ನವದೆಹಲಿ: ಪಂಜಾಬ್ ನಲ್ಲಿ ನೂತನವಾಗಿ ಗದ್ದುಗೆ ಏರಿದ ಭಗವಂತ್ ಮಾನ್ ನೇತೃತ್ವದ ಸರ್ಕಾರ, ಜುಲೈ 1ರಿಂದ ಗೃಹ ಬಳಕೆಗೆ 300 ಯೂನಿಟ್ ಉಚಿತ ವಿದ್ಯುತ್ ನೀಡುವುದಾಗಿ ಶನಿವಾರ (ಏಪ್ರಿಲ್ 16) ಘೋಷಿಸಿದೆ. ಆಮ್ ಆದ್ಮಿ ಪಕ್ಷದ ಸರ್ಕಾರ ಅಧಿಕಾರಕ್ಕೇರಿ ಒಂದು ತಿಂಗಳು ಪೂರೈಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಎಎನ್ ಐ ವರದಿ ಮಾಡಿದೆ.
ಇದನ್ನೂ ಓದಿ:ಮಾಜಿ ಸಚಿವ ಈಶ್ವರಪ್ಪ ಭೇಟಿಯಾದ ಹಿಂದುಳಿದ ದಲಿತ ಮಠಾಧೀಶರ ಒಕ್ಕೂಟದ ನಿಯೋಗ
ಪಂಜಾಬ್ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷ ಬಿಡುಗಡೆಗೊಳಿಸಿದ್ದ ಪ್ರಣಾಳಿಕೆಯಲ್ಲಿ ಈ ಭರವಸೆ ನೀಡಿತ್ತು. ಇದು ಪಂಜಾಬ್ ನ ಆಪ್ ಸರ್ಕಾರದ ಒಂದು ತಿಂಗಳ ರಿಪೋರ್ಟ್ ಕಾರ್ಡ್ ಗೆ ಸಂಬಂಧಿಸಿದ ಘೋಷಣೆಯಾಗಿದೆ ಎಂದು ವರದಿ ತಿಳಿಸಿದೆ.
ಈ ಘೋಷಣೆಗೂ ಮುನ್ನ ಏಪ್ರಿಲ್ 11ರಂದು ಭಗವಂತ್ ಮಾನ್ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಭೇಟಿಯಾಗಿ ಚರ್ಚಿಸಿದ್ದರು.
ಪಂಜಾಬ್ ನಲ್ಲಿ ಗೃಹ ಬಳಕೆಗೆ 300 ಯೂನಿಟ್ಸ್ ಉಚಿತ ವಿದ್ಯುತ್ ನೀಡುವ ಬಗ್ಗೆ ಭಗವಂತ್ ಮಾನ್ ಪಂಜಾಬ್ ನ ವಿದ್ಯುತ್ ಸರಬರಾಜು ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿರುವುದಾಗಿ ವರದಿ ವಿವರಿಸಿದೆ.
ಪಂಜಾಬ್ ನಲ್ಲಿಯೂ ದೆಹಲಿ ಮಾದರಿ ಆಡಳಿತ ನಡೆಸುವುದಾಗಿ ಆಮ್ ಆದ್ಮಿ ಪಕ್ಷ 2022ರ ಪಂಜಾಬ್ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿತ್ತು. ಒಂದು ವೇಳೆ ಆಮ್ ಆದ್ಮಿ ಪಕ್ಷಕ್ಕೆ ಅಧಿಕಾರ ನೀಡಿದರೆ ಪ್ರತಿ ತಿಂಗಳು 300 ಯೂನಿಟ್ಸ್ ವಿದ್ಯುತ್ ಉಚಿತವಾಗಿ ನೀಡುವುದಾಗಿ ಆಪ್ ಭರವಸೆ ನೀಡಿತ್ತು.