ಭರತನಾಟ್ಯ ಅತೀ ಪ್ರಾಚೀನವಾದ ಶಾಸ್ತ್ರೀಯ ನೃತ್ಯ ಪ್ರಕಾರ. ಭಾರತದಲ್ಲಿ ಅದರಲ್ಲೂ ದಕ್ಷಿಣ ಭಾರತದಲ್ಲಿ ಹೆಚ್ಚಾಗಿ ಕಾಣಬರುವ ಈ ನೃತ್ಯದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲಿ ವಿವರವಾಗಿ ಹೇಳಲಾಗಿದೆ. ಸೃಷ್ಟಿಕರ್ತನಾದ ಬ್ರಹ್ಮನೇ ಈ ಶಾಸ್ತ್ರವನ್ನು ರಚಿಸಿದನೆಂದು ನಾಟ್ಯಶಾಸ್ತ್ರ ಹಾಗೂ ನಂದಿಕೇಶ್ವರನ ಆಭಿನಯ ದರ್ಪಣದಲ್ಲಿ ಹೇಳಲಾಗಿದೆ. ಈ ಶಾಸ್ತ್ರ ಸೃಷ್ಟಿಯಾದ ಬಗೆಗೆ ಒಂದು ದಂತ ಕಂಥೆಯೇ ಇದೆ.
ಇಂದ್ರಾದಿ ದೇವತೆಗಳು ತಮ್ಮ ಬಿಡುವಿನ ವೇಳೆ ಕಳೆಯಲು ಯಾವುದಾದರೂ ಒಂದು ವಿಧಾನ ಹೇಳಿಕೊಡಬೇಕೆಂದು ಬ್ರಹ್ಮನನ್ನು ಪ್ರಾರ್ಥಿಸಿದರು. ಆಗ ಬ್ರಹ್ಮ ಋಗ್ವೇದದಿಂದ ಶಬ್ದವನ್ನು, ಸಾಮವೇದದಿಂದ ಗೀತವನ್ನೂ ಯಜುರ್ವೇದದಿಂದ ಅಭಿನಯವನ್ನು, ಅಥರ್ವವೇದದಿಂದ ರಸಗಳನ್ನೂ ಆಯ್ದುಕೊಂಡು ನಾಟ್ಯವೇದವೆಂಬ ಐದನೆಯ ವೇದ ರಚಿಸಿ ತನ್ನ ಮಗನಾದ ಭರತನಿಗೆ ಕೊಟ್ಟ. ಭರತ ಅದನ್ನು ಶಾಸ್ತ್ರ ರೂಪದಲ್ಲಿ ಬರೆದು ತನ್ನ ನೂರು ಮಕ್ಕಳ ಎದುರಿನಲ್ಲೂ ಪಠಿಸಿದ.
ಅಲ್ಲದೆ ಈ ವಿದ್ಯೆಯನ್ನು ಗಂಧರ್ವ, ಅಪ್ಸರೆಯರಿಗೂ ಹೇಳಿಕೊಟ್ಟ. ಇವರೆಲ್ಲ ಸೇರಿ ಶಿವನ ಎದುರಿನಲ್ಲಿ ನರ್ತಿಸಿದಾಗ ಸ್ವಯಂ ನಟರಾಜ ಎನಿಸಿದ ಶಿವ ತೃಪ್ತನಾಗಿ ಈ ವಿಶಿಷ್ಟ ಕಲೆಯನ್ನು ತನ್ನ ಗಣಗಳಿಗೂ ಬೋಧಿಸುವಂತೆ ಭರತನಿಗೆ ಹೇಳಿದ. ಪಾರ್ವತಿ ಭರತನಿಗೆ ಲಾಸ್ಯ ನೃತ್ಯವನ್ನು ಹೇಳಿದಳು. ಶಿವನ ತಾಂಡವವು ಗಂಡು ನೃತ್ಯವಾಗಿದ್ದು, ಪಾರ್ವತಿಯ ಲಾಸ್ಯ ಹೆಣ್ಣು ನೃತ್ಯವಾಗಿದೆ.
ಭರತನಾಟ್ಯ, ನೃತ್ಯಗಳಲ್ಲೇ ಒಂದು ಅವಿಸ್ಮರಿನೀಯ ವಿಶೇಷ ಶಾಸ್ತ್ರೀಯ ನೃತ್ಯವಾಗಿದ್ದು, ಮುದಲ ಬಾರಿಗೆ ಈ ನೃತ್ಯವನ್ನು ನೋಡುವವರು ಮೈ ಮರೆತು, ಇನ್ನೊಮ್ಮೆ ನೋಡಬೇಕು ಎಂಬ ರೋಮಾಂಚನ ಮತ್ತು ಕುತೂಹಲ ಮೂಡುವುದಂತು ಖಂಡಿತ.
- ಪವನ್ ಕುಮಾರ್
ಎಸ್‌ಡಿಎಂ, ಉಜಿರೆ