Advertisement

ತುಳುನಾಡಿನ ಸಂಸ್ಕೃತಿ ಮೇಳೈಸುವ ಗುರಿ: ಕಾವೂರುಗುತ್ತು ಹೇಮಂತ್‌ ಶೆಟ್ಟಿ

12:39 PM Nov 24, 2021 | Team Udayavani |

ಡೊಂಬಿವಲಿ: ನಮ್ಮ ತುಳುನಾಡಿನ ಶ್ರೀಮಂತ ಸಾಹಿತ್ಯ, ಸಂಸ್ಕೃತಿ ಹಾಗೂ ಕಲೆಗಳನ್ನು ಡೊಂಬಿವಲಿ ತುಳುಕೂಟವು ಉಳಿಸಿ-ಬೆಳೆಸಲು ಕಂಕಣಬದ್ಧರಾಗು ವುದರ ಜತೆಗೆ ತುಳುನಾಡಿನ ರಾಯಭಾರಿಯಂತೆ ಕಾರ್ಯನಿರ್ವಹಿಸಲಿದೆ ಎಂದು ಡೊಂಬಿವಲಿ ತುಳುಕೂಟದ ಅಧ್ಯಕ್ಷ ಕಾವೂರುಗುತ್ತು ಹೇಮಂತ್‌ ಶೆಟ್ಟಿ  ತಿಳಿಸಿದರು.

Advertisement

ಡೊಂಬಿವಲಿ ಆಜ್ದೆಪಾಡಾ ಶ್ರೀ ಅಯ್ಯಪ್ಪ ಮಂದಿರದ ಸುಧಾಮಾ ಸಭಾಗೃಹದಲ್ಲಿ  ಡೊಂಬಿವಲಿ ತುಳುಕೂಟದ ವತಿಯಿಂದ ನ. 19ರಂದು ದಿ| ಸಂಜೀವ ಎಕ್ಕಾರು ಅವರ ಸ್ಮರಣಾರ್ಥ ಆಯೋಜಿಸಿದ್ದ ಭಜನ ಸ್ಪರ್ಧೆ ಹಾಗೂ ಬಹುಮಾನ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ತುಳುನಾಡಿನ ಭಾಷೆ ಸಂಸ್ಕೃತಿ ಹಾಗೂ ಸಂಸ್ಕಾರದ ಜತೆ ಮಧುರ ಬಾಂಧವ್ಯದ ಬೆಸುಗೆಯನ್ನು ಇನ್ನಷ್ಟು ಗಟ್ಟಿಗೂಳಿಸುವ ಉದ್ದೇಶದಿಂದ ಅಂದು ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರ ಪರಿಕಲ್ಪನೆಯಿಂದ ಪ್ರಾರಂಭವಾದ ಈ ಸಂಸ್ಥೆ ಪರಿಸರದ ಯುವ ಪ್ರತಿಭೆಗಳಿಗೆ ವೇದಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ತುಳು ಬಾಂಧವರು ತುಳುಕೂಟದ ಸದಸ್ಯತ್ವ ಹೊಂದಿ ಸಂಸ್ಥೆಯ ನೂತನ ಪರಿಕಲ್ಪನೆಯ ಕಾರ್ಯಕ್ಕೆ ಸಹಕರಿಸಬೇಕು. ಇತ್ತೀಚೆಗೆ ನಮ್ಮನ್ನಗಲಿದ ಸಂಸ್ಥೆಯ ಕಾರ್ಯದರ್ಶಿ ದಿ| ಸಂಜೀವ ಎಕ್ಕಾರು ಅವರು ತುಳುನಾಡಿನ ಭಾಷೆಯ ಅಭಿಮಾನಿಯಾಗಿದ್ದರು. ಅವರ ಸ್ಮರಣಾರ್ಥ ಆಯೋಜಿಸಿದ್ದ ಭಜನ ಸ್ಪರ್ಧೆ ತಮ್ಮೆಲ್ಲರ ಸಹಾಯ, ಸಹಕಾರದಿಂದ ಯಶಸ್ವಿಯಾಗಿದೆ. ತುಳುಕೂಟದ ಕಾರ್ಯಕ್ಕೆ ತಮ್ಮ ಸಹಕಾರ ಸದಾ ಇರಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ಬಂಟರ ಸಂಘ ಮುಂಬಯಿ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಮಾತನಾಡಿ, ಹೇಮಂತ್‌ ಶೆಟ್ಟಿ ಅವರ ಸಾರಥ್ಯದಲ್ಲಿ ತುಳುಕೂಟ ಹೊಸ ರೂಪ ಪಡೆಯುತ್ತಿದೆ. ಇಂದಿನ ಈ ಭಜನ ಸ್ಪರ್ದೆ ಶ್ರೀ ಅಯ್ಯಪ್ಪ ಸ್ವಾಮಿಗೆ ಅರ್ಪಿತವಾಗಿದೆ. ಹತ್ತು ತಂಡಗಳು ತುಳುಭಾಷೆಯ ಮೂವತ್ತು ಭಜನೆಗಳ ಮೂಲಕ ಪರಮಾತ್ಮನ ನಾಮಾಮೃತದ ಸವಿಯ ರಸದೌತಣ ನೀಡಿವೆ. ಭಜನೆಗಳು ನಮಗೆ ಮನಃಶಾಂತಿಯ ಜತೆಗೆ ಆತ್ಮಸ್ಥೈರ್ಯ ನೀಡುತ್ತವೆ ಎಂದು ತಿಳಿಸಿ ಶುಭ ಹಾರೈಸಿದರು.

ಅತಿಥಿಯಾಗಿದ್ದ ಬಂಟ್ಸ್‌ ಅಸೋಸಿಯೇಶನ್‌ ಅಧ್ಯಕ್ಷ ಮುರಳಿ ಕೆ. ಶೆಟ್ಟಿ  ಮಾತನಾಡಿ, ತುಳು ಭಾಷೆಯನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ  ತುಳುಕೂಟ ಆಯೋಜಿಸಿದ್ದ ತುಳು ಭಜನ ಸ್ಪರ್ಧೆ ಅಭಿನಂದನೀಯ. ನಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿರಲಿ ಎಂದು ತಿಳಿಸಿ ಶುಭ ಹಾರೈಸಿದರು.

ಶ್ರದ್ಧಾ ಬಂಗೇರ ಅವರ ಪ್ರಾರ್ಥನೆಯೊಂದಿಗೆ ಗಣ್ಯರು ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಪಸ್ಥಿತರಿದ್ದ ನಗರದ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳನ್ನು ಪುಷ್ಪಗುತ್ಛ ನೀಡಿ ಗೌರವಿಸಲಾಯಿತು. ಭಜನ ಸ್ಪರ್ಧೆಯಲ್ಲಿ ಶ್ರೀ ಅಯ್ಯಪ್ಪ ಭಕ್ತ ಮಂಡಳಿ ಡೊಂಬಿವಲಿ ಆಜೆªಪಾಡಾ ಪ್ರಥಮ, ಶ್ರೀ ರಾಧಾಕೃಷ್ಣ ಭಜನ ಮಂಡಳಿ ದ್ವಿತೀಯ, ಮುಂಬ್ರಾ ಮಿತ್ರ ಭಜನ ಮಂಡಳಿ ತೃತೀಯ ಸ್ಥಾನ ಪಡೆಯಿತು. ಚಿಣ್ಣರ ಬಿಂಬ ಹಾಗೂ ಇನ್ನಿತರ ತಂಡಗಳನ್ನು ಸಮಾಧಾನಕರ ಬಹುಮಾನ ನೀಡಿ ಗೌರವಿಸಲಾಯಿತು.

Advertisement

ಅತಿಥಿಗಳಾಗಿ ಇಂದ್ರಾಳಿ ದಿವಾಕರ ಶೆಟ್ಟಿ, ಸತೀಶ್‌ ಸಾಲ್ಯಾನ್‌, ಹರೀಶ್‌ ಶೆಟ್ಟಿ, ಪ್ರಕಾಶ ಭಟ್‌ ಕಾನಂಗಿ, ರಾಜೀವ ಭಂಡಾರಿ, ಕಲ್ಲಡ್ಕ ಕರುಣಾಕರ ಶೆಟ್ಟಿ, ಸದಾನಂದ ಶೆಟ್ಟಿ, ಧರ್ಮದರ್ಶಿ ಅಶೋಕ್‌ ದಾಸು ಶೆಟ್ಟಿ, ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು.

ರವಿ ಸನಿಲ್‌ ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಭಜನ ಸ್ಪರ್ಧೆಯ ತೀರ್ಪುಗಾರರಾಗಿ ಸುರೇಶ್‌ ಶೆಟ್ಟಿ, ದೇವಾನಂದ ಕೊಟ್ಯಾನ್‌ ಹಾಗೂ ಶೇಖರ ಸಸಿಹಿತ್ಲು ಸಹಕರಿಸಿದರು. ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ  ಭಾಗವಹಿಸಿದ್ದರು.

ಡೊಂಬಿವಲಿ ತುಳುಕೂಟದ ಮೂಲಕ ಅರ್ಥಪೂರ್ಣವಾದ ಕಾರ್ಯಕ್ರಮ ನಡೆದಿದೆ. ಮರಾಠಿಯ ಮಣ್ಣಿನಲ್ಲಿ ತುಳುನಾಡಿನ ಸಂಸ್ಕಾರ ಹಾಗೂ ಸಂಸ್ಕೃತಿಯನ್ನು ಉಳಿಸಿ-ಬೆಳೆಸುವ ಕಾರ್ಯ ತುಳುಕೂಟದ ಅಧ್ಯಕ್ಷ ಹೇಮಂತ್‌ ಶೆಟ್ಟಿ ಅವರ ಸಾರಥ್ಯದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಕಲೆಯೇ ಜೀವನದ ನೆಲೆ ಎಂದು ಭಾವಿಸಿ ಕಲಾರಾಧನೆಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟ ದಿ| ಸಂಜೀವ ಎಕ್ಕಾರು ಸ್ಮರಣಾರ್ಥ ವೇದಿಕೆ ನಿರ್ಮಿಸಿ ಕಾರ್ಯಕ್ರಮ ಆಯೋಜಿಸಿ ಅಗಲಿದ ಮಹಾನ್‌ ಚೇತನಕ್ಕೆ ಗೌರವ ಸೂಚಿಸಿದ್ದೀರಿ. ತುಳು ಭಾಷೆ ಹಾಗೂ ಸಂಸ್ಕೃತಿಯ ಆರಾಧನೆ ನಿರಂತರವಾಗಿ ನಡೆಯಲಿ. ಡೊಂಬಿವಲಿ ಅಷ್ಟೇ ಅಲ್ಲ ಸಮಸ್ತ ತುಳುವರ ಹೃದಯ ಗೆಲ್ಲುವ ಕಾರ್ಯ ತಮ್ಮದಾಗಲಿ.-ಇಂದ್ರಾಳಿ ದಿವಾಕರ ಶೆಟ್ಟಿ, ಅಧ್ಯಕ್ಷರು, ಕರ್ನಾಟಕ ಸಂಘ ಡೊಂಬಿವಲಿ

ಸರ್ವ ಜಾತಿಗಳ ಬಾಂಧವರನ್ನು ಒಗ್ಗೂಡಿಸಿ ಅಸ್ತಿತ್ವಕ್ಕೆ ಬಂದ ತುಳುಕೂಟದಲ್ಲಿ  ಕಾರ್ಯಪ್ರವೃತ್ತರಾಗಿದ್ದ ದಿ| ಸಂಜೀವ ಎಕ್ಕಾರು ಅವರು ರಜಕ ಸಂಘ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದವರು. ನೃತ್ಯ, ಯಕ್ಷಗಾನ ಭಜನೆ ಹಾಗೂ ತಾಳಮದ್ದಳೆಯನ್ನು ಕಲಿಸುತ್ತಿದ್ದ ಅಪ್ರತಿಮ ಕಲಾವಿದರಾಗಿದ್ದ ಅವರ ಸ್ಮರಣಾರ್ಥ ಡೊಂಬಿವಲಿ ತುಳುಕೂಟ ವೇದಿಕೆಯನ್ನು ನಿರ್ಮಿಸಿ ಭಜನ ಸ್ಪರ್ಧೆ ಆಯೋಜಿಸಿದ್ದು ಸಂತೋಷದ ವಿಷಯ. ಡೊಂಬಿವಲಿ ಮಹಾರಾಷ್ಟ್ರದ ತುಳುನಾಡು ಎಂದು ಕೇಳಿದ್ದೆ. ಆದರೆ ಪ್ರತ್ಯಕ್ಷವಾಗಿ ನೋಡುವ ಸೌಭಾಗ್ಯ ಇಂದು ನನಗೆ ದೊರೆಯಿತು. ಡೊಂಬಿವಲಿ ತುಳುಕೂಟದ ಮೂಲಕ ತುಳುವರ ಸಂಸ್ಕೃತಿ ಹಾಗೂ ಸಂಸ್ಕಾರದ ಜತೆಗೆ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯ ನಡೆಯಲಿ.-ಸತೀಶ್‌ ಸಾಲ್ಯಾನ್‌, ಅಧ್ಯಕ್ಷರು, ರಜಕ ಸಂಘ ಮುಂಬಯಿ

ದಿ| ಸಂಜೀವ ಎಕ್ಕಾರು ಬಹುಮುಖ ಪ್ರತಿಭೆಯ ಅಪ್ರತಿಮ ಕಲಾವಿದ. ಅವರ ನೆನಪು ಸದಾ ಹಸುರು. ಇದಕ್ಕೆ ಅವರ ಹೆಸರಿನ ವೇದಿಕೆ ನಿರ್ಮಿಸಿ ಅವರ ಸ್ಮರಣಾರ್ಥ ಆಯೋಜಿಸಿರುವ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ಕಲಾಜಗತ್ತು ತೋನ್ಸೆ ವಿಜಯಕುಮಾರ್‌ ಶೆಟ್ಟಿ ಅವರ ಪರಿಕಲ್ಪನೆಯ ತುಳುಕೂಟ ಇನ್ನಷ್ಟು ಉತ್ತರೋತ್ತರ ಅಭಿವೃದ್ಧಿಯನ್ನು ಹೊಂದಲಿ.-ಅಶೋಕ್‌ ದಾಸು ಶೆಟ್ಟಿ, ಧರ್ಮದರ್ಶಿ, ಡೊಂಬಿವಲಿ ಪ. ವಿಭಾಗ ಸಾರ್ವಜನಿಕ ನವರಾತ್ರೋತ್ಸವ ಮಂಡಳಿ

-ಚಿತ್ರ-ವರದಿ : ಗುರುರಾಜ ಪೋತನೀಸ್‌

Advertisement

Udayavani is now on Telegram. Click here to join our channel and stay updated with the latest news.

Next