Advertisement

ಅಳಗವಾಡಿ-ಓಬಳಾಪುರ ಮಾರ್ಗಕ್ಕೆ ಸಿಸಿ ರಸ್ತೆ ಭಾಗ್ಯ

04:19 PM Nov 29, 2019 | Naveen |

ಭರಮಸಾಗರ: ನನೆಗುದಿಗೆ ಬಿದ್ದಿದ್ದ ಸಮೀಪದ ಅಳಗವಾಡಿ ಮತ್ತು ಓಬಳಾಪುರ ಗ್ರಾಮಗಳನ್ನು ಸಂಪರ್ಕಿಸುವ ಮುಖ್ಯ ರಸ್ತೆ ನಡುವಿನ 400 ಮೀಟರ್‌ ಉದ್ದದ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಪರಿವರ್ತಿಸುವ ಕಾಮಗಾರಿ ಭರದಿಂದ ಸಾಗುತ್ತಿದೆ. 30 ಲಕ್ಷ ರೂ. ವೆಚ್ಚದಲ್ಲಿ 400 ಮೀಟರ್‌ ಉದ್ದದ ರಸ್ತೆ ಕಾಮಗಾರಿ ಕೈಗೊಳ್ಳಲಾಗಿದೆ. 10 ಇಂಚು ದಪ್ಪನೆಯ ಕಾಂಕ್ರಿಟ್‌ನೊಂದಿಗೆ 18 ಅಡಿ (ಐದೂವರೆ ಮೀಟರ್‌) ಅಗಲವಾದ ಸಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.

Advertisement

ಕಳೆದ ಹಲವು ದಶಕಗಳಿಂದ ಇಲ್ಲಿನ ಮುಖ್ಯ ರಸ್ತೆಯ ಮಧ್ಯ ಭಾಗದ 400 ಮೀಟರ್‌ ಉದ್ದದ ರಸ್ತೆ ಭೂ ವಿವಾದದಿಂದ ಅಭಿವೃದ್ಧಿಯಾಗದೆ ಹಾಗೆಯೇ ಉಳಿದಿತ್ತು. ಈ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚರಿಸುವುದು ಯಮಯಾತನೆಯನ್ನುಂಟು ಮಾಡುತ್ತಿತ್ತು. ಮಳೆ ನೀರು ರಸ್ತೆ ಮದ್ಯೆ ನಿಂತು ಕೆಸರು ಗದ್ದೆಯಾಗುತ್ತಿತ್ತು. ಇದರಿಂದ ಬೈಕ್‌, ಕಾರು, ಆಟೋ ಸೇರಿದಂತೆ ದೊಡ್ಡ ವಾಹನಗಳು ಕೂಡ ಇಲ್ಲಿನ ರಸ್ತೆ ದಾಟಲು ಹರಸಾಹಸ ಪಡಬೇಕಿತ್ತು. ಕೊಂಚ ಯಮಾರಿದರೆ ರಸ್ತೆ ಬದಿಯ ಗುಂಡಿ ಸೇರಬೇಕಿತ್ತು.

ರೈತರು ತಾವು ಬೆಳೆದ ಉತ್ಪನ್ನಗಳನ್ನು ಈ ರಸ್ತೆ ಮಾರ್ಗದಲ್ಲಿ ದಾಟಿಸಲು ಪರದಾಡಬೇಕಿತ್ತು. ಕೆಲವರು ಇಲ್ಲಿನ ರಸ್ತೆ ದುರವಸ್ಥೆಯಿಂದಾಗಿ ಅಳಗವಾಡಿ ದಾಟಿ ಮುಂದಿನ ಊರುಗಳಿಗೆ ತೆರಳಲು ಈ ಮಾರ್ಗದ ಬದಲಿಗೆ ಸಿರಿಗೆರೆಯಿಂದ ಅಳಗವಾಡಿಯನ್ನು ಸಂಪರ್ಕಿಸುವ ನೇರ ಮಾರ್ಗವನ್ನು ಬಳಸುತ್ತಿದ್ದರು.

ಅಳಗವಾಡಿ ಮಾರ್ಗದಿಂದ ಬರುವವರು ಓಬಳಾಪುರ ಮಾರ್ಗವಾಗಿ, ಇತರೆ ಹಳ್ಳಿಗಳಿಗೆ ತೆರಳುವವರು ಸಿರಿಗೆರೆ ಮಾರ್ಗವನ್ನು ಬಳಕೆ ಮಾಡುತ್ತಿದ್ದರು. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ಹಲವು ಹಳ್ಳಿಗಳನ್ನು ಸಂಪರ್ಕಿಸಲು ಈ ರಸ್ತೆ ಮಾರ್ಗ ಪ್ರಮುಖ ಸಂಪರ್ಕ ರಸ್ತೆಯಾಗಿದೆ. ಇದೀಗ ರಸ್ತೆಗೆ ಸಿಸಿ ರಸ್ತೆ ಭಾಗ್ಯ ದೊರೆತಿದೆ. ಕೆಲ ತಿಂಗಳುಗಳಿಂದ ಮೆಟಲಿಂಗ್‌ ಕಾರ್ಯ ನಡೆದಿದೆ. ಇಲ್ಲೊಂದು ಹಳ್ಳ ಹರಿಯುವ ಮಾರ್ಗವಿರುವ ಕಾರಣ ಒಂದು ಡಕ್‌ ಕೂಡ ನಿರ್ಮಾಣವಾಗಿದೆ. ಡಕ್‌ ನಿರ್ಮಾಣದ ಸ್ಥಳ ಇನ್ನೂ ಎತ್ತರವಾಗಿರಬೇಕಿತ್ತು. ಗುಣಮಟ್ಟದಲ್ಲಿ ಲೋಪ ಉಂಟಾಗದಂತೆ ದೀರ್ಘ‌ಕಾಲ ಬಾಳಿಕೆ ಬರುವಂತೆ ಕಾಂಕ್ರಿಟ್‌ ರಸ್ತೆ ನಿರ್ಮಾಣವಾಗಲಿ ಎಂಬ ಸ್ಥಳೀಯರ ಮಾತುಗಳ ನಡುವೆ ರಸ್ತೆ ಅಭಿವೃದ್ಧಿ ಕೆಲಸ ನಡೆಯುತ್ತಿರುವುದು ಅಳಗವಾಡಿ ಮತ್ತು ಓಬಳಾಪುರ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next