಮಾಡಿದರು. ನಂತರ ಇಂತಹದ್ದೊಂದು ಆಲೋಚನೆ ಬಂದಿದ್ದು, ಒಂದೊಂದಾಗಿ ಆರಂಭಿಸಿದ್ವಿ, ಇಷ್ಟರ ಮಟ್ಟಿಗೆ ಎಂದೂ ನಿರೀಕ್ಷಿಸಿರಲಿಲ್ಲ. ಜನರ ಸಹಕಾರ ನಮಗೆ ತುಂಬಾ ಚೆನ್ನಾಗಿ ದೊರಕಿತು. ನಮ್ಮ ಒಂದು ಸಣ್ಣ ಪ್ರಯತ್ನವನ್ನು ಉದಯವಾಣಿ ಗುರುತಿಸಿದೆ.  ನಮ್ಮ ಮೊದಲ ಸಂದರ್ಶನ ಉದಯವಾಣಿಯಲ್ಲಿ ಆಗಿದ್ದು ಎನ್ನುವುದಕ್ಕೆ ಖುಷಿಯಾಗುತ್ತದೆ ಎನ್ನುತ್ತಾರೆ ಅದೇ… ಹಾಗೇ ಥೇಟ್ ಬಟ್ಟೆ ಅಂಗಡಿಯ ಮುಂದೆ ನಿಂತು ಸ್ವಾಗತಿಸುವ ಹೆಣ್ಣು ಗೊಂಬೆ ಅಂತೆಯೇ ತಲೆ ಅಲ್ಲಾಡಿಸುತ್ತಾ ಮಾತಾಡುವ ಸುದರ್ಶನ್.

ಎಡಿಟಿಂಗ್ ನ್ಯಾಚುರಲ್ ಆಗಿ ಇರಬೇಕೆನ್ನುವುದೇ ಇಷ್ಟ : ಮನೋಹರ್

ನಮಗೆ ಹಳ್ಳಿ ಪರಿಸರ ಅಂದರೇ ತುಂಬಾ ಇಷ್ಟ. ನಮ್ಮ ಎಲ್ಲಾ ವಿಡೀಯೋಗಳನ್ನು ನ್ಯಾಚುರಲ್ ಆಗಿಯೇ ಮಾಡುವುದಕ್ಕೆ ಇಷ್ಟ ಪಡ್ತೇವೆ. ಎಡಿಟಿಂಗ್ ಮಾಡುವಾಗ ಯಾವುದೇ ರೀತಿಯ ಬ್ಯಾಗ್ರೌಂಡ್ ಮ್ಯೂಸಿಕ್ ಬಳಸುವುದಿಲ್ಲ. ಸಾಧ್ಯವಾದಷ್ಟು ನ್ಯಾಚುರಲ್ ಆಗಿಯೇ ಇರಲಿ ಎನ್ನುವ ಹಾಗೆ ನಾವು ಪಯತ್ನಿಸುತ್ತೇವೆ ಎನ್ನುತ್ತಾರೆ ಸುದರ್ಶನ್ ಸಹೋದರ ಮನೋಹರ್.

ಯೂಟ್ಯೂಬ್ ಚಾನೆಲ್ ನನ್ನು ಫುಲ್ ಟೈಮ್ ಆಗಿ ತೆಗೆದುಕೊಳ್ಳಬೇಡಿ. ನಿಮ್ಮ ಆದಾಯ ಒಂದು ಹಂತದ ಮಟ್ಟಿಗೆ ಬರುವ ತನಕ ಇಂತಹ ಆಲೋಚನೆ ಮಾಡದೇ ಇರುವುದು ಒಳ್ಳೆಯದು. ಹವ್ಯಾಸಕ್ಕಾಗಿ ಮಾಡಿ ಎನ್ನುತ್ತಾರೆ ಅವಳಿ ಬೆದ್ರಡಿ ಸಹೋದದರು.

ದುಬೈ, ಇಂಗ್ಲೆಂಡ್, ನೈಜೀರಿಯಾದಂತಹ ವಿದೇಶಗಳನ್ನೂ ಒಳಗೊಂಡು ಕೇವಲ 24 ಗಂಟೆಯಲ್ಲಿ ಉದಯವಾಣಿಯ ಈ ಸಂದರ್ಶನವನ್ನು 3 ಲಕ್ಷಕ್ಕೂ ಮಂದಿ ವೀಕ್ಷಿಸಿದ್ದಾರೆ ಎಂದರೆ, ಸುದರ್ಶನ್ ಭಟ್ರು ಯಾವ ಸೆಲೆಬ್ರಿಟಿಗೂ ಕಡಿಮೆ ಅಲ್ಲ ಎನ್ನವುದಕ್ಕೆ ಸಾಕ್ಷಿ.

ಒಟ್ಟಿನಲ್ಲಿ, ಈ ಕಿರಿ ವಯಸ್ಸಿನಲ್ಲೇ ವಿಶೇಷ ಹವ್ಯಾಸದೊಂದಿಗೆ, ಅಭ್ಯಾಸದೊಂದಿಗೆ ಜನಪ್ರೀತಿ ಗಳಿಸುತ್ತಿರುವ ಬೆದ್ರಡಿ ಸಹೋದರರಿಗೆ ಭವಿಷ್ಯ ಇನ್ನಷ್ಟು ಚೆನ್ನಾಗಿ ಒದಗಿ ಬರಲಿ ಎಂದು ತುಂಬು ಪ್ರೀತಿಯಿಂದ ಹಾರೈಸುತ್ತಿದೆ ಉದಯವಾಣಿ.

ಇದನ್ನೂ ಓದಿ : ಯೂಥ್‌ ಕ್ಯಾನ್‌ ಲೀಡ್‌ ಅಭಿಯಾನಕ್ಕೆ ಸಂಸದ ತೇಜಸ್ವೀ ಸೂರ್ಯ ಚಾಲನೆ

Advertisement

Udayavani is now on Telegram. Click here to join our channel and stay updated with the latest news.

Next