ಭಾಲ್ಕಿ: ಕಳೆದ ಕೆಲವು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮ ತಾಲೂಕಿನ ಆನಂದವಾಡಿ, ನಿಡೇಬಾನ ಗ್ರಾಮಗಳ ಮಧ್ಯದಲ್ಲಿರುವ ಕಾರಂಜಾ ನದಿಯ ಮೇಲಿರುವ ಬ್ರಿಜ್ ಮುಳಗಡೆಯಾಗಿ ನಿಡೇಬಾನ ಸೇರಿದಂತೆ ಪಕ್ಕದ ಗ್ರಾಮಗಳ ಗ್ರಾಮಸ್ಥರು ಸೋಮವಾರ ಕೆಲಕಾಲ ಸಂಚಾರದಿಂದ ವಂಚಿತರಾಗಬೇಕಾಯಿತು.
ಪ್ರತಿವರ್ಷವೂ ಮಳೆ ಹೆಚ್ಚಾದಾಗ, ಕಾರಂಜಾ ಜಲಾಶಯದಿಂದ ನೀರು ಹರಿಬಿಟ್ಟಾಗ ಈ ಬ್ರಿಜ್ ಮೇಲಿರುವ ಗ್ರಾಮಗಳ ಜನರು ತಾಲೂಕು ಕೇಂದ್ರದಿಂದ ಸಂಪರ್ಕ ಕಡಿದುಕೊಳ್ಳುತ್ತಾರೆ. ಹೀಗಾಗಿ ಈ ಬ್ರಿಜ್ ಎತ್ತರ ಹೆಚ್ಚಿಸುವ ಬಗ್ಗೆ ನಿಡೇಬಾನ ಸೇರಿದಂತೆ ಹತ್ತಿರವಿರುವ ಗೋರಚಿಂಚೋಳಿ, ಕೋರುರ, ಕೊಟಗೀರ ಗ್ರಾಮಸ್ಥರು ಒತ್ತಾಯಿಸುತ್ತಾರೆ.
ಇದನ್ನೂ ಓದಿ:ಸರ್ಕಾರಿ ದೇವಸ್ಥಾನಗಳಿಗೆ ದೇವರೇ ಮಾಲಿಕರು!
ಈ ವರ್ಷ ಸಾಕಷ್ಟು ಮಳೆಯಾಗಿ ಉದ್ದು, ಸೋಯಾ ಸೇರಿದಂತೆ ಬೆಳೆದ ಎಲ್ಲಾ ಬೆಳೆಗಳು ಹಾಳಾಗಿವೆ, ನದಿಯ ಹತ್ತಿರವಿರುವ ಹೊಲಗಳಿಗೆ ನೀರು ನುಗ್ಗಿ ನದಿ ಪಕ್ಕದ ಎಲ್ಲಾ ಹೊಲಗಳು ಸಂಪೂರ್ಣ ಮುಳಗಡೆಯಾಗಿವೆ. ಇದರಿಂದ ಈ ಭಾಗದ ರೈತರು ಪರಿತಪಿಸುವಂತಾಗಿದೆ. ಸರ್ಕಾರ ಆದಷ್ಟು ಬೇಗ ಪರಿಹಾರ ಒದಗಿಸಬೇಕು ಎನ್ನುತ್ತಾರೆ ಆನಂದವಾಡಿ ಗ್ರಾಮದ ಯುವ ಮುಖಂಡ ಸಂಗಮೇಶ ಭೂರೆ.