ಯುವ ಕಲಾವಿದೆ ವಿ| ಅಯನಾ ಪೆರ್ಲ ಅವರ ಭರತನಾಟ್ಯ ಪ್ರದರ್ಶನ “ವರ್ಷವೈಭವ’ ಎಂಬ ಹೆಸರಿನಲ್ಲಿ ಜು.23ರಂದು ಕಾಂತಾವರದಲ್ಲಿ “ಪುಸ್ತಕೋತ್ಸವ – 2017’ರ ಅಂಗವಾಗಿ ಆಯೋಜನೆಗೊಂಡಿತ್ತು. ನೃತ್ಯದಲ್ಲಿ ಒಳ್ಳೆಯ ಹಿಡಿತ ದೊಂದಿಗೆ ಆತ್ಮವಿಶ್ವಾಸ ಮತ್ತು ಚೈತನ್ಯ ತೋರ್ಪಡಿ ಸುವ ಅಯನಾ ನಿರರ್ಗಳವಾಗಿ ನಡೆಸಿಕೊಟ್ಟ ಕಾರ್ಯಕ್ರಮ ನೆರೆದ ಪ್ರೇಕ್ಷಕರನ್ನು ಮುದಗೊಳಿಸಿತು.
ರಸಿಕಪ್ರಿಯ ರಾಗದ (ತಿಶ್ರ ತ್ರಿಪುಟ ತಾಳ) ಪುಷ್ಪಾಂಜಲಿ ಯೊಂದಿಗೆ ಕಾರ್ಯಕ್ರಮ ಆರಂಭಿಸಿ, ಎರಡನೆಯ ಅಭಿನಯಕ್ಕೆ ಗಣಪತಿ ಕೌತ್ವಂ ಆರಿಸಿ ಕೊಂಡಿದ್ದರು. ಗಣಪತಿಯ ವಿವಿಧ ಭಂಗಿಗಳನ್ನು ತಾಳ ನಿಖರತೆ ಮತ್ತು ನಿರ್ದಿಷ್ಟವಾದ ಅಡವುಗಳೊಂದಿಗೆ ಅಭಿನಯಿಸಿ ನೃತ್ಯದಲ್ಲಿ ತನಗಿರುವ ಹಿಡಿತವನ್ನು ಸಾಬೀತುಪಡಿಸಿದರು.
ಅಯನಾ ಅವರ ಅಭಿನಯವು ಪೂರ್ಣಪ್ರಮಾಣ ದಲ್ಲಿ ತೆರೆದುಕೊಂಡುದು “ಅಲರಿಪು’ವಿನಲ್ಲಿ. ದೇವರಿಗೆ, ಗುರುಗಳಿಗೆ ಮತ್ತು ಸಭೆಗೆ ವಂದಿಸುವ ಅಂಜಲೀ ಹಸ್ತದ ವಿನ್ಯಾಸದಿಂದ ತೊಡಗಿ ಸಮ, ಅರೆಮಂಡಿ ಮತ್ತು ಪೂರ್ಣ ಮಂಡಿಯ ಸ್ಥಾನಕಗಳನ್ನು ಬಳಸಿ, ಕತ್ತು ಕಣ್ಣು ಕೈಕಾಲುಗಳ ಸರಳ ನಿರೂಪಣೆಯಿಂದ ಮೂರು ಕಾಲದ ಲಯವನ್ನು ಅವಲಂಬಿಸಿ ಅಭಿನಯಿಸಿದ ಈ ನರ್ತನ ಈಕೆ ಓರ್ವ ಪ್ರಬುದ್ಧ ಕಲಾವಿದೆಯಾಗಿ ಅರಳಿಕೊಳ್ಳುವ ಎಲ್ಲ ಲಕ್ಷಣಗಳನ್ನೂ ತೋರಿಸಿತು. ಪಂಚಭೂತ ಗಳನ್ನು ಸಾದರಪಡಿಸುವ ಕ್ಲಿಷ್ಟಕರ ನೃತ್ತ ಹಾಗೂ ಅಭಿನಯವನ್ನು ಅಯನಾ ಸುಂದರವಾಗಿ, ಹೃದ್ಯವಾಗಿ ಅಭಿನಯಿಸಿ ತೋರಿಸಿದರು.
“ಶಂಭೋ ನಟನಂ’ ಅಯನಾ ಅವರ ಅತ್ಯುತ್ತಮ ಅಭಿನಯಕ್ಕೆ ಸಾಕ್ಷಿಯಾಯಿತು. ಇದರಲ್ಲಿನ ಕೆಲವು ಅಡವುಗಳು ಅವರದೇ ವಿಶಿಷ್ಟ ವಿನ್ಯಾಸ ಎಂಬಷ್ಟು ಪ್ರತ್ಯೇಕವಾಗಿ ಎದ್ದು ಕಾಣುವಂತಿತ್ತು. ಕಾಲಭೈರವನ ತೀವ್ರತರವಾದ ಭಂಗಿಗಳು, ಲಾಸ್ಯ, ಎಲ್ಲವನ್ನೂ ಒಳಗೊಂಡು ತಾನೇ ತಾನಾಗಿ ಮೆರೆಯುವಲ್ಲಿನ ಶಿವನ ವ್ಯಕ್ತಿತ್ವದ ಅಭಿನಯ ಮನೋಜ್ಞವಾಗಿ ಮೂಡಿಬಂತು.
ಭಾವಾಭಿನಯಕ್ಕೆ “ರುಸಲೀರಾಧಾ’ ಎಂಬ ಮರಾಠೀ ಅಭಂಗವೊಂದನ್ನು ಆಯ್ದು ಕೊಂಡಿದ್ದರು. ಕೃಷ್ಣ ಮತ್ತು ರಾಧೆಯರ ಪ್ರೇಮವನ್ನು ಬಿಂಬಿಸುವ ಈ ನೃತ್ಯವು ಉತ್ಕಂಠಿತ ವಿರಹ, ಸಮಾಗಮ ಎಲ್ಲವನ್ನೂ ಅಭಿನಯಿಸುವುದಕ್ಕೆ ಆಸ್ಪದ ಇರುವಂಥದು. ಈ ಅಭಿನಯದಲ್ಲಿ ಅಯನಾ ಎಲ್ಲರ ಹೃದಯ ಗೆದ್ದರು.
ಆಂಗಿಕ, ವಾಚಿಕ, ಆಹಾರ್ಯ ಮತ್ತು ಅಭಿನಯ ಎಂಬ ಭರತನಾಟ್ಯದ ನಾಲ್ಕೂ ಅಂಗಗಳು ಸಮ ಪ್ರಮಾಣ ದಲ್ಲಿ ಬೆರೆತಿರುವುದು “ಮಂಗಲ’ದಲ್ಲಿ. ಇದಕ್ಕಾಗಿ ಅಯನಾ ಅವರು “ತೋಡಯಮಂಗಲಂ’ ಎಂಬುದನ್ನು ಆರಿಸಿಕೊಂಡಿ ದ್ದರು. ರಾಗಮಾಲಿಕೆಯಲ್ಲಿದ್ದ ಈ ಭಾಗ (ತಾಳಮಾಲಿಕೆ) ಭರತ ನಾಟ್ಯದ ಸರ್ವಾಂಗ ಸುಂದರ ಅನುಭವವನ್ನು ಕಟ್ಟಿಕೊಟ್ಟಿತು.
ಮಂಗಳೂರಿನ ಸನಾತನ ನಾಟ್ಯಾಲಯದ ಗುರು ಶಾರದಾಮಣಿ ಶೇಖರ್ ಅವರ ಶಿಷ್ಯೆಯಾಗಿರುವ ವಿ| ಅಯನಾ ರಾಷ್ಟ್ರಮಟ್ಟದ ಕೆಲವು ಪ್ರಸಿದ್ಧ ಕಲಾವಿದರ ಶಿಷ್ಯವೃತ್ತಿ ಸ್ವೀಕರಿಸಿ ಇನ್ನೂ ಹೆಚ್ಚಿನ ಅಭ್ಯಾಸ ಮಾಡುತ್ತಿದ್ದಾರೆ. ಈಕೆ ದೂರದರ್ಶನ ಕಲಾವಿದೆಯೂ ಹೌದು. ವೃತ್ತಿಯಲ್ಲಿ ಎಂಜಿನಿಯರ್ ಆಗಿದ್ದರೂ ಭರತನಾಟ್ಯ ಅಭ್ಯಾಸವನ್ನು ಶ್ರದ್ಧೆಯಿಂದ ಮುಂದುವರಿಸುತ್ತಿದ್ದಾರೆ.
ಸದಾನಂದ ನಾರಾವಿ