Advertisement

ಸ್ಪರ್ಧಾತ್ಮಕ ಯುಗಕ್ಕೆ ಹೊಂದಿಕೊಳ್ಳುವುದು ಅನಿವಾರ್ಯ

02:57 PM Apr 26, 2019 | Naveen |

ಭಾಲ್ಕಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಜ್ಞಾನ, ತಂತ್ರಜ್ಞಾನದಲ್ಲಿ ಆಗುತ್ತಿರುವ ಬದಲಾವಣೆಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕಿದೆ ಎಂದು ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ನಿರ್ದೇಶಕ ಗುರುಪ್ರಸಾದ ಈಶ್ವರ ಖಂಡ್ರೆ ಹೇಳಿದರು.

Advertisement

ಪಟ್ಟಣದ ಭೀಮಣ್ಣ ಖಂಡ್ರೆ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಬಿಕೆಐಟಿ, ಝಿಬರಾ ಟೆಕ್ನಾಲೋಜಿ ಬೆಂಗಳೂರು, ಫೇರ್‌ ಬೆಂಗಳೂರು ಮತ್ತು ಡಯಟ್ ಬೀದರ್‌ ಸಹಯೋಗದಲ್ಲಿ ಆಯ್ಕೆಯಾದ 9ನೇ ತರಗತಿಯ ಟಾಪರ್‌ ವಿದ್ಯಾರ್ಥಿಗಳಿಗಾಗಿ ಗುರುವಾರ ಆಯೋಜಿಸಿದ್ದ ಮೂರು ವಾರದ ವಿಶೇಷ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ಅಗಾಧ ಪ್ರತಿಭೆ ಅಡಗಿದೆ. ಅದನ್ನು ಗುರುತಿಸಿಕೊಳ್ಳಲು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ ಸಹಕಾರಿಯಾಗಲಿದೆ. ವಿದ್ಯಾರ್ಥಿಗಳು ಮೂರು ವಾರಗಳ ಕಾಲ ನಡೆಯಲಿರುವ ಶಿಬಿರದ ಸದುಪಯೋಗ ಪಡೆಯಬೇಕು ಎಂದು ಹೇಳಿದರು.

ವಿಟಿಯುನ ಪ್ರಾದೇಶಿಕ ನಿರ್ದೇಶಕ ಡಾ|ಬಸವರಾಜ ಗಾದಗೆ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಜ್ಞಾನದ ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅಭಿರುಚಿ ಬೆಳೆಸಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ. ಶಿಬಿರದಲ್ಲಿ ಕಲಿತ ವಿಷಯಗಳನ್ನು ವಿದ್ಯಾರ್ಥಿಗಳು ಮುಂದಿನ ದಿನಗಳಲ್ಲಿ ತಮ್ಮ ಶಾಲೆಯ ಸಹಪಾಠಿಗಳೊಂದಿಗೆ ಹಂಚಿಕೊಂಡು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿನ ಮಹತ್ವ ವಿವರಿಸಬೇಕು ಎಂದು ಹೇಳಿದರು.

ಶಿವಾಜಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಚಂದ್ರಕಾಂತ ಬಿರಾದಾರ್‌ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಹಂತದಿಂದಲೇ ಮಾತೃಭಾಷೆಯ ಗಟ್ಟಿತನದ ಬಗ್ಗೆ ಹೇಳಿಕೊಡುವ ಅಗತ್ಯವಿದೆ. ಶಿಕ್ಷಣ ಕ್ಷೇತ್ರದಲ್ಲಿ ಇನಷ್ಟು ಗುಣಾತ್ಮಕ ಬದಲಾವಣೆ ಆಗಬೇಕಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಕ್ರಾಂತಿ ನಡೆದಿದೆ. ವಿದ್ಯಾರ್ಥಿಗಳು ಮೊಬೈಲ್ ದುರ್ಬಳಕೆ ಮಾಡಿಕೊಳ್ಳದೇ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

Advertisement

ಚನ್ನಬಸವೇಶ್ವರ ಗುರುಕುಲದ ಪ್ರಾಚಾರ್ಯ ಬಸವರಾಜ ಮೊಳಕೀರೆ ಮಾತನಾಡಿ, ಜಗತ್ತಿನ ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಯಲ್ಲಿ ನಮ್ಮ ದೇಶದ ಕೊಡುಗೆ ಬಹುಪಾಲು ಇದೆ. ನಾಸಾ ಸಂಸ್ಥೆಯಲ್ಲಿ ಶೇ.60ರಷ್ಟು ನಮ್ಮ ದೇಶದ ವಿಜ್ಞಾನಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಾರ್ಗದರ್ಶನ ಕೊರತೆಯಿಂದ ನಮ್ಮ ಭಾಗದ ವಿದ್ಯಾರ್ಥಿಗಳ ಪ್ರತಿಭೆ ಸರಿಯಾಗಿ ಅನಾವರಣಗೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತ ಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ| ನಾಗಶೆಟ್ಟಿ ಬಿರಾದಾರ್‌ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ವಿಕಸನಕ್ಕೆ ಈ ಶಿಬಿರ ಸಹಕಾರಿಯಾಗಲಿದ್ದು, ವ್ಯಕ್ತಿತ್ವ ವಿಕಸನ, ಇಂಗ್ಲಿಷ್‌ ಭಾಷೆ ಮೇಲಿನ ಹಿಡಿತ, ಕ್ಯಾರಿಯರ್‌ ಗೈಡೆನ್ಸ್‌, ಆರೊಗ್ಯ ತಪಾಸಣೆ, ಯೋಗ, ಕ್ರೀಡೆ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಪರಿಣಿತರಿಂದ ಮಾಹಿತಿ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.

ಡಾ| ರಾಹುಲ್ ಭೂಮೆ, ಡಯಟ್ ಪ್ರಾಚಾರ್ಯ ಮಹ್ಮದ್‌ ಗುಲಶನ್‌ ಮಾತನಾಡಿದರು. ಈ ಸಂದರ್ಭದಲ್ಲಿ ಪ್ರೊ| ಪಿ.ಎನ್‌.ದಿವಾಕರ್‌ ಹಾಗೂ ಇನ್ನಿತರರು ಇದ್ದರು. ಡಾ| ಸಂಜಯ ಗೌರೆ ಸ್ವಾಗತಿಸಿದರು. ಬಸವರಾಜ ಕಾವಡಿ ನಿರೂಪಿಸಿದರು. ಸಂಗೀತಾ ವಿ. ಸ್ವಾಮಿ ವಂದಿಸಿದರು

Advertisement

Udayavani is now on Telegram. Click here to join our channel and stay updated with the latest news.

Next