ಶ್ರೀನಗರ: ಒಡೆದ ಮನಸ್ಸುಗಳನ್ನು ಒಂದುಗೂಡಿಸಲು ಹಾಗೂ ದೇಶದ ಜ್ವಲಂತ ಸಮಸ್ಯೆಗಳ ಕುರಿತು ಜನಪರ ಧ್ವನಿ ಎತ್ತಲು ರಾಹುಲ್ ಗಾಂಧಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾದ ಐತಿಹಾಸಿಕ ಭಾರತ ಜೋಡೋ ಯಾತ್ರೆ ಸೋಮವಾರ ಸಂಪೂರ್ಣವಾಗುತ್ತಿದೆ.
ಕಳೆದ ಐದು ತಿಂಗಳಿಂದ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸುದೀರ್ಘ 3570 ಕಿ.ಮೀ. ಸಾಗಿದ ಈ ಯಾತ್ರೆ ದೇಶದ ಇತಿಹಾಸದ ಪುಟ ಸೇರಿದೆ. ಹೊಸ ಮೈಲುಗಲ್ಲು ಸೃಷ್ಟಿಸಿದೆ.
ವಿಭಿನ್ನ ಹವಾಮಾನಗಳ ವೈಪರಿತ್ಯ ಸವಾಲು, ರಾಜಕೀಯ ಎದುರಾಳಿಗಳ ಟೀಕೆ, ಷಡ್ಯಂತ್ರ, ಅಪಪ್ರಚಾರ ಸೇರಿದಂತೆ ಎಲ್ಲ ಅಡೆತಡೆಗಳನ್ನು ಮೀರಿ ಯಾತ್ರೆ ತನ್ನ ಗುರಿ ತಲುಪಿದೆ. ಇದು ಕಾಂಗ್ರೆಸ್ ಹಾಗೂ ಪಕ್ಷದ ನಾಯಕರಿಗೆ ದೇಶದ ಬಗ್ಗೆ ಇರುವ ಕಾಳಜಿ, ಬದ್ಧತೆಗೆ ಸಾಕ್ಷಿ.
ಇಂದು (ಜ.30) ಕಾಶ್ಮೀರದಲ್ಲಿ ಭಾರತ ಜೋಡೋ ಯಾತ್ರೆ ಸಮಾರೋಪ ಸಮಾರಂಭ ನಡೆಯುತ್ತಿದ್ದು, ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೇರಿದಂತೆ ಪ್ರಮುಖ ನಾಯಕರು ಕಣಿವೆ ರಾಜ್ಯಕ್ಕೆ ತೆರಳಿದ್ದಾರೆ.
Related Articles
ಈ ಸಂದರ್ಭದಲ್ಲಿ ಕಾಶ್ಮೀರದ ಹಿಮಪಾತ ಹಾಗೂ ಪ್ರಕೃತಿ ಸೌಂದರ್ಯಕ್ಕೆ ಮನಸೋತಿರುವ ಡಿ.ಕೆ. ಶಿವಕುಮಾರ್ ಅವರು ವಿಡಿಯೋ ಮೂಲಕ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘ಭಾರತ ಜೋಡೋ ಯಾತ್ರೆ ಅಂತಿಮ ದಿನ ನಾವೆಲ್ಲ ಕಾಶ್ಮೀರದ ಶ್ರೀನಗರಕ್ಕೆ ಆಗಮಿಸಿದ್ದೇವೆ. ಯಾತ್ರೆ ರುವಾರಿ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರ ಜತೆ ಊಟ ಮುಗಿಸಿ ನಮ್ಮ ಕೊಣೆಗೆ ಬಂದು ಮಲಗುವಷ್ಟರಲ್ಲಿ ರಾತ್ರಿ 1 ಗಂಟೆ ಆಗಿತ್ತು. ರಾತ್ರಿ ಇಲ್ಲಿನ ಹವಾಮಾನ 9° ಸೆಲ್ಸಿಯಸ್ ಇತ್ತು. ಇಂದು ಬೆಳಗ್ಗೆ ಕೊಠಡಿಯ ಹೊರಗೆ ಬಂದು ನೋಡಿದಾಗ ನನ್ನ ಜೀವನದಲ್ಲಿ ಎಂದೂ ನೋಡಿರದ ಹಿಮಪಾತ ಹಾಗೂ ಅದರ ಸೌಂದರ್ಯ ಮನಸೂರೆಗೊಂಡಿದೆ. ಧಾರಾಕಾರ ಮಳೆಯಂತೆ ಹಿಮ ಸುರಿಯುತ್ತಿದೆ. ಹಿಂದೆಂದೂ ನಾನು ಈ ರೀತಿಯ ಅದ್ಭುತ ದೃಶ್ಯ ಕಂಡಿರಲಿಲ್ಲ. ನಾನು ಈ ಹಿಂದೆ ಸ್ವಿಜರ್ಲೆಂಡ್ ಮತ್ತಿತರ ದೇಶಗಳಿಗೆ ಭೇಟಿ ನೀಡಿದ್ದೇನೆ. ಆದರೆ ಇಂದು ನನಗೆ ಆಗಿರುವ ಪ್ರಕೃತಿ ಸೌಂದರ್ಯದ ಅನುಭವ ಹಿಂದೆಂದೂ ಆಗಿರಲಿಲ್ಲ. ಇದನ್ನು ಮರೆಯಲು ಸಾಧ್ಯವಿಲ್ಲ’ ಎಂದು ಶಿವಕುಮಾರ್ ಅವರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.