Advertisement
ಕಳೆದ 3-4 ವರ್ಷಗಳಿಂದ ರೋಗ ಭಾದೆಯೇ ಇಲ್ಲದ ಮೆಕ್ಕೆಜೋಳಕ್ಕೆ ಮುಂಗಾರು, ಹಿಂಗಾರು ಎರಡು ಋತುಮಾನದ ಜೋಳಕ್ಕೂ ಲದ್ದಿ ಹುಳು ಸೇರಿದಂತೆ ಇತರೆ ರೋಗಗಳು ಆವರಿಸಿರುವುದರಿಂದ ಕೀಟನಾಶಕ ಬಳಕೆ ಇಲ್ಲದೆ ಮೆಕ್ಕೆಜೋಳ ಬೆಳೆಯಲು ಸಾಧ್ಯವಿಲ್ಲ ಎಂಬ ಮಟ್ಟಿಗೆ ಪರಿಸ್ಥಿತಿಯಿದೆ. ಹೀಗಾಗಿ ಬಿತ್ತನೆ ಮಾಡಿ ಒಂದು ತಿಂಗಳ ಆಸುಪಾಸಿನಲ್ಲಿರುವ ಮೆಕ್ಕೆಜೋಳಕ್ಕೆ ರೋಗ ಹರಡಿದೆ. ಈಗಾಗಲೇ ಎರಡು ಬಾರಿ ಕೀಟನಾಶಕ ಸಿಂಪಡಣೆ ಮಾಡಿದರೂ ರೋಗ ನಿಯಂತ್ರಣಕ್ಕೆ ಸಿಗುತ್ತಿಲ್ಲ. ಸಸಿಗಳ ಸುಳಿಯಲ್ಲಿ ಹುಳುಗಳು ಕಾಣಿಸಿಕೊಂಡು ಸುಳಿಯನ್ನೇ ತಿಂದು ಹಾಕುವ ಮೂಲಕ ಗಿಡಗಳ ಬೆಳವಣಿಗೆಗೆ ಈ ಹುಳುಗಳು ತೀವ್ರ ಅಡ್ಡಿಯನ್ನು ಉಂಟು ಮಾಡುತ್ತಿವೆ.
ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ವಿಂಟಲ್ ಜೋಳಕ್ಕೆ ಎರಡು ಸಾವಿರ ಆಸುಪಾಸಿನ ದರ ಸಿಗುತ್ತಿದೆ. ಈ ಹಿನ್ನೆಲೆಯಲ್ಲಿ ನಷ್ಟವಿಲ್ಲದೆ ಕಡಿಮೆ ಇಳುವರಿ ಆದರೂ ಈಗಿನ ದರದ ನಡುವೆ ಹಾಕಿದ ಬಂಡವಾಳ ಮತ್ತು ಲಾಭವನ್ನು ಪಡೆಯುವ ನಿರೀಕ್ಷೆಯಲ್ಲಿ ರೈತರಿದ್ದಾರೆ. ನೀರಿನ ಲಭ್ಯತೆ ಮತ್ತು ವಿದ್ಯುತ್ ಸಮಸ್ಯೆಗಳ ನಡುವೆ ಬೆಳೆಯನ್ನು ರೋಗದಿಂದ ಉಳಿಸಲು ರೈತರು ಹರಸಾಹಸ ಪಡುತ್ತಿದ್ದಾರೆ. ಹಿಂಗಾರು ಹಂಗಾಮಿಗೆ ತಾಲೂಕಿನಲ್ಲಿ ಏಕದಳ ಧಾನ್ಯಗಳಿಗಿಂತ ದ್ವಿದಳ ಧಾನ್ಯ ಮತ್ತು ಎಣ್ಣೆಕಾಳು ಬೆಳೆಗಳನ್ನು ಹೆಚ್ಚಾಗಿ ಬೆಳೆಯುತ್ತಿರುವುದು ಕೃಷಿ ಇಲಾಖೆ ಅಂಕಿಸಂಖ್ಯೆಗಳಿಂದ ಕಂಡುಬರುತ್ತಿದೆ. ಉತ್ತಮ ಮಳೆ ಆಗಿರುವ ಹಿನ್ನೆಲೆಯಲ್ಲಿ ರೈತರು ಹೆಚ್ಚು ತರಕಾರಿ ಬೆಳಗಳು ಸೇರಿದಂತೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಕಡೆ ಕೂಡ ಮುಖ ಮಾಡಿದ್ದಾರೆ. ಮಳೆ ತಂದ ಸಂತಸ ಹಿಂಗಾರು ಹಂಗಾಮಿನ ರೈತರ ಚಟುವಟಿಕೆಗಳಲ್ಲಿ ಜೀವ ಕಳೆಯನ್ನು ತಂದಿದೆ. ಕೃಷಿ ಆಧಾರಿತ ಎಲ್ಲಾ ವ್ಯಾಪಾರ ಚಟುವಟಿಕೆಗಳು ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಉತ್ತಮವಾಗಿ ಗರಿಗೆದರಿವೆ.
Related Articles
Advertisement
ಒಟ್ಟಾರೆ 22743 ಹೆಕ್ಟೇರ್ ಪ್ರದೇಶದಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆಗಳನ್ನು ಚಿತ್ರದುರ್ಗ ತಾಲೂಕಿನ ಕಸಬಾ, ಹಿರೇಗುಂಟನೂರು, ಭರಮಸಾಗರ, ತುರುವನೂರು ಹೋಬಳಿಗಳಲ್ಲಿ ಬೆಳೆಯಲಾಗುತ್ತಿದೆ.
ಎಚ್.ಬಿ.ನಿರಂಜನ ಮೂರ್ತಿ