ಭರಮಸಾಗರ: ರಾಷ್ಟ್ರೀಯ ಹೆದ್ದಾರಿ 4ರ ಬೀರಾವರ ಗೇಟ್ ಬಳಿ ಕೆಳಸೇತುವೆ ಕಾಮಗಾರಿ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ವಾಹನಗಳ ತಾತ್ಕಾಲಿಕ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವ ಸರ್ವಿಸ್ ರಸ್ತೆ ಗುಂಡಿ ಬಿದ್ದು ತಿಂಗಳುಗಳೇ ಕಳೆದಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಕನಿಷ್ಠ ಪಕ್ಷ ಗುಂಡಿ ತೇಪೆ ಹಾಕದೆ ನಿರ್ಲಕ್ಷ್ಯ ತಾಳಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ದಾವಣಗೆರೆ ಕಡೆಯಿಂದ ಬರುವ ವಾಹನಗಳಿಗೆ ಒಮ್ಮುಖ ಮಾರ್ಗವಾಗಿ ಇಲ್ಲಿ ಸರ್ವಿಸ್ ರಸ್ತೆಯಲ್ಲಿ ಹೈವೇ ವಾಹನಗಳಿಗೆ ಸಂಚಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಈ ಮಾರ್ಗದಲ್ಲಿ ಸಂಚರಿಸುವ ಭಾರೀ ವಾಹನಗಳಿಂದ ರಸ್ತೆ ಗುಂಡಿ ಬಿದ್ದು ಹಲವು ತಿಂಗಳುಗಳಾಗಿವೆ. ಯಾವುದಾದರೂ ದೊಡ್ಡ ಅನಾಹುತ ಸಂಭವಿಸುವವರೆಗೆ ಇಲ್ಲಿನ ಗುಂಡಿಗಳ ರಿಪೇರಿ ಆಗುವುದಿಲ್ಲ.
ಸುಮಾರು ಒಂದು ಅಡಿಗೂ ಹೆಚ್ಚು ಆಳವಿರುವ ಈ ಗುಂಡಿಗಳ ಇರುವಿಕೆ ತಿಳಿಯದೆ ವಾಹನಗಳು ಶರವೇಗದಲ್ಲಿ ದಾವಣಗೆರೆ ಕಡೆಯಿಂದ ಬರುತ್ತವೆ. ಇಲ್ಲಿನ ಗುಂಡಿಗಳಿಂದ ಸುಮಾರು 100 ಮೀಟರ್ ದೂರದಲ್ಲಿನ ಹಂಪ್ಸ್ ಲೆಕ್ಕಿಸದೇ ನುಗ್ಗುವುದರಿಂದ ನೇರ ಗುಂಡಿಗೆ ಇಳಿಯಬೇಕಾಗಿದೆ. ಬ್ರೇಕ್ ಹಾಕಿ ವಾಹನಗಳ ವೇಗ ನಿಯಂತ್ರಿಸುವ ಸ್ಥಿತಿ ನಿರ್ಮಾಣವಾಗಿದೆ.
ಹೇಳಿ ಕೇಳಿ ಇಲ್ಲಿನ ಗುಂಡಿಗಳಿರುವ ರಸ್ತೆ ಮೂಲಕವೇ ಜಗಳೂರು ಕಡೆ ಸಂಚರಿಸುವ ವಾಹನಗಳು ಓಡಾಟ ನಡೆಸುತ್ತವೆ. ಅಲ್ಲದೆ ಹತ್ತಾರು ಹಳ್ಳಿಗಳಿಗೆ ಪ್ರಯಾಣಿಸುವವರು ಇಲ್ಲಿನ ಬಸ್ ಜಂಕ್ಷನ್‌ಗೆ ಬರುತ್ತಿರುತ್ತಾರೆ. ಏಕಾಏಕಿ ನುಗ್ಗುವ ಹೈವೇಯಿಂದ ಬರುವ ವಾಹನಗಳ ನಡುವೆ ರಸ್ತೆ ದಾಟುವುದು ಸ್ಥಳೀಯರಿಗೆ ತೀವ್ರ ಸಮಸ್ಯೆಯನ್ನು ತಂದೊಡ್ಡಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕೂಡಲೇ ಈ ಬಗ್ಗೆ ಗಮನ ಹರಿಸಬೇಕಿದೆ.
ಸುರಕ್ಷತಾ ಕ್ರಮ ಕೈಗೊಳ್ಳಿ
ಕೆಳ ಸೇತುವೆ ಕಾಮಗಾರಿ ಮುಗಿಯುವವರೆಗೆ ಇಲ್ಲಿನ ರಸ್ತೆ ಸುರಕ್ಷತೆಗೆ ಗುಂಡಿಗಳನ್ನು ಮುಚ್ಚಲು ಮುಂದಾಗಬೇಕಿದೆ. ಅಲ್ಲಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಸುರಕ್ಷತಾ ಕ್ರಮ ಕೈಗೊಳ್ಳಬೇಕಿದೆ. ರಿಪ್ಲೆಕ್ಟರ್ ದೀಪಗಳ ಜೋಡಣೆ ಮಾಡಬೇಕು. ದಾವಣಗೆರೆ ಕಡೆ ಸಂಚರಿಸುವ ವಾಹನಗಳ ಮಧ್ಯೆ ಜಗಳೂರು ಕಡೆ ಹೋಗುವ ವಾಹನಗಳು ಕೆಳ ಸೇತುವೆ ದಾಟುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ. ಸಂಬಂಧಿಸಿದವರು ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕಿದೆ.
ಎಚ್.ಬಿ. ನಿರಂಜನಮೂರ್ತಿ