Advertisement

ಟೊಮ್ಯಾಟೋಗೆ ಕುತ್ತು ತಂದಿಟ್ಟ ನೊಣ-ಮಳೆ

11:32 AM Nov 13, 2019 | Naveen |

„ಎಚ್‌.ಬಿ. ನಿರಂಜನ ಮೂರ್ತಿ
ಭರಮಸಾಗರ:
ಜಿಲ್ಲೆಯಲ್ಲಿ ಮಳೆ ನಿಂತ ಮೇಲೆ ಟೊಮ್ಯಾಟೋ ಬೆಳೆಗೆ ಹೂಜಿ ನೊಣ(ಹುಳ) ಬಾಧೆ ಶುರುವಾಗಿದ್ದು, ಇಳುವರಿ ಕುಸಿತ ಭೀತಿ ಎದುರಾಗಿದೆ. ಮಾರುಕಟ್ಟೆಯಲ್ಲಿ 20, 22 ಕೆಜಿ ತೂಕದ ಬಾಕ್ಸ್‌ಗೆ 380, 400 ರೂ. ಇದ್ದ ದರ ಕಳೆದ ಎರಡು ದಿನಗಳಿಂದ 200, 250 ರೂ.ಗೆ ಇಳಿದಿದೆ. ಇದರಿಂದಾಗಿ ಟೊಮ್ಯಾಟೋ ಬೆಳೆಗಾರರು ಕಂಗಾಲಾಗಿದ್ದಾರೆ.

Advertisement

ಚಿತ್ರದುರ್ಗ ತಾಲೂಕಿನ ಬೇಡರಶಿವನಕೆರೆ, ಬಸವನಶಿವನಕೆರೆ, ಕೊಳಹಾಳು, ಸೀಗೇಹಳ್ಳಿ, ನೆಲ್ಲಿಕಟ್ಟೆ, ಹಳೇರಂಗಾಪುರ, ಚಿಕ್ಕಬೆನ್ನೂರು, ಹಂಪನೂರು, ಹೆಗ್ಗೆರೆ, ಹಳವುದರ, ಓಬಳಾಪುರ ಎಮ್ಮೆಹಟ್ಟಿ ಮತ್ತು ದಾವಣಗೆರೆ ತಾಲೂಕಿನ ನೀರ್ಥಡಿ, ಲಕ್ಕಮುತ್ತೇನಹಳ್ಳಿ, ಹೆಬ್ಟಾಳು, ಗಂಗನಕಟ್ಟೆ, ನರಗನಹಳ್ಳಿ, ಚಿನ್ನಸಮುದ್ರ, ಬಾವಿಹಾಳ್‌, ಮಾಯಕೊಂಡ ಗ್ರಾಮಗಳಲ್ಲಿ ಟೊಮ್ಯಾಟೋವನ್ನು ಸುಮಾರು 500 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆಯಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಹಲವು ದಿನಗಳಿಂದ ಬೀಳುತ್ತಿದ್ದ ಮಳೆ ಟೊಮ್ಯಾಟೋ ಬೆಳೆಗಾರರನ್ನು ಹೈರಾಣಾಗಿಸಿತ್ತು.ಈ ನಡುವೆ ಮಾರುಕಟ್ಟೆಯಲ್ಲಿ ಟೊಮ್ಯಾಟೋಗೆ ಹೋಲ್‌ ಸೆಲ್‌ ದರ ಕೆಜಿಗೆ 10 ರೂ. ಆಸುಪಾಸಿನಲ್ಲಿದೆ. ಕಳೆದ ತಿಂಗಳ ಮಳೆಗೆ ಟೊಮ್ಯಾಟೋಗೆ ಕೊಳೆ ರೋಗ ಕಾಣಿಸಿಕೊಂಡು ಕೊಳೆಯಲು ಶುರುವಾಗಿತ್ತು. ಹೂವು ಕಟ್ಟುವ ವೇಳೆಗೆ ಮಳೆ ಎಲ್ಲವನ್ನು ಅಪೋಶನ ತೆಗೆದುಕೊಂಡಿತ್ತು.

ಕಾಯಿಗಟ್ಟಿದ ಗಿಡಗಳಲ್ಲಿನ ಹಣ್ಣನ್ನು ಹೂಜಿ ನೊಣ ಹಾಳು ಮಾಡಿತ್ತು. ನೊಣ ಬಾಧೆಯಿಂದ ಕೆಟ್ಟ ಹಣ್ಣನ್ನು ಬೇರ್ಪಡಿಸಿ ಜಮೀನಿನಿಂದ ಮಾರುಕಟ್ಟೆಗೆ ಒಯ್ಯಲು ಮುಂದಾಗುವ ಬೆಳೆಗಾರನಿಗೆ ಅರ್ಧಕ್ಕರ್ಧ ಹಣ್ಣು ತಿರಸ್ಕೃತವಾಗುತ್ತಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಸಂಕಷ್ಟಗಳ ನಡುವೆ ಹಣ್ಣು ಬೆಳೆದರೂ ಇದೀಗ ದರ ಕುಸಿತದ ನಡುವೆ ಉತ್ತಮ ಇಳುವರಿ ಬಂದರೆ ಮಾತ್ರ ಬೆಳೆಗಾರ ಬಂಡವಾಳ ಜೊತೆಗೆ ಹಾಕಿದ ಶ್ರಮಕ್ಕೂ ಒಂದಿಷ್ಟು ಪುಡಿಗಾಸು ಮಾಡಬಹುದು.

ಟೊಮ್ಯಾಟೋ ಸಸಿ ನಾಟಿ, ಗೊಬ್ಬರ, ದುಬಾರಿ ಕೀಟನಾಶಕಗಳ ಸಿಂಪಡಣೆ, ಗಿಡ ಬೆಳೆದಂತೆ ಅದಕ್ಕೆ ಗೂಟ, ವೈರ್‌, ದಾರಗಳನ್ನು ಕಟ್ಟುವುದು, ಕೂಲಿಕಾರರ ಖರ್ಚು, ಮಾರುಕಟ್ಟೆಗೆ ಹಣ್ಣಿನ ಸಾಗಾಟ ಸೇರಿದಂತೆ ಪ್ರತಿ ಎಕರೆಗೆ ಬರೋಬ್ಬರಿ 50 ರಿಂದ 60 ಸಾವಿರ ರೂ. ಖರ್ಚು ಬರುತ್ತದೆ. ಉತ್ತಮ ಇಳುವರಿ ಬಂದರೆ ಎಕರೆಗೆ 22 ರಿಂದ 25 ಕೆಜಿ ತೂಕದ 600 ರಿಂದ 700 ಬಾಕ್ಸ್‌ ದೊರೆಯಬೇಕಿತ್ತು.

Advertisement

ಇದೀಗ ಕೊಳೆ ರೋಗ ಮತ್ತು ಹೂಜಿ ನೊಣ ಕಾಟಕ್ಕೆ ಸಿಲುಕಿ ಎಕರೆಗೆ 150 ರಿಂದ 200 ಬಾಕ್ಸ್‌ ಟೊಮ್ಯಾಟೋ ಸಿಕ್ಕರೆ ಹೆಚ್ಚು ಎನ್ನುತ್ತಿದ್ದಾರೆ ಬೆಳೆಗಾರರು. ಕಳೆದ 15 ದಿನಗಳ ಹಿಂದೆ ಕೆಜಿಗೆ ಹೋಲ್‌ ಸೆಲ್‌ನಲ್ಲಿ ಮಾರುಕಟ್ಟೆಯಲ್ಲಿ 20-30 ರೂ. ಗಳ ಆಸುಪಾಸಿನಲ್ಲಿತ್ತು. ಒಂದು ತಿಂಗಳ ಹಿಂದೆ ಬಾಕ್ಸ್‌ ಒಂದರ ದರ 100 ರಿಂದ 150 ರೂ. ಇತ್ತು. ಎರಡು ದಿನಗಳ ಹಿಂದೆ 380-400 ರೂ.ಇದ್ದ ದರ ಏಕಾಏಕಿ 200-250 ರೂ.ಗೆ ಕುಸಿತ ಕಂಡಿದೆ.

ಚಿತ್ರದುರ್ಗ ಮತ್ತು ದಾವಣಗೆರೆ ಭಾಗಗಳಲ್ಲಿ ಬೆಳೆದ ಟೊಮ್ಯಾಟೋಗೆ ದಾವಣಗೆರೆಯೇ ಪ್ರಮುಖ ಮಾರುಕಟ್ಟೆಯಾಗಿದೆ. ಕೆಲವು ಬೆಳೆಗಾರರು ಕೋಲಾರ ಮತ್ತು ಬೆಳಗಾವಿ ಕಡೆ ಕೊಂಡೊಯ್ದು ಮಾರಾಟ ಮಾಡುತ್ತಾರೆ. ಆದರೆ ಇಳುವರಿ ಕೊರತೆಯಿಂದಾಗಿ ದೂರದ ಊರುಗಳಿಗೆ ಮಾರಾಟ ಮಾಡಲು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next