Advertisement

ಭಟ್‌ ಮನೆಯಲ್ಲಿ ಗೆಲುವಿನ ಸಂಭ್ರಮಾಚರಣೆ

07:30 AM May 16, 2018 | |

ಉಡುಪಿ: ಉಡುಪಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೆ. ರಘುಪತಿ ಭಟ್‌ ಗೆಲ್ಲುತ್ತಿರುವ ಸಂಕೇತ ದೊರಕುತ್ತಿದ್ದಂತೆ ಕರಂಬಳ್ಳಿಯಲ್ಲಿರುವ ಅವರ ಮನೆಯಲ್ಲಿ ಗೆಲುವಿನ ಸಂಭ್ರಮ ಕಳೆಕಟ್ಟಿತು.  

Advertisement

ಗೆಲುವಿನ ಲೆಕ್ಕಾಚಾರ
ಭಟ್‌ ಅವರು ಬೆಳಗ್ಗೆ 7.15ಕ್ಕೆ ಮನೆಯಿಂದ ಮತ ಎಣಿಕೆ ಕೇಂದ್ರಕ್ಕೆ ನಡೆದ ಅನಂತರ ಮನೆಯವರ ಮುಖದಲ್ಲಿ ಸುಮಾರು 11.30ರ ವರೆಗೂ ಕೊಂಚ ಗೊಂದಲವಿತ್ತು. ಆನಂತರ ಮುಖಭಾವ ಬದಲಾವಣೆಗೊಳ್ಳುತ್ತಾ ಬಂದು, ಖುಷಿ ಇಮ್ಮಡಿಯಾಯಿತು. ತಾಯಿ ಸರಸ್ವತಿಯಮ್ಮ ಎಂದಿನಂತೆ ಮಡಿಯಲ್ಲಿ ದೇವರ ಪೂಜೆ ಪೂರೈಸಿ ಬಹು ಹೊತ್ತು ಟಿವಿ ಮುಂದೆ ಬಂದು ನಿಂತೇ ಇದ್ದರು. ಭಟ್‌ರ ಅಣ್ಣ ರಮೇಶ ಬಾರಿತ್ತಾಯರು ಬೆಳಗ್ಗಿನ ಪೂಜೆ ಪೂರೈಸಿ ಟಿವಿ ಎದುರು ಕುಳಿತು ಲೆಕ್ಕಾಚಾರದಲ್ಲಿ ತೊಡಗಿಕೊಂಡರು. ಅತ್ತಿಗೆ ಜಯಶ್ರೀ ಬಾರಿತ್ತಾಯರು ತರಕಾರಿ ಹಚ್ಚುವ ಕೆಲಸವನ್ನೂ ಟಿವಿ ಮುಂದೆ ಕುಳಿತೇ ಮಾಡುತ್ತಿದ್ದರು. ತಾಯಿ ಬೆಳಗ್ಗಿನ ಉಪಾಹಾರ ಪೂರೈಸಿ ಟಿವಿ ಮುಂದೆ ಕುಳಿತವರು ಮತ್ತೆ ಎದ್ದದ್ದು ಮಗನ ಗೆಲುವಿನ ವಾರ್ತೆ ಬಂದಾಗಲೇ.

ಬಾಲಕನ “ಜೈ ಬಿಜೆಪಿ’ ಘೋಷಣೆ!
ಟಿವಿ ಚಾನೆಲ್‌ ಪದೇ ಪದೇ ಬದಲಾಯಿಸಲಾಗುತ್ತಿತ್ತು. ಟಿವಿ ಸೌಂಡ್‌ ಜೋರಾಗಿಯೇ ಇತ್ತು. ಬಿಜೆಪಿ ಮುನ್ನಡೆ ಬಂದಾಗ ಖುಷಿಯಾಗುತ್ತಿದ್ದರೆ, ಹಿನ್ನಡೆ ಎಂದಾಗ ಮುಖ ಬಾಡುತ್ತಿತ್ತು. ಭಟ್‌ರ ವಾಹನ ಚಾಲಕ ರೂಪೇಶ್‌ ಬಹುತೇಕ ಮೊಬೈಲ್‌ನಲ್ಲಿ ಮಾಹಿತಿ ರವಾನಿಸುತ್ತಲೇ ಇದ್ದರು. ಭಟ್‌ರ ಮಕ್ಕಳಾದ ರೋಹನ್‌, ರಾಹುಲ್‌, ಭಟ್‌ರ ಅಣ್ಣನ ಮಗ ರಾಕೇಶ್‌ ಟಿವಿ ವೀಕ್ಷಿಸುತ್ತಿದ್ದರೆ, 7 ವರ್ಷದ ರಿಯಾನ್ಸ್‌ ಮಾತ್ರ ಯಾವುದೇ ಅರಿವಿಲ್ಲದೆ ತುಂಟಾಟ ಮಾಡುತ್ತಿದ್ದ. ಆದರೂ ಆತ ಮಧ್ಯೆ ಮಧ್ಯೆ “ಜೈ ಬಿಜೆಪಿ’ ಎಂದು ಬೊಬ್ಬಿಡುತ್ತಿದ್ದ. ಎಸ್‌ಐ ಸೇರಿದಂತೆ ಓರ್ವ ಆರಕ್ಷಕ ಸಿಬಂದಿಯೂ ಭಟ್‌ರ ಮನೆಯಲ್ಲಿದ್ದು, ಕುತೂಹಲಿಗಳಾಗಿದ್ದರು. ಭಟ್‌ರ ಪತ್ನಿ ಶಿಲ್ಪಾ ಆರ್‌. ಭಟ್‌ ಅವರಿಗೆ ಜ್ವರವಿದ್ದ ಕಾರಣ ಅವರು ತವರು ಮನೆಗೆ ತೆರಳಿದ್ದರು. 

ಹರಕೆ ಫ‌ಲಿಸಿತು
ನಾಮಪತ್ರ ಸಲ್ಲಿಸುವ ದಿನ ಭಟ್‌ರ ಪುತ್ರ ಮತ್ತು ಅಭಿಮಾನಿ ಲಕ್ಷ್ಮೀನಾರಾಯಣರ ಪುತ್ರ ಪ್ರಣವ್‌ ಕಟೀಲು ದೇಗುಲದಲ್ಲಿ ಹರಕೆ ಹೊತ್ತಿದ್ದರು. ಇದೀಗ ಮನೆಯಲ್ಲಿದ್ದ ಅವರು ನಮ್ಮ ಹರಕೆ ಫ‌ಲಿಸಿತು ಎಂದು ಕುಪ್ಪಳಿಸಿದರು.

ಗೆಲುವಿನ ಸಂಭ್ರಮ
ಗೆದ್ದರೆಂದು ಖಾತರಿಯಾದಾಗ ಭಟ್ಟರ ಅತ್ತಿಗೆ ಮನೆ ಮಂದಿಗೆಲ್ಲ ಸಿಹಿ ತಿಂಡಿ ವಿತರಿಸಿದರು. ಅಣ್ಣ ಮತ್ತೆ ದೇವರಿಗೆ ನಮಸ್ಕರಿಸಿದರು.  “ಜೈ ಬಿಜೆಪಿ’ ಎಂದು ಬೊಬ್ಬಿಡುತ್ತ, ಹರ್ಷ ವ್ಯಕ್ತಪಡಿಸಿದರು.ಭಟ್‌ರ ತಾಯಿ, ಅಭಿಮಾನಿಗಳು ಭಟ್‌ರನ್ನು ಕಾಣಲು ಉಡುಪಿಯತ್ತ ತೆರಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next