ವಿಜಯಪುರ: ಸಿದ್ಧೇಶ್ವರ ಶ್ರೀಗಳ ಅಗಲಿಕೆ ಹಿನ್ನೆಲೆಯಲ್ಲಿ ಇಡೀ ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ಎಲ್ಲ ವ್ಯಾಪಾರ, ವಹಿವಾಟು ಕೂಡ ಸ್ಥಗಿತಗೊಳಿಸಿ, ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಶ್ರೀಗಳಿಗೆ ಗೌರವ ಸಲ್ಲಿಸಿದ್ದಾರೆ.
ಸೋಮವಾರ ರಾತ್ರಿ ಸಿದ್ಧೇಶ್ವರ ಶ್ರೀಗಳು ನಿಧನರಾದ ಸುದ್ದಿ ಮಾಧ್ಯಮಗಳಲ್ಲಿ ಬರುತ್ತಲೇ ಜಿಲ್ಲೆಯ ಬಹುತೇಕ ವ್ಯಾಪಾರಿಗಳು ತಮ್ಮ ಅಂಗಡಿ, ವ್ಯಾಪಾರ, ವಹಿವಾಟು ಬಂದ್ ಮಾಡಿ ಮನೆಗೆ ತೆರಳಿದರು.
ಮಂಗಳವಾರ ಬೆಳಿಗ್ಗೆಯೂ ಅಂಗಡಿಗಳನ್ನು ತೆರೆಯದೇ ಶ್ರೀಗಳ ಗೌರವಾರ್ಥ ಜಿಲ್ಲೆಯ ಎಲ್ಲ ವ್ಯಾಪಾರಿಗಳು ವ್ಯಾಪಾರ ಬಂದ್ ಮಾಡಿದ್ದರು. ವಿಜಯಪುರ ನಗರ ಮಾತ್ರವಲ್ಲ ಮುದ್ದೇಬಿಹಾಳ, ಬಸವನಬಾಗೇವಾಡಿ, ಸಿಂದಗಿ, ಚಡಚಣ, ತಾಳಿಕೋಟೆ, ಬಬಲೇಶ್ವರ, ತಿಕೋಟಾ, ದೇವರಹಿಪ್ಪರಗಿ, ಕೊಲ್ಹಾರ, ಇಂಡಿ, ಹೂವಿನಹಿಪ್ಪರಗಿ, ನಿಡಗುಂದಿ, ಆಲಮಟ್ಟಿ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲ ಕಡೆಗಳಲ್ಲಿ ಸ್ವಯಂ ಪ್ರೇರಿತ ಬಂದ್ ಮಾಡಲಾಗಿತ್ತು.
ಸದಾ ಜನರಿಂದ ತುಂಬಿರುತ್ತಿದ್ದ ನಗರದ ಪ್ರಮುಖ ವಾಣಿಜ್ಯ ಕೇಂದ್ರ ಲಾಲ್ ಬಹಾದ್ದೂರ ಶಾಸ್ತ್ರೀ ಮಾರುಕಟ್ಟೆ, ನೆಹರು ಮಾರುಕಟ್ಟೆ, ಸರಾಫ್ ಬಜಾರ, ಜವಳಿ ಮಾರುಕಟ್ಟೆ, ಸಗಟು ಕಿರಾಣಿ ಮಾರುಕಟ್ಟೆ, ಎಪಿಎಂಸಿ, ಶ್ರೀಸಿದ್ಧೇಶ್ವರ ರಸ್ತೆ, ಮಹಾತ್ಮಾ ಗಾಂಧೀಜಿ ರಸ್ತೆ, ರಾಮ ಮಂದಿರ ರಸ್ತೆ, ಲಿಂಗದಗುಡಿ ರಸ್ತೆ, ರೈಲ್ವೇ ಸ್ಟೇಶನ್ ರಸ್ತೆ, ಜಲನಗರ, ಗಣೇಶನಗರ, ಸೋಲಾಪುರ ರೋಡ, ಆಶ್ರಮ ರಸ್ತೆ ಹೀಗೆ ಇಡೀದ ನಗರದ ಎಲ್ಲ ವ್ಯಾಪಾರ ವಹಿವಾಟೂ ಸಂಪೂರ್ಣವಾಗಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಗೌರವ ಸಲ್ಲಿಸಲಾಯಿತು.