Advertisement

ಯುವ ಪೀಳಿಗೆಗೆ ಭಗತ್‌ಸಿಂಗ್‌ ಆದರ್ಶ ಮಾದರಿಯಾಗಲಿ

01:01 PM Sep 29, 2018 | Team Udayavani |

ಚಿತ್ರದುರ್ಗ: ಭಾರತ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಾವನ್ನು ಲೆಕ್ಕಿಸದೆ ಹೋರಾಡಿದ ಮಹಾನ್‌ ಕ್ರಾಂತಿಕಾರಿ ಭಗತ್‌ಸಿಂಗ್‌ ಎಂದು ಚಿಂತಕ ಜೆ.ಯಾದವರೆಡ್ಡಿ ಹೇಳಿದರು. ನಗರದಲ್ಲಿ ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌, ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌, ಅಖೀಲ ಭಾರತ ಮಹಿಳಾ ಸಾಂಸ್ಕೃತಿಕ ಸಂಘಟನೆ ವತಿಯಿಂದ ಶುಕ್ರವಾರ ಭಗತ್‌ಸಿಂಗ್‌ ಜನ್ಮದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಇಡೀ ದೇಶದ ಜನತೆಗೆ ಭಗತ್‌ಸಿಂಗ್‌ ಮಾದರಿಯಾಗಿದ್ದಾರೆ. ಮುಕ್ತ ಸ್ವಾತಂತ್ರ್ಯದ ಕನಸಿಗಾಗಿ ಅವರು ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಕೇವಲ ತಮ್ಮ 23ನೇ ವಯಸ್ಸಿನಲ್ಲಿ ಅವರು ವೀರ ಮರಣ ಹೊಂದುವ ಮೂಲಕ ಹುತಾತ್ಮರಾದರು ಎಂದು ತಿಳಿಸಿದರು.

ಆಲ್‌ ಇಂಡಿಯಾ ಡೆಮಾಕ್ರೆಟಿಕ್‌ ಯೂತ್‌ ಆರ್ಗನೈಸೇಷನ್‌ ಜಿಲ್ಲಾಧ್ಯಕ್ಷ ರವಿಕುಮಾರ್‌ ಮಾತನಾಡಿ, ಭಗತ್‌ಸಿಂಗ್‌ನಂತಹ ಆದರ್ಶ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಡೆಯಬೇದ ಇಂದಿನ ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆ.  ಇಂದಿನ ಯುವಪೀಳಿಗೆ ಭಗತ್‌ಸಿಂಗ್‌ರ ವಿಚಾರಗಳನ್ನು ತಿಳಿಯುವ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಅವರಿಗೆ ಆದರ್ಶ ವ್ಯಕ್ತಿಗಳ ಮಾದರಿಗಳನ್ನು ತೋರಿಸಿಕೊಡಬೇಕಿರುವುದು ಎಲ್ಲ ಪ್ರಜ್ಞಾವಂತರ ಆದ್ಯ ಕರ್ತವ್ಯವಾಗಿದೆ ಎಂದರು. ಹಿರಿಯ ಪತ್ರಕರ್ತ ಜಿ.ಎಸ್‌. ಉಜ್ಜಿನಪ್ಪ ಮಾತನಾಡಿ, ಕಳೆದ ಹಲವಾರು ದಿನಗಳಿಂದ ವಿವಿಧ ಜನಪರ ಸಂಘಟನೆಗಳು ಡಿಸಿ ವೃತ್ತದಲ್ಲಿರುವ ಉದ್ಯಾನವನಕ್ಕೆ ಭಗತ್‌ ಸಿಂಗ್‌ ಹೆಸರಿಡಬೇಕೆಂದು ಒತ್ತಾಯಿಸಿ ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಕೂಡಲೇ ನಗರಸಭೆ ಕ್ರಮ ಕೈಗೊಳ್ಳಬೇಕೆಂದರು.

ಸಂಶೋಧಕ ಡಾ|ಬಿ.ರಾಜಶೇಖರಪ್ಪ ಮಾತನಾಡಿ, ಡಿಸಿ ವೃತ್ತದಲ್ಲಿರುವ ಉದ್ಯಾನವನಕ್ಕೆ ಮಹಾನ್‌ ದೇಶಪ್ರೇಮಿ ಭಗತ್‌ ಸಿಂಗ್‌ ಹೆಸರಿಡುವ ಮೂಲಕ ಅವರಿಗೆ ಸೂಕ್ತ ಗೌರವ ಸಲ್ಲಿಸಬೇಕು. ಅವರ ನೆನಪುಗಳನ್ನು ಹಸಿರಾಗಿಡುವ ಪರಿಪಾಠ ಬೆಳೆಸಬೇಕು. ಡಿಸಿ ವೃತ್ತದಲ್ಲಿರುವ ಉದ್ಯಾನವನವನ್ನು ಭಗತ್‌ ಸಿಂಗ್‌ ಅವರ ಹೆಸರಿನಿಂದ ಕರೆಯಬೇಕೆಂಬುದು ನಗರದ ವಿದ್ಯಾರ್ಥಿ ಯುವಜನರ ಮತ್ತು
ನಾಗರಿಕರ ಅಪೇಕ್ಷೆಯಾಗಿದೆ ಎಂದರು.

ನಗರಸಭೆಯ ಪರವಾಗಿ ತಾವು ತಾತ್ವಿಕ ಒಪ್ಪಿಕೊಂಡಿರುತ್ತೀರಿ. ಆದರೆ ಈ ಉದ್ಯಾನಕ್ಕೆ ಭಗತ್‌ಸಿಂಗ್‌ ಹೆಸರನ್ನು ಅಂತಿಮಗೊಳಿಸುವ ಕಾರ್ಯ ಇನ್ನೂ ಪೂರ್ಣಗೊಳಿಸಿಲ್ಲ. ಆದ್ದರಿಂದ ಭಗತ್‌ಸಿಂಗ್‌ರ 111ನೇ ಜನ್ಮದಿನವಾದ ಇಂದು ಅದೇ ಪಾರ್ಕ್‌ಬಳಿ ಸಾರ್ವಜನಿಕ ಸಭೆ ನಡೆಸಿ ಮತ್ತೂಮ್ಮೆ ಹಕ್ಕೊತ್ತಾಯ ಸಲ್ಲಿಸುತ್ತಿದ್ದೇವೆ. ತಾವು ಆದಷ್ಟು ಜರೂರಾಗಿ ಎಲ್ಲ ಜನರ ಬೇಡಿಕೆಯಂತೆ ಈ ಕಾರ್ಯ ಪೂರ್ಣಗೊಳಿಸಿ ಕೊಡಬೇಕೆಂದು ಕೋರುತ್ತೇವೆ ಎಂದರು.

Advertisement

ನಿವೃತ್ತ ಬ್ಯಾಂಕ್‌ ನೌಕರ ನರಸಿಂಹಮೂರ್ತಿ, ಸಂಘಟನಾಕರರಾದ ವಿನಯ್‌, ನಿಂಗರಾಜು, ಕುಮುದ, ಮಾರುತಿ, ಚಂದನ, ಸುಮಲತ, ಬೊಮ್ಮನಾಯ್ಕ ಇನ್ನಿತರರಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next