ನವದೆಹಲಿ: ಹದಿನಾರನೇ ಆವೃತ್ತಿಯ ಐಪಿಎಲ್ ಆರಂಭಕ್ಕೆ ಉಳಿದಿರುವುದು ಇನ್ನೊಂದೇ ವಾರ. ಅಂದು ಅಹ್ಮದಾಬಾದ್‌ನಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಎದುರಾಗುವುದರೊಂದಿಗೆ 2023ನೇ ಸಾಲಿನ ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಗರಿಗೆದರಲಿದೆ.
ಇದಕ್ಕೂ ಮೊದಲು ಈ ಪಂದ್ಯಾವಳಿಯ ವೀಕ್ಷಕ ವಿವರಣೆಕಾರರ ತಂಡ ಸಜ್ಜಾಗಿದೆ. ಮಾಜಿ ಕ್ರಿಕೆಟಿಗರಾದ ಹರ್ಭಜನ್ ಸಿಂಗ್ ಮತ್ತು ಎಸ್.ಶ್ರೀಶಾಂತ್ “ಸ್ಟಾರ್ ಸ್ಪೋರ್ಟ್ಸ್” ವೀಕ್ಷಕ ವಿವರಣೆ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಮತ್ತೋರ್ವ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಕೂಡ ವೀಕ್ಷಕ ವಿವರಣೆ ನೀಡಲಿದ್ದಾರೆ.
ಹರ್ಭಜನ್ ಸಿಂಗ್ ಮತ್ತು ಶ್ರೀಶಾಂತ್ 2008ರ ಐಪಿಎಲ್ ಪಂದ್ಯವೊಂದರ ವೇಳೆ ಬೇಡದ ಕಾರಣವೊಂದಕ್ಕೆ ಸುದ್ದಿಯಾದುದನ್ನು ಮರೆಯುವಂತಿಲ್ಲ. ಅಂದು ಶ್ರೀಶಾಂತ್ ಕೆನ್ನೆಗೆ ಭಜ್ಜಿ ಬಾರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಆಗ ಹರ್ಭಜನ್ ಸಿಂಗ್ ಮುಂಬೈ ಇಂಡಿಯನ್ಸ್ ಪರ, ಶ್ರೀಶಾಂತ್ ಕಿಂಗ್ಸ್ ಇಲೆವೆನ್ ಪಂಜಾಬ್ ಪರ ಆಡುತ್ತಿದ್ದರು. ಆದರೆ ಇತ್ತೀಚಿನ ವಿಡಿಯೊ ಒಂದರ ಮೂಲಕ ತಾವಿಬ್ಬರೂ ಆ ಹಳೆಯ ಘಟನೆಯನ್ನು ಮರೆತ್ತಿದ್ದೇವೆ ಎಂಬುದಾಗಿ ಹೇಳಿಕೊಂಡಿದ್ದರು. ಹೀಗಾಗಿ ಕಮೆಂಟ್ರಿ ಬಾಕ್ಸ್‌ನಲ್ಲಿ ಯಾವುದೇ ಅಹಿತಕರ ವಿದ್ಯಮಾನ ಘಟಿಸಲಿಕ್ಕಿಲ್ಲ ಎಂದು ಭಾವಿಸಬಹುದು!