ಬಂಟ್ವಾಳ: ಪೊಳಲಿ ಶ್ರೀ ರಾಜ ರಾಜೇಶ್ವರೀ ದೇವಸ್ಥಾನದ ಜಾತ್ರಾ ಸಮಯದಲ್ಲಿ ತೀಯಾ ಸಮಾಜದವರಿಗೆ ಒಂದು ವಿಶಿಷ್ಟ ಸೇವೆ ಸಲ್ಲಿಸುವ ಅವಕಾಶವಿದ್ದು, ಪೊಳಲಿ ಕ್ಷೇತ್ರಕ್ಕೆ ನಂದ್ಯ ಕ್ಷೇತ್ರದಿಂದ ಶ್ರೀ ಭಗವತಿ, ಶ್ರೀ ಭದ್ರಕಾಳಿ ಹಾಗೂ ಅರಸು ದೈವಗಳ ಭಂಡಾರವು ಫಲ್ಗುಣಿ ನದಿಯನ್ನು ದೋಣಿ ಮೂಲಕ ದಾಟಿ ಆಗಮಿಸುವುದು ವಿಶೇಷವಾಗಿದೆ.
ಪೊಳಲಿ ಕ್ಷೇತ್ರದ ಧ್ವಜಾರೋಹಣದ ದಿನ ರಾತ್ರಿ ಶ್ರೀ ಭಗವತಿ ತೀಯಾ ಸಮಾಜ ಕೇಂದ್ರ ಸ್ಥಳವಾದ ಶ್ರೀ ನಂದ್ಯ ಕ್ಷೇತ್ರದಿಂದ ದೈವಗಳ ಭಂಡಾರವು ಶ್ರೀ ಕ್ಷೇತ್ರ ಪೊಳಲಿಗೆ ಬಂದಿದ್ದು, ದೋಣಿ ಮೂಲಕ ಬಂದ ಭಂಡಾರವು ಮುಂದೆ ಸೂಟೆಯ ಬೆಳಕಿನಲ್ಲಿ ನಡೆದುಕೊಂಡೇ ಸಾಗಿದೆ.
ವಿಶಿಷ್ಟ ಸಂಪ್ರದಾಯ
ನಂದ್ಯದ ಕ್ಷೇತ್ರದಿಂದ ಬಂದ ಭದ್ರಕಾಳಿಯ ಬಿಂಬವನ್ನು ಧರಿಸಿದವರು ಜಾತ್ರೆಯ ದಿನಾಂಕವನ್ನು ಪ್ರಕಟಿಸುವುದು ಕೂಡ ವಿಶಿಷ್ಟ ಸಂಪ್ರದಾಯವಾಗಿದೆ. ಮುಂದೆ ಶ್ರೀ ಅಖೀಲೇಶ್ವರ ದೇವಸ್ಥಾನಕ್ಕೆ ತೆರಳಿ ಅಲ್ಲಿ ಆರಾಡ ಕರೆದು, ಮರುದಿನ ತೀಯಾ ಸಮಾಜ ಬಾಂಧವರು ಭದ್ರಕಾಳಿಯನ್ನು ಅವಾಹಿಸಿಕೊಂಡವರನ್ನು ಸುಲಿಕ್ಕಿಪಡ್ಪು ಮಹಾಮ್ಮಾಯಿ ಕಟ್ಟೆಗೆ ಕರೆದುಕೊಂಡು ಅಲ್ಲಿ ಆರಾಡ ಕರೆಯಲಾಗುತ್ತದೆ. ಮತ್ತೆ ದೋಣಿಯ ಮೂಲಕ ಫಲ್ಗುಣಿ ನದಿಯನ್ನು ದಾಟಿ ನಂದ್ಯ ಕ್ಷೇತ್ರದಲ್ಲಿ ಆರಾಡ ಕರೆಯಲಾಯಿತು. ಬಳಿಕ ಪರಿಚಾರಕರಿಗೆ ತಮ್ಮನ ಹಾಗೂ ಗೌರವಧನವನ್ನು ನೀಡುವ ಕಾರ್ಯ ನೆರವೇರಿತು.
ನಂದ್ಯ ಕ್ಷೇತ್ರದ ಆನುವಂಶೀಯ ಆಡಳಿತ ಮೊಕ್ತೇಸರ ಸುಂದರ ಬೆಳ್ಚಡ ನಂದ್ಯ, ಅಧ್ಯಕ್ಷ ಚಿದಾನಂದ ಗುರಿಕಾರ ನಂದ್ಯ, ಪ್ರಧಾನ ಕಾರ್ಯದರ್ಶಿ ಬಿ. ಜನಾರ್ದನ ಅಮ್ಮುಂಜೆ, ಉಳ್ಳಾಲ ಶ್ರೀ ಭಗವತಿ ಕ್ಷೇತ್ರದ ಚಂದ್ರಹಾಸ್ ಉಳ್ಳಾಲ, ಆಡಳಿತ ಮೊಕ್ತೇಸರ ಗಂಗಾಧರ ಉಳ್ಳಾಲ, ಕಾರ್ಯದರ್ಶಿ ಯಶವಂತ ಉಚ್ಚಿಲ, ಕೋಶಾಧಿಕಾರಿ ಉಮೇಶ ಬೆಂಜನಪದವು, ಆಚಾರ ಪಟ್ಟವರು ಹಾಗೂ ಗುರಿಕಾರರು ಉಪಸ್ಥಿತರಿದ್ದರು.