ಚಿತ್ರದುರ್ಗ ಆಂದಾಕ್ಷಣ ಅಲ್ಲಿನ ಇತಿಹಾಸ ನೆನಪಾಗುತ್ತದೆ. ಈಗಾಗಲೇ ಚಿತ್ರದುರ್ಗ ಕಲ್ಲಿನಕೋಟೆ ಆಳಿದ ಮದಕರಿ ನಾಯಕನ ಕುರಿತು ಅನೇಕ ಪುಸ್ತಕ ಹೊರಬಂದಿವೆ. ಆ ಕುರಿತು ಚಿತ್ರ ಕೂಡ ತಯಾರಾಗುತ್ತಿದೆ. ಈಗ ಸದ್ದಿಲ್ಲದೆಯೇ ತಯಾರಾಗಿರುವ ಐತಿಹಾಸಿಕ ಚಿತ್ರವೊಂದು ಬಿಡುಗಡೆಗೆ ಸಜ್ಜಾಗಿದೆ.
ಹೌದು, ಇತಿಹಾಸವುಳ್ಳ ಚಿತ್ರದುರ್ಗದ ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ ಅವರ ಕುರಿತ ಐತಿಹಾಸಿಕ ಚಿತ್ರ “ಬಿಚ್ಚುಗತ್ತಿ’ ಫೆಬ್ರವರಿಯಲ್ಲಿ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಚಿತ್ರದುರ್ಗದ ಓಂ ಸಾಯಿ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ತಯಾರಾಗಿರುವ “ಬಿಚ್ಚುಗತ್ತಿ’ ಡಾ.ಬಿ.ಎಲ್.ವೇಣು ಅವರು ಬರೆದಿರುವ “ರಾಜ ಬಿಚ್ಚುಗತ್ತಿ ಭರಮಣ್ಣ ನಾಯಕ’ ಕಾದಂಬರಿ ಆಧಾರಿತ. ಚಿತ್ರದಲ್ಲಿ ರಾಜವರ್ಧನ್ ಭರಮಣ್ಣ ನಾಯಕರಾಗಿ ಕಾಣಿಸಿಕೊಂಡರೆ, ಹರಿಪ್ರಿಯಾ ಪ್ರಮುಖ ಆಕರ್ಷಣೆ.
ಇನ್ನು, “ಬಾಹುಬಲಿ’ ಖ್ಯಾತಿಯ ಪ್ರಭಾಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಐತಿಹಾಸಿಕ ಸಿನಿಮಾದಲ್ಲಿ ದೊಡ್ಡ ತಾರಾ ಬಳಗವೇ ತುಂಬಿಕೊಂಡಿರುವುದು ವಿಶೇಷತೆಗಳಲ್ಲೊಂದು. ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಗೊಂಡಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರತಂಡ ಓಎಸ್‌ಕೆ ಪ್ರೊಡಕ್ಷನ್ಸ್‌ನ ಯೂ ಟ್ಯೂಬ್ ಚಾನೆಲ್‌ನಲ್ಲಿ ಟೀಸರ್ ಬಿಡುಗಡೆ ಮಾಡಿದ್ದು, ನೋಡಿದವರಿಗೆ ಒಳ್ಳೆಯ ಕಾಮೆಂಟ್ಸ್ ದೊರೆತಿದೆ.
ಟೀಸರ್‌ನಲ್ಲಿ ಎಲ್ಲರೂ ಟೈಗರ್ ಫೈಟ್ಸ್ ಗ್ರಾಫಿಕ್ಸ್ ಬಗ್ಗೆಯೇ ಗುಣಗಾನ ಮಾಡು ತ್ತಿದ್ದಾರೆ ಎಂಬುದು ಚಿತ್ರತಂಡದ ಮಾತು. ಅಂದಹಾಗೆ, ಹೈದರಾ ಬಾದ್‌ನ ನಾಗೇಶ್ ಹಾಗೂ ತಂಡ ಗ್ರಾಫಿಕ್ಸ್ ಎಪಿಸೋಡ್ ಮಾಡಿದೆ. ಚಿತ್ರದಲ್ಲಿ ನಾಲ್ಕು ನಿಮಿಷಗಳ ಕಾಲ ಟೈಗರ್ ಎಪಿ ಸೋಡ್ ಮೂಡಿ ಬಂದಿದ್ದು, ಮುದ್ದಣ್ಣ ಸಾಕಿದ ಹುಲಿ ಜೊತೆ ಭರ ಮಣ್ಣ ಕಾಳಗ ನಡೆಸುವ ಸೀನ್ ಚಿತ್ರದ ಹೈಲೈಟ್. ಆದರೆ, ಭರಮಣ್ಣ ಯಾಕೆ ಆ ಟೈಗರ್ ಜೊತೆ ಸೆಣೆಸಾಟ ನಡೆಸುತ್ತಾರೆ ಅನ್ನೋದನ್ನು ಚಿತ್ರದಲ್ಲೇ ಕಾಣಬೇಕು ಎಂಬುದು ಚಿತ್ರತಂಡದ ಮಾತು.
ಚಿತ್ರದಲ್ಲಿ ಅರಮನೆ ಕೂಡ ವಿಶೇಷವಾಗಿದೆ. ಆ ಗ್ರಾಫಿಕ್ಸ್ ಅನ್ನು ಸುರೇಶ್ ಅವರು ತಮ್ಮ ತಂಡದ ಜೊತೆ ಸೇರಿ ಮಾಡಿದ್ದಾರೆ. ಸದ್ಯ ಖುಷಿಯಲ್ಲಿರುವ ಚಿತ್ರತಂಡ, ಚಿತ್ರವನ್ನು ರಿಲೀಸ್ ಮಾಡಲು ತಯಾರಿ ನಡೆಸಿದೆ. ಇನ್ನು, ಫೆ.9 ರಂದು ಚಿತ್ರದ ಟ್ರೇಲರ್ ಅನ್ನು ಕನ್ನಡದ ಸ್ಟಾರ್ ನಟರೊಬ್ಬರು ರಿಲೀಸ್ ಮಾಡಲಿದ್ದಾರೆ. ಚಿತ್ರಕ್ಕೆ ಹರಿ ಸಂತೋಷ್ ನಿರ್ದೇಶಕರಾಗಿದ್ದು, ಹಂಸಲೇಖ ಅವರ ಸಂಗೀತವಿದೆ. ಗುರುಪ್ರಶಾಂತ್ ರೈ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದ್ದಾರೆ.