ಸಪ್ತ ಸ್ವರಗಳು, ಸಪ್ತ ತಾಳಗಳು ಹೇಗೆ ಸಂಗೀತದಲ್ಲಿ ಪ್ರಧಾನವೊ ಅದೇ ರೀತಿಯಲ್ಲಿ ನಮ್ಮ ಸಂಸ್ಕೃತಿಯ ನಂಬಿಕೆಯ ದೇವ, ದೇವಿಯರಲ್ಲಿ ಸಪ್ತ ಮಾತೃಕೆಯರಿಗೆ ವಿಶೇಷ ಸ್ಥಾನವಿದೆ. ಏಳು ದೇವಿಯರ ಅವತಾರವೇ ಸಪ್ತ ಮಾತೃಕೆಯರು. ಬ್ರಾಹ್ಮಿ, ಮಾಹೇಶ್ವರೀ, ಕೌಮಾರಿ, ವೈಷ್ಣವಿ, ವರಾಹಿ, ನಾರಸಿಂಹೀ, ಇಂದ್ರಾಣಿ, ಇವರ ಬಗ್ಗೆ ಕಥಾ ವಾಚನ ಮಾಡುತ್ತಾ ಅದಕ್ಕೆ ಸಂಬಂಧಿಸಿದ ಹಾಡುಗಳನ್ನು ಶ್ರುತಿ, ಲಯ ಬದ್ಧವಾಗಿ ಹಾಡಿ ಜೊತೆಯಲ್ಲಿ ಭಕ್ತಿ ಭಾವಗೀತೆ, ಜನಪದ, ಭಜನೆ, ದಾಸರಪದಗಳನ್ನು ಹಾಡಿದ ಸಪ್ತ ಮಾತೃಕೆಯರ ಗೀತ ಗಾಯನ ಸುಮಧುರ ಸಂಗೀತ ಕಾರ್ಯಕ್ರಮ ಕಾವು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ನಡುದೀಪೋತ್ಸವದಂದು ಕುಮಾರ್‌ಪೆರ್ನಾಜೆಯವರ ಸಾರಥ್ಯದಲ್ಲಿ ನಡೆದು ಪೇಕ್ಷಕರನ್ನು ರಂಜಿಸಿತು.
ಮೊದಲಿಗೆ ಅಮ್ಮ ಆನಂದ ದಾಯಿನಿ ಆದಿ ತಾಳ ಗಂಭೀರ ನಾಟ ರಾಗದ ಡಾ| ಬಾಲಮುರಳಿ ಕೃಷ್ಣ ರ ಹಾಡಿನೊಂದಿಗೆ ತದನಂತರ ಮುತ್ತುಸ್ವಾಮಿ ದೀಕ್ಷಿತರ ಗಜಾನನ ಯುತಂ, ಸರಸ್ವತಿ, ಮಹಾದೇವ ಶಿವ ಶಂಭೊ, ಹಿಮಾದ್ರಿ ಸುತೆ, ಶ್ರೀ ರಾಮ ನಿನಾಮ ಹಾಡುಗಳನ್ನು ಸವಿತಾ ಕೋಡಂದೂರು ಮತ್ತು ಸ್ವರ ಸಿಂಚನ ಬಳಗದವರು ಹಾಡಿದರು.
ಜಲ್ಲೇ ಕಬ್ಬು, ಕಾಗದ ಬಂದಿದೆ, ಗರುಡ ಗಮನ,ಅಣ್ಣ ಬರುತಾನೆ, ದುಡ್ಡು ಕೊಟ್ಟರೆ ಮತ್ತಿತರ ಹಾಡುಗಳಿಂದ ತಮ್ಮದೇ ಶೈಲಿಯಲ್ಲಿ ಗಮನ ಸೆಳೆದರು. ಬಾಲ ತ್ರಿಪುರ, ಪಾಹಿ ಶಿವೆ, ಸಗಮಗ, ನಾರಸಿಂಹನೆಂಬೋ, ತಾಮ್ರ ಲೋಚನ, ಗುಬ್ಬಿ ಆಡೊ, ವರ ಲೀಲ ಗಾನ ಸಿಹಿಯಾದ ಗಾನ ಸಿಹಿಯಾದ ರಾಗದ ಭಾವ ಪೂರ್ಣ ಗೀತೆ ಗಾನೋತ್ಸಾಹದಲ್ಲಿ ಮೆರೆದ ಶ್ರಾವ್ಯ ಸಂಗೀತ ಹಾಡು ಮುಗಿದರು ಅದರ ಗುಂಗು ಉಳಿಯುವಂತೆ ಮಾಡಿತು.
ವಿಟ್ಲ ಸ್ವರ ಸಿಂಚನ ಸಂಗೀತ ಶಾಲಾ ಶಿಕ್ಷಕಿ ಸವಿತಾ ಕೋಡಂದೂರು, ಕು| ಸಿಂಚನ ಲಕ್ಷ್ಮೀ, ರಮ್ಯಾ ಜೆಡ್ಡು, ವಾಣಿ ನೆಗಳಗುಳಿ, ಪ್ರತಿಭಾ ಅಳಿಕೆ, ಮನಿಷಾ ಚಂದಳಿಕೆ, ರಕ್ಷಾ ಕನ್ಯಾನ, ಶ್ರೀವಿದ್ಯಾ ಜೆಡ್ಡು ಹಾಡುಗಾರಿಕೆಯಲ್ಲಿ ಪ್ರತಿಭೆ ಮೆರೆದರು.ವಯಲಿನ್‌ನಲ್ಲಿ ಪ್ರಿಯಾ ಬೆಟ್ಟುಗದ್ದೆ, ತಬಲಾ ವಾದನದಲ್ಲಿ ಪ್ರಶಾಂತ್ ಬದಿಯಡ್ಕ, ಕೀ ಬೋರ್ಡ್‌ನಲ್ಲಿ ವರ್ಮಾ ವಿಟ್ಲ ಸಹಕರಿಸಿದರು. ಸಪ್ತ ಮಾತೃಕೆಯರ ವಾಚನದಲ್ಲಿ ಉಷಾ ಸುಬ್ರಹ್ಮಣ್ಯ ಶೆಟ್ಟಿ ಒಡಿಯೂರು, ರತ್ನಾವತಿ ತಲ್ಚೆರಿ, ಡಾ| ಸದಾಶಿವ ಭಟ್ ಸರವು ಸಪ್ತ ಮಾತೃಕೆಯರ ಮಾಹಿತಿಯನ್ನು ನೀಡಿದರು.
ನಂದನ್ ಪೆರ್ನಾಜೆ