Advertisement

ವರ್ಷ 10 ಕಳೆದರೂ ಸಿಕ್ಕಿಲ್ಲ ಭಾಗ್ಯಲಕ್ಷ್ಮೀ ಬಾಂಡ್‌

02:05 AM Aug 06, 2019 | sudhir |

ಕಡಬ: ರಾಮಕುಂಜ ಗ್ರಾಮಸಭೆ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ. ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ಜರಗಿತು.

Advertisement

ಸಹಾಯಕ ಯುವ ಸಬಲೀಕರಣ ಕ್ರೀಡಾಧಿಕಾರಿ ಮಾಮಚ್ಚನ್‌ ಅವರು ನೋಡಲ್ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಷಯ ಪ್ರಸ್ತಾವಿಸಿದ ತಾ.ಪಂ. ಮಾಜಿ ಸದಸ್ಯ ಧರ್ಮಪಾಲ ರಾವ್‌ ಕಜೆ, 2008-09ನೇ ಸಾಲಿನಲ್ಲಿ ಭಾಗ್ಯಲಕ್ಷ್ಮೀ ಯೋಜನೆಗೆ ಸೇರ್ಪಡೆಗೊಂಡ ಫಲಾನುಭವಿಗಳಿಗೆ ಇನ್ನೂ ಬಾಂಡ್‌ ಬಂದಿಲ್ಲ. ಪ್ರತಿ ಗ್ರಾಮಸಭೆಯಲ್ಲೂ ಈ ವಿಚಾರ ಪ್ರಸ್ತಾವಿಸುತಿದ್ದರೂ ಪ್ರಯೋಜನವಾಗಿಲ್ಲ ಎಂದು ದೂರಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಸುಜಾತಾ ಪ್ರತಿಕ್ರಿಯಿಸಿ, 2008-09ನೇ ಸಾಲಿಗೆ ಸಂಬಂಧಿಸಿದಂತೆ ತಾಲೂಕಿನ 52 ಫಲಾನುಭವಿಗಳಿಗೆ ಇನ್ನೂ ಬಾಂಡ್‌ ಸಿಕ್ಕಿಲ್ಲ. ಆ ಬಳಿಕದ ಎಲ್ಲ ಫಲಾನುಭವಿಗಳಿಗೂ ಸಿಕ್ಕಿದೆ. ಈ ಬಗ್ಗೆ ಪತ್ರ ವ್ಯವಹಾರ ಸಹಿತ ಎಲ್ಲ ಪ್ರಯತ್ನಗಳು ನಡೆದಿವೆ. ಆದರೆ ಯಾವುದೇ ಉತ್ತರ ಬಂದಿಲ್ಲ ಎಂದರು. ನೋಡಲ್ ಅಧಿಕಾರಿ ಮಾತನಾಡಿ, ಶಾಸಕರ ಗಮನಕ್ಕೆ ತಂದು ಫಲಾನುಭವಿಗಳಿಗೆ ಬಾಂಡ್‌ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸರಕಾರಿ ಶಾಲೆ, ಕಾಲೇಜಿಗೆ ಬೇಡಿಕೆ

ರಾಮಕುಂಜ ಭಾಗದ ಬಡ ವಿದ್ಯಾರ್ಥಿಗಳು ಉಪ್ಪಿನಂಗಡಿ ಸರಕಾರಿ ಕಾಲೇಜಿಗೆ ಹೋಗುತ್ತಿದ್ದಾರೆ. ಆದ್ದರಿಂದ ರಾಮಕುಂಜದಲ್ಲಿ ಸರಕಾರಿ ಪ್ರೌಢಶಾಲೆ, ಪ.ಪೂ. ಹಾಗೂ ಪದವಿ ಕಾಲೇಜು ಮತ್ತು ಬಿಸಿಎಂ ಹಾಸ್ಟೆಲ್ ಆರಂಭಿಸಬೇಕೆಂದು ಗ್ರಾಮಸ್ಥ ಧರ್ಮಪಾಲ ರಾವ್‌ ಕಜೆ ಆಗ್ರಹಿಸಿದರು. ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ. ಮಾತನಾಡಿ, ಬಿಸಿಎಂ ಹಾಸ್ಟೆಲ್ಗೆ ಸಂಬಂಧಿಸಿ ಪ್ರಯತ್ನ ನಡೆಯುತ್ತಿದೆ. ಹಾಸ್ಟೆಲ್ಗೆ ಜಾಗ ಗುರುತಿಸಿ ಅದಕ್ಕೆ ಸಂಬಂಧಿಸಿದ ಆರ್‌ಟಿಸಿಯನ್ನು ಶಾಸಕರಿಗೆ 3 ಬಾರಿ ಕೊಟ್ಟು ಒತ್ತಡ ತಂದಿದ್ದೇವೆ ಎಂದರು.

Advertisement

ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ಈ ಕುರಿತು ಇಲಾಖೆಗಳಿಗೆ ಪತ್ರ ಬರೆಯಬೇಕು. ಅದರ ಜತೆಗೆ ಶಾಸಕರ ಮೂಲಕವೂ ಒತ್ತಡ ತರಬೇಕೆಂದು ಹೇಳಿದರು.

ರಸ್ತೆ ದಾಖಲೀಕರಣಕ್ಕೆ ಆಗ್ರಹ

ಗ್ರಾಮದ ಪ್ರಮುಖ ರಸ್ತೆಗಳ ಅತಿಕ್ರಮಣವಾಗುತ್ತಿದೆ. ರಸ್ತೆಯಲ್ಲಿ ಚರಂಡಿಯೂ ಇಲ್ಲದೆ ನೀರು ರಸ್ತೆಯಲ್ಲಿಯೇ ಹರಿಯುತ್ತಿದೆ. ಅತಿಕ್ರಮಣ ಮಾಡಿಕೊಂಡವರು ಚರಂಡಿ ತೆಗೆಯಲು ಅವಕಾಶ ನೀಡುತ್ತಿಲ್ಲ. ಆದ್ದರಿಂದ ಪ್ರಮುಖ ರಸ್ತೆಗಳನ್ನು ದಾಖಲೀಕರಣಗೊಳಿಸಲು ಪಂಚಾಯತ್‌ನಿಂದ ಕ್ರಮ ಕೈಗೊಳ್ಳಬೇಕು. ಈ ಬಗ್ಗೆ ಪ್ರತಿ ಗ್ರಾಮಸಭೆಯಲ್ಲಿಯೂ ಒತ್ತಾಯಿಸುತ್ತಿರುವುದಾಗಿ ಧರ್ಮಪಾಲ ರಾವ್‌ ಹೇಳಿದರು. ಗ್ರಾಮದಲ್ಲಿರುವ ಸಾರ್ವಜನಿಕ ಕೆರೆಗಳನ್ನು ಗುರುತಿಸಿ ಅಳತೆ ಮಾಡಿ ಬೇಲಿ ಹಾಕಲು ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಉತ್ತರಿಸಿದ ಅಧ್ಯಕ್ಷರು, ಖಾಸಗಿ ಸರ್ವೆಯರ್‌ಗಳಿಂದ ಸರ್ವೆ ಮಾಡಬೇಕಾಗಿದೆ. ಇದಕ್ಕೆ ಸಂಬಂಧಿಸಿ 40 ಸಾವಿರ ರೂ. ಮೀಸಲಿಟ್ಟಿದ್ದು ಮುಂದಿನ ಕ್ರಿಯಾ ಯೋಜನೆಯಲ್ಲಿ ಇನ್ನಷ್ಟು ಅನುದಾನ ಮೀಸಲಿಟ್ಟು ಸರ್ವೆ ಮಾಡಲಾಗುವುದು ಎಂದರು.

ಹೈಸ್ಕೂಲ್ ತೆರೆಯಿರಿ

ಗ್ರಾಮಸ್ಥ ಮಹೇಶ್‌ ಮಾತನಾಡಿ, ಹಳೆನೇರೆಂಕಿಯಲ್ಲಿ ಸರಕಾರಿ ಉನ್ನತ ಹಿ.ಪ್ರಾ. ಶಾಲೆಯಿದ್ದು ಅಲ್ಲಿ 9 ಹಾಗೂ 10ನೇ ತರಗತಿ ಆರಂಭಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು. ಅಲ್ಲಿ ಹೈಸ್ಕೂಲ್ ಆರಂಭಕ್ಕೆ ಎಲ್ಲ ವ್ಯವಸ್ಥೆಯೂ ಇದೆ. ಹಳೆನೇರೆಂಕಿಯಲ್ಲಿ ಬಿಸಿಎಂ ಹಾಸ್ಟೆಲ್ ಆರಂಭಿಸಬೇಕೆಂದು ಆಗ್ರಹಿಸಿದರು. ಈ ಬಗ್ಗೆ ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಆತೂರು: ಬಸ್‌ ನಿಲ್ದಾಣ ಬೇಕು

ಆತೂರಿನಲ್ಲಿರುವ ಸಿ.ಎ. ಬ್ಯಾಂಕ್‌ ಕಟ್ಟಡದ ಸಮೀಪ ಬಸ್‌ ನಿಲ್ದಾಣ ಆಗಬೇಕು. ಅಲ್ಲಿ ಸರಿಯಾದ ವ್ಯವಸ್ಥೆ ಇಲ್ಲದೇ ಶಾಲಾ ಮಕ್ಕಳು ಸಹಿತ ಸಾರ್ವಜನಿಕರು ಸಿಎ ಬ್ಯಾಂಕ್‌ ಮೆಟ್ಟಿಲಿನ ಮೇಲೆ ಕುಳಿತುಕೊಳ್ಳುತ್ತಾರೆ ಎಂದು ಗ್ರಾಮಸ್ಥ ಮೋನಪ್ಪ ಕುಲಾಲ್ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ., ಆತೂರು ಸಿಎ ಬ್ಯಾಂಕ್‌ ಪಕ್ಕ ಬಸ್‌ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿ ಪರಿಶೀಲನೆ ನಡೆದಿದೆ. ಆ ಜಾಗ ಕೊೖಲ ಗ್ರಾ.ಪಂ.ಗೆ ಸೇರಿದೆ. ಅಲ್ಲಿ ಖಾಸಗಿಯವರ ವರ್ಗ ಜಾಗವೂ ಇದೆ. ಲೋಕೋಪಯೋಗಿ ಇಲಾಖೆಯವರಿಂದ ಎನ್‌ಒಸಿಯೂ ಬೇಕಾಗಿದೆ ಎಂದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ ಮಾತನಾಡಿ, ಲೋಕೋಪಯೋಗಿ ಇಲಾಖೆ ಎಂಜಿನಿಯರ್‌ ಜತೆ ಮಾತುಕತೆ ನಡೆಸಿ, ರಸ್ತೆ ಮಾರ್ಜಿನ್‌ ಬಿಟ್ಟು ಬಸ್‌ ನಿಲ್ದಾಣ ನಿರ್ಮಾಣ ಮಾಡಬಹುದಾಗಿದೆ ಎಂದರು. ಅಲ್ಲಿ ಖಾಸಗಿಯವರ ವರ್ಗ ಜಾಗವೂ ಇರುವುದರಿಂದ ಸರ್ವೆ ನಡೆಸುವ ಸಂಬಂಧ ತಹಶೀಲ್ದಾರ್‌ಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯಿಸಲಾಯಿತು.

ಅಂಗನವಾಡಿಗೆ ವಿದ್ಯುತ್‌ ಇಲ್ಲ

ರಾಮಕುಂಜ ಅಂಗನವಾಡಿಗೆ ವಿದ್ಯುತ್‌ ಇಲ್ಲದೆ 15 ದಿನಗಳಾಗಿವೆ. ಈ ಬಗ್ಗೆ ಪವರ್‌ಮ್ಯಾನ್‌ಗೆ ಮಾಹಿತಿ ನೀಡಿದ್ದು, 2 ಸಲ ಬಂದು ನೋಡಿ ಹೋಗಿದ್ದರೂ ಹೊರತು ದುರಸ್ತಿ ಆಗಿಲ್ಲ ಎಂದು ಗ್ರಾ.ಪಂ. ಸದಸ್ಯ ಕೇಶವ ಗಾಂಧಿಪೇಟೆ ಹೇಳಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಅಂಗನವಾಡಿ ಕೇಂದ್ರದೊಳಗಿನ ವೈರಿಂಗ್‌ ಸಮಸ್ಯೆ ಇದ್ದಲ್ಲಿ ಪಂಚಾಯತ್‌ನಿಂದ ಮಾಡಿಕೊಡುತ್ತೇವೆ. ಕಂಬದಿಂದ ಯಾವುದಾದರೂ ಸಮಸ್ಯೆ ಇದ್ದಲ್ಲಿ ಇಲಾಖೆಯೇ ಕ್ರಮ ಕೈಗೊಳ್ಳ ಬೇಕೆಂದು ಹೇಳಿದರು. ಅಂಗನವಾಡಿ ಕಾರ್ಯಕರ್ತೆಯಿಂದ ಮಾಹಿತಿ ಪಡೆದುಕೊಂಡ ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಸ.ಎಂಜಿನಿಯರ್‌ ರಾಜೇಶ್‌ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಇಲಾಖಾವಾರು ಅಧಿಕಾರಿಗಳು ಮಾಹಿತಿ ನೀಡಿದರು. ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ತಾ.ಪಂ. ಸದಸ್ಯೆಯರಾದ ಜಯಂತಿ ಆರ್‌. ಗೌಡ, ತೇಜಸ್ವಿನಿ ಕಟ್ಟಪುಣಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಜಯಂತಿ ನಾಯ್ಕ, ಸದಸ್ಯರಾದ ಕೇಶವ ಗಾಂಧಿಪೇಟೆ, ಸುಶೀಲಾ ವಳೆಂಜ, ಪ್ರೇಮಲತಾ, ಜೋಹರಾ ನಝೀರ್‌, ರವಿ ಕೆದಿಲಾಯ, ಜಯಶ್ರೀ ಇರ್ಕಿ, ಶೀಲಾವತಿ, ಹೊನ್ನಪ್ಪ ಪೂಜಾರಿ, ಅವಿನಾಶ್‌, ಪಿ.ಟಿ. ಲೀಲಾವತಿ ಉಪಸ್ಥಿತರಿದ್ದರು.

ಪಿಡಿಒ ಜೆರಾಲ್ಡ್ ಮಸ್ಕರೇನಸ್‌ ಸ್ವಾಗತಿಸಿ, ಸಿಬಂದಿ ಸಹಕರಿಸಿದರು.

ಹಳೆನೇರೆಂಕಿಯನ್ನು ಪ್ರತ್ಯೇಕ ಗ್ರಾ.ಪಂ. ಆಗಿ ಮಾಡಬೇಕೆಂದು ಗ್ರಾಮಸ್ಥ ಮಹೇಶ್‌ ಹಳೆನೇರೆಂಕಿ ಒತ್ತಾಯಿಸಿದರು. ನೆಟ್ವರ್ಕ್‌ ಸಮಸ್ಯೆಯಿಂದಾಗಿ ಹಳೆನೇರೆಂಕಿಯವರು ಪಡಿತರ ಪಡೆಯಲು ಆತೂರಿಗೆ ಬರಬೇಕಾಗಿದೆ. ಹಳೆನೇರೆಂಕಿಯಲ್ಲಿ ಬಿಎಸ್ಸೆನ್ನೆಲ್ ಮೊಬೈಲ್ ಟವರ್‌ ಆಗಬೇಕೆಂದು ಆಗ್ರಹಿಸಿದರು. ಹಳೆನೇರೆಂಕಿಯಲ್ಲಿನ ಮನೆ ನಿವೇಶನ ಹಂಚಿಕೆಗೆ ಕ್ರಮ ಕೈಗೊಳ್ಳುವಂತೆ ಎಪಿಎಂಸಿ ಸದಸ್ಯ ಕೊರಗಪ್ಪ ಒತ್ತಾಯಿಸಿದರು. ಮರಳಿನ ಕೊರತೆಯಿಂದಾಗಿ ಮನೆ ನಿರ್ಮಾಣಕ್ಕೆ ತೊಂದರೆಯಾಗಿದೆ. ಕೂಲಿ ಕಾರ್ಮಿಕರಿಗೂ ಕೆಲಸ ಇಲ್ಲದಂತಾಗಿದೆ. ಗ್ರಾ.ಪಂ.ನಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ಪಡೆದವರಿಗೆ ಹೊಳೆಯಿಂದ ಮರಳು ತೆಗೆಯಲು ಗ್ರಾ.ಪಂ.ನಿಂದಲೇ ಅನುಮತಿ ನೀಡಬೇಕೆಂದು ಗ್ರಾಮಸ್ಥ ಬಿ.ಕೆ. ಅಬ್ಟಾಸ್‌ ಅರಫಾ ಒತ್ತಾಯಿಸಿದರು.

ಆಧಾರ್‌ ಕಾರ್ಡ್‌ನಲ್ಲಿ ವಯಸ್ಸಿನ ತಿದ್ದುಪಡಿಗೆ ಸಂಬಂಧಿಸಿ ಸರಕಾರಿ ಆಸ್ಪತ್ರೆಯ ವೈದ್ಯರು ದೃಢೀಕರಣ ನೀಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದರು. ಅದಕ್ಕೆ ಧ್ವನಿಗೂಡಿಸಿದ ತಾ.ಪಂ. ಸದಸ್ಯೆ ತೇಜಸ್ವಿನಿ ಕಟ್ಟಪುಣಿ, ವೈದ್ಯರು ಸಹಿ ಮಾಡದೇ ಇರುವುದರಿಂದ ಜನರಿಗೆ ತೊಂದರೆಯಾಗಿದೆ. ಆದರೆ ಕಡಬ ತಹಶೀಲ್ದಾರ್‌ ಗ್ರಾಮಕರಣಿಕರ ವರದಿಯ ಮೇಲೆ ದೃಢೀಕರಣ ನೀಡುತ್ತಿದ್ದಾರೆ. ಅವರನ್ನು ಅಭಿನಂದಿಸಲೇಬೇಕು ಎಂದರು. ಈ ಬಗ್ಗೆ ಚರ್ಚೆ ನಡೆದು ಆಧಾರ್‌ ಕಾರ್ಡ್‌ ತಿದ್ದುಪಡಿ ಪಂಚಾಯತ್‌ನಲ್ಲಿ ನಡೆಸುವ ಸಂಬಂಧ ಸರಕಾರಕ್ಕೆ ಬರೆಯಲು ನಿರ್ಣಯಿಸಲಾಯಿತು.

ಹಳೆನೇರೆಂಕಿಯನ್ನು ಪ್ರತ್ಯೇಕ ಗ್ರಾ.ಪಂ. ಮಾಡಿ

Udayavani is now on Telegram. Click here to join our channel and stay updated with the latest news.

Next