ಕಾರ್ಕಳ: ಕೇಂದ್ರ ಸರಕಾರದ ಕಾರ್ಮಿಕ ಕಾನೂನು, ಖಾಸಗೀಕರಣ ನೀತಿ ವಿರೋಧಿಸಿ ಹಾಗೂ ಕಾರ್ಮಿಕರ 18 ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕೇಂದ್ರ ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಮುಷ್ಕರಕ್ಕೆ ಕಾರ್ಕಳ ತಾಲೂಕಿನಲ್ಲಿ ಯಾವುದೇ ಪರಿಣಾಮ ಬೀರಿಲ್ಲ.
ಖಾಸಗಿ ಮತ್ತು ಸರಕಾರಿ ಬಸ್ ಸಂಚಾರದಲ್ಲಿ ಯಾವೊಂದು ವ್ಯತ್ಯಯವಾಗಿಲ್ಲ. ಶಾಲಾ ಕಾಲೇಜು, ಅಂಗಡಿ ಮುಂಗಟ್ಟು, ಸಿನಿಮಾ ಥಿಯೇಟರು ಕಾರ್ಕಳದಲ್ಲಿ ಎಂದಿನಂತೆ ಕಾರ್ಯನಿರ್ವಹಿಸುತ್ತಿತ್ತು. ಕೆಲವೊಂದು ಆಟೋ ಚಾಲಕರು ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾಗ್ಯೂ ತಮ್ಮ ಸೇವೆಯನ್ನು ಸ್ಥಗಿತಗೊಳಿಸಿಲ್ಲ. ಆದರೆ ಕೆಲವೊಂದು ಬ್ಯಾಂಕ್‌ಗಳು ಮುಷ್ಕರಕ್ಕೆ ಬೆಂಬಲ ನೀಡಿ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಕಾರ್ಕಳದಲ್ಲಿ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ವತಿಯಿಂದ ನಗರದ ಬಸ್ ನಿಲ್ದಾಣದಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕೇಂದ್ರ ಸರಕಾರ ಕರಾವಳಿಯ ಪ್ರಮುಖ ಬ್ಯಾಂಕ್‌ಗಳನ್ನು ವಿಲೀನಗೊಳಿಸುವ ಮೂಲಕ ಕರಾವಳಿಗೆ ಅನ್ಯಾಯವೆಸಗಿದೆ. ಈ ಬ್ಯಾಂಕ್‌ಗಳು ಮುಂದಿನ ದಿನಗಳಲ್ಲಿ ಅಂಬಾನಿ, ಅದಾನಿ ಪಾಲಾಗುವ ಆತಂಕವಿದೆ ಎಂದರು.
ಬಸ್ ನೌಕರರು, ಆಟೋ ಚಾಲಕರು ಸೇರಿದಂತೆ ಅಸಂಘಟಿತ ಕಾರ್ಮಿಕರ ಹಿತ ಕಾಪಾಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ನಿರ್ಲಕ್ಷ್ಯ ವಹಿಸುತ್ತಿವೆ. ಭವಿಷ್ಯ ನಿಧಿ ಪಿಂಚಣಿ ಜಾರಿ, ಡಾ| ಸ್ವಾಮಿನಾಥನ್ ಶಿಫಾರಸ್ಸಿನಂತೆ ಕೃಷಿ ಉತ್ಪನ್ನಗಳಿಗೆ ಸೂಕ್ತ ಬೆಂಬಲ ಬೆಲೆ ನಿಗದಿ, ಗುತ್ತಿಗೆ ಪದ್ಧತಿಯ ರದ್ಧತಿಯೊಂದಿಗೆ ನೌಕರರ ಖಾಯಂಗೊಳಿಸಬೇಕೆಂದು ಆಗ್ರಹಿಸಿದ ಬಾಲಕೃಷ್ಣ ಶೆಟ್ಟಿ ಅವರು ಕೇವಲ ಪಾಕಸ್ತಾನವನ್ನು ತೆಗಳಿದರೆ ದೇಶಪ್ರೇಮವಲ್ಲ. ಆಡಳಿತ ನಡೆಸುವವರು ದೇಶದ ಕುರಿತಾಗಿ ಕಾಳಜಿ ಹೊಂದುವುದೂ ದೇಶಪ್ರೇಮವೆಂದರು.
ತಾಲೂಕು ಸಿಐಟಿಯು ಸಮಿತಿ ಸದಸ್ಯ ನಾಗೇಶ್ ಮಾತನಾಡಿ, ಆರ್ಥಿಕ ಹಿಂಜರಿತ, ಕುಸಿಯುತ್ತಿರುವ ಜಿಡಿಪಿ, ನಿರುದ್ಯೋಗ ಸಮಸ್ಯೆ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಯಾವೊಂದು ಕ್ರಮ ಕೈಗೊಂಡಿಲ್ಲ. ರಾಷ್ಟ್ರೀಯ ಸಮಾನ ಕನಿಷ್ಠ ವೇತನ ರೂ. 21,000 ನಿಗದಿಗೊಳಿಸಬೇಕು. ರೈಲ್ವೆ , ಬ್ಯಾಂಕ್, ವಿಮೆ ಮೊದಲಾದ ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣವನ್ನು ಸ್ಥಗಿತಗೊಳಿಸಬೇಕೆಂದು ಒತ್ತಾಯಿಸಿದರು.
5 ಸಾವಿರ ನೀಡಿ
ಬಿಸಿಯೂಟ ನೌಕರರ ಸಂಘದ ಅಧ್ಯಕ್ಷೆ ಬೇಬಿ ಭಂಡಾರಿ ಮಾತನಾಡಿ, ಕಳೆದ 3 ವರ್ಷಗಳಿಂದ ನಮಗೆ ವೇತನದಲ್ಲಿ ಕೇವಲ 500 ರೂ. ಹೆಚ್ಚಳ ಮಾಡಲಾಗಿದೆ. ಇದೀಗ ನಮಗೆ ದೊರೆಯುವ 2600ರಲ್ಲಿ ನಮ್ಮ ಜೀವನ ಸಾಗಿಸುವುದು ಕಷ್ಟಕರ. ಹೀಗಾಗಿ ಕನಿಷ್ಠ 5 ಸಾವಿರ ರೂ. ವೇತನ ಕೊಡಬೇಕೆಂದು ಆಗ್ರಹಿಸಿದರು. ಲೆಮಿನಾ ಕಾರ್ಮಿಕ ಸಂಘದ ಅಧ್ಯಕ್ಷ ದಿನೇಶ್ ಪೂಜಾರಿ, ಬೀಡಿ ಕಾರ್ಮಿಕರ ಸಂಘದ ಅಧ್ಯಕ್ಷೆ ಸುನಿತಾ ಶೆಟ್ಟಿ, ಸಿಐಟಿಯು ತಾಲೂಕು ಸಂಚಾಲಕ ಶೇಖರ್ ಕುಲಾಲ್ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. ನಾಗೇಶ್ ನಿರ್ವಹಿಸಿದರು.