ಜೋಧ್‌ಪುರ/ಹೈದರಾಬಾದ್: ‘ಪದ್ಮಾವತ್’ ಚಿತ್ರದ ಕುರಿತಂತೆ ತಮ್ಮ ವಿರುದ್ಧದ ಪ್ರಕರಣವೊಂದರ ವಿಚಾರಣೆ ಕೈಬಿಡುವಂತೆ ರಾಜಸ್ಥಾನ ಹೈಕೋರ್ಟನ್ನು ಕೋರಿರುವ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರಿಗೆ ಸತ್ಯಾಂಶದ ಮನವರಿಕೆ ಮಾಡಿಕೊಡಲು “ಪದ್ಮಾವತ್’ ಚಿತ್ರದ ವಿಶೇಷ ಪ್ರದರ್ಶನ ನಡೆಸುವುದಾಗಿ ತಿಳಿಸಿದ್ದಾರೆ.
‘ಪದ್ಮಾವತ್’ ವಿರುದ್ಧ ದಾಖಲಾಗಿದ್ದ ಅರ್ಜಿಯ ವಿಚಾರಣೆ ಶುಕ್ರವಾರ ನಡೆದಿದ್ದು, ತಮ್ಮ ಚಿತ್ರ, ರಾಣಿ ಪದ್ಮಾವತಿಯ ಚಾರಿತ್ರ್ಯ ವಧೆ ಮಾಡಿಲ್ಲ ಎಂದು ಬನ್ಸಾಲಿ ಹೇಳಿದರಲ್ಲದೆ, ಇದನ್ನು ಮನವರಿಕೆ ಮಾಡಲು ನ್ಯಾಯಮೂರ್ತಿ ಹಾಗೂ ಇತರ ಸಿಬಂದಿಗೆ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸುವ ಆಶ್ವಾಸನೆ ನೀಡಿದರು. ಇದಕ್ಕೆ ನ್ಯಾಯಾಲಯ ಒಪ್ಪಿಗೆ ಸೂಚಿಸಿತು. ಅದರಂತೆ, ಸೋಮವಾರ ವಿಶೇಷ ಪ್ರದರ್ಶನ ನಡೆಯಲಿದೆ.
ಸ್ನೇಹಿತನಿಂದಲೇ ಅತ್ಯಾಚಾರ : ಪದ್ಮಾವತ್ ಸಿನಿಮಾ ವೀಕ್ಷಣೆಗೆ ಹೋಗಿದ್ದ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಮೂರು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಪರಿಚಿತನಾದ ವ್ಯಕ್ತಿ ಜತೆ ಯುವತಿ ಸಿನಿಮಾ ವೀಕ್ಷಣೆಗೆ ತೆರಳಿದ್ದರು. ಚಿತ್ರಮಂದಿರ ಬಹುತೇಕ ಖಾಲಿಯಿದ್ದದ್ದನ್ನು ದುರುಪಯೋಗ ಮಾಡಿಕೊಂಡ ಯುವಕ ಈ ಕೃತ್ಯ ಎಸಗಿದ್ದಾನೆ. ಈ ಸಂಬಂಧ ಯುವತಿ ಪೊಲೀಸರಿಗೆ ದೂರು ನೀಡಿದ್ದಳು.
‘ಪದ್ಮಾವತ್’ ಚಿತ್ರದ ಗೆಲುವು ಮಹಿಳೆಯರ ಗೆಲುವು. ಇಡೀ ಚಿತ್ರ ಸ್ತ್ರೀತನವನ್ನು ಆಚರಿಸುತ್ತದೆ. ನನ್ನ ಪಾಲಿಗೆ ಇದೊಂದು ದೊಡ್ಡ ಜಯ.
– ದೀಪಿಕಾ ಪಡುಕೋಣೆ, ಚಿತ್ರ ನಟಿ