ಭದ್ರಾವತಿ: ಮಾಡುವ ಪ್ರತಿಯೊಂದು ಕೆಲಸ, ಆಡುವ ಪ್ರತಿಯೊಂದು ಮಾತನ್ನು ಭಗವಂತನ ಪೂಜೆ ಎಂಬ ಅನುಸಂಧಾನಪೂರ್ವಕವಾಗಿ ಮಾಡಿದಾಗ ಭಗವಂತನ ಕೃಪೆಗೆ ನಾವು ಪಾತ್ರರಾಗುತ್ತೇವೆ ಎಂದು ಪಂಡಿತ ಕುಷ್ಠಗಿ ವಾಸುದೇವಮೂರ್ತಿ ಹೇಳಿದರು.
ಹಳೇನಗರದ ಶ್ರೀ ರಾಘವೇಂದ್ರಸ್ವಾಮಿ ಹಾಗೂ ಶ್ರೀ ವಾದಿರಾಜರ ಮಠದಲ್ಲಿ ವಿಜಯದಾಸರ ಆರಾಧನೆಯ ಪ್ರಯುಕ್ತ ಅಖೀಲ ಭಾರತ ಮಧ್ವ ಮಹಾಮಂಡಳಿ ಭದ್ರಾವತಿ ಶಾಖೆ ವತಿಯಿಂದ ಏರ್ಪಡಿಸಿದ್ದ ವಿಜಯದಾಸರ ಚರಿತ್ರೆಯ ಎರಡು ದಿನಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ವಿಜಯದಾಸರು ರಚಿಸಿದ ಕಂಕಣ ಸುಳಾದಿಯಲ್ಲಿನ ಚಕ್ರಾಬ್ದಿ
ಕುರಿತು ಅವರು ಮಾತನಾಡಿದರು.
ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದು, ಗುರು ಹಿರಿಯರನ್ನು ಗೌರವದಿಂದ ಕಂಡು ಮಾತನಾಡಿಸುವುದು,ಅತಿಥಿಗಳ ಸತ್ಕಾರ ಮಾಡುವುದು ಎಲ್ಲವೂ ಭಗವಂತನ ಪೂಜೆ ಎಂದು ಅರಿತು ಮಾಡಿದರೆ ಭಗವಂತ ತೃಪ್ತನಾಗುತ್ತಾನೆ. ಮಂತ್ರಗಳ ಪಠಣ, ಜಪ, ತಪ, ಹೋಮ, ಹವನ ಎಲ್ಲವನ್ನೂ ಭಗವಂತ ನಮ್ಮ ಅಂತರ್ಯಾಮಿಯಾಗಿ ನಿಂತು ಅವರವರ ಯೋಗ್ಯತಾನುಸಾರವಗಿ ಮಾಡಿಸುತ್ತಾ ಅದಕ್ಕೆ ತಕ್ಕ ಫಲಗಳನ್ನು ನೀಡುತ್ತಾನೆ ಎಂದರು.
ಉಪನ್ಯಾಸ ಕಾರ್ಯಕ್ರಮಕ್ಕೂ ಮುನ್ನ ವಿಜಯದಾಸರ ಭಾವಚಿತ್ರವನ್ನು ಹಿಡಿದು ಮಹಿಳೆಯರು- ಪುರುಷರು ವಿಜಯದಾಸರು ರಚಿಸಿದ ಹಾಡುಗಳನ್ನು ಹಾಡುತ್ತಾ,
ಕುಣಿಯುತ್ತಾ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದವರೆಗೆ ನಗರ ಸಂಕೀರ್ತನೆ ನಡೆಸಿದರು.
ಉಪನ್ಯಾಸದ ನಂತರ ಮಹಾಮಂಗಳಾರತಿ, ತೀರ್ಥಪ್ರಸಾದ ವಿತರಣೆ ಮಾಡಲಾಯಿತು. ಮಧ್ವ ಮಹಾಮಂಡಳಿಯ ಅಧ್ಯಕ್ಷ ವಿ. ಜಯತೀರ್ಥ, ಉಪಾಧ್ಯಕ್ಷ ಸಿ.ಆರ್. ಶ್ರೀನಿವಾಸಾಚಾರ್, ಕಾರ್ಯದರ್ಶಿ ಕೆ.ಆರ್. ವೆಂಕಟೇಶ್, ಖಜಾಂಚಿ ಶ್ರೀಕಾಂತ್ ನಾಡಿಗ್, ಸುಧೀಂದ್ರ, ಬ್ರಾಹ್ಮಣ ಮಹಾಸಭಾ ತಾಲೂಕು ಅಧ್ಯಕ್ಷ ಜಿ. ರಮಾಕಾಂತ್, ಬಂಡಿವಾಳ್ ರಾಮಣ್ಣ, ಶೇಷಗಿರಿ, ಶೇಷಗಿರಿ ಆಚಾರ್, ರಾಘವೇಂದ್ರಾಚಾರ್, ಪಂ| ಗೋಪಾಲಾಚಾರ್, ಮಾಧುರಾವ್, ಶ್ರೀಕಾಂತ್, ಮಧ್ವೇಶ, ಮಹಿಳಾ ಮಂಡಳಿ ಸದಸ್ಯರು ಮತ್ತಿತರರು ಇದ್ದರು.