Advertisement

ಭದ್ರಾವತಿ ನಗರಸಭೆ: 9 ಲಕ್ಷ ರೂ. ಆದಾಯ- 11 ಲಕ್ಷ ರೂ. ಖರ್ಚು

11:17 AM Jan 18, 2019 | |

ಭದ್ರಾವತಿ: ನಗರಸಭೆ 2019-20ನೇ ಸಾಲಿನಲ್ಲಿ ವಿವಿಧ ಮೂಲಗಳಿಂದ ಒಟ್ಟು ರೂ.9,151.41 ಲಕ್ಷ ಆದಾಯ ಗಳಿಸುವ ನಿರೀಕ್ಷೆ ಹೊಂದಿದ್ದು ಪ್ರಮುಖ ವಿವಿಧ ಯೋಜನೆ ಗಳಿಗಾಗಿ ಒಟ್ಟು ರೂ.11,245.84 ಲಕ್ಷ ವೆಚ್ಚ ಮಾಡುವ ನಿರೀಕ್ಷೆ ಹೊಂದಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರವಿಕುಮಾರ್‌ ಹೇಳಿದರು.

Advertisement

ಗುರುವಾರ ನಗರಸಭೆ ಅಧ್ಯಕ್ಷೆ ಹಾಲಮ್ಮ ಅವರ ಅಧ್ಯಕ್ಷತೆಯಲ್ಲಿ ನಡೆದ ನಗರಸಭೆ 2019-20ನೇಸಾಲಿನ ಅಯ-ವ್ಯಯದ ಸಭೆಯಲ್ಲಿ ಅದ್ಯಕ್ಷರ ಪರವಾಗಿ ಅಯವ್ಯಯ ಮಂಡಿಸಿ ಅವರು ಮಾತನಾಡಿದರು.

ನಗರಸಭೆಗೆ ಸೇರಿದ 46368 ವಾಸ, ವಾಣಿಜ್ಯ ಮತ್ತು ಖಾಲಿ ನಿವೇಶನಗಳ ಸ್ವತ್ತುಗಳಿಂದ 600ಲಕ್ಷಕ್ಕೂ ಅಧಿಕ ಆದಾಯ, ನೀರಿನ ಶುಲ್ಕದಿಂದ 400 ಲಕ್ಷಕ್ಕೂ ಅಧಿಕ ಆದಾಯ ಹಾಗೂ ಮಳಿಗೆಗಳ ಬಾಡಿಗೆಯಿಂದ 20 ಲಕ್ಷ ಆದಾಯವನ್ನು ಹೊಂದಿದೆ. ಇದರ ಆಧಾರದ ಮೇಲೆ ನಗರಸಭೆ 19-20ನೇ ಸಾಲಿನಲ್ಲಿ ವಿಶೇಷ ವಿವಿಧ ಯೋಜನೆಗಳನ್ನು ಕೈಗೆತ್ತಿಕೊಂಡು ಸಗರಸಭೆಯ ಸರ್ವತೋಮುಖ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳ ಅನುದಾನಗಳ ನಿರೀಕ್ಷೆ ಮೇಲೆ ಅಯವ್ಯಯವನ್ನು ಹೆಚ್ಚಿಸಲಾಗಿದೆ ಎಂದರು.

ಹೊಸ‌ ಯೋಜನೆಗಳು: ಮನೆ-ಮನೆ ಕಸ ಸಂಗ್ರಹಣೆಗಾಗಿ 96ಲಕ್ಷ, ಫುಡ್‌ ಕೋರ್ಟ್‌ಗೆ 200ಲಕ್ಷ, ಘನತ್ಯಾಜ್ಯ ವಸ್ತುಗಳ ಸಂಸ್ಕರಣ ಘಟಕಕ್ಕೆ ನೂತನವಾದ ತಂತ್ರಜ್ಞಾನ ಅಳವಡಿಸಲು 300 ಲಕ್ಷ, ನಗರಸಭೆಗೆ ಸೇರಿದ ಜಾಗವನ್ನು ಈಗಾಗಲೆ ಅಂಬೇಡ್ಕರ್‌ ಭವನಕ್ಕೆ ನೀಡಿರುವುದರ ಜೊತೆಗೆ 50ಲಕ್ಷ, ವಂತಿಗೆ, ಜೈಭೀಮನಗರ್‌ದಲ್ಲಿ ಪೌರಕಾರ್ಮಿಕರ ಗೃಹಭಾಗ್ಯ ಯೋಜನೆಗೆ 7.50ಲಕ್ಷದ ಅನುದಾನದಲ್ಲಿ 74 ಜನ ಪೌರ ಕಾರ್ಮಿಕರಿಗೆ ಮನೆ ನಿರ್ಮಾಣ, ಇವುಗಳ ಜೊತೆಗೆ ನಗರಸಭೆ ವ್ಯಾಪ್ತಿಯಲ್ಲಿನ ಮನೆಗಳ ನಲ್ಲಿಗಳಿಗೆ ಮೀಟರ್‌ ಅಳವಡಿಕೆ, ನಗರದ ಪ್ರಮುಖ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ, ಕನಕ ಮಂಟಪ ಮೈದಾನದ ಪಕ್ಕದ ಜಾಗದಲ್ಲಿ ನಗರಸಭೆ ಸಿಬ್ಬಂದಿಗಳಿಗೆ ವಸತಿ ಸಮುಚ್ಛಯ ನಿರ್ಮಾಣ, ಸ್ತ್ರೀ ಶಕ್ತಿ ಸಂಘಗಳಿಗೆ ಭವನ ನಿರ್ಮಾಣ ಸೇರಿದಂತೆ ಹಲವು ಯೋಜನೆಗಳನ್ನು ಅನುಷ್ಠಾನಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದರು. ಸದಸ್ಯರು ಇದಕ್ಕೆ ಮೇಜುಗುದ್ದುವ ಮೂಲಕ ಅನುಮೋದಿಸಿದರು.

ಹಿರಿಯ ಸದಸ್ಯ ಆರ್‌. ಕರುಣಾಮೂರ್ತಿ ಮಾತನಾಡಿ, ಯೋಜನೆಗಳನ್ನು ರೂಪಿಸಿ ಸಭೆಯಲ್ಲೇ ಮಂಡಿಸುವುದು ಮುಖ್ಯವಲ್ಲ. ಆಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಪ್ರಾಮಾಣಿಕ ಪ್ರಯತ್ನವನ್ನು ಅಧಿಕಾರಿಗಳು ಮಾಡಬೇಕು ಎಂದರು.

Advertisement

ಬಿಜೆಪಿಯ ಆನಂದಕುಮಾರ್‌ ಮಾತನಾಡಿ, ಸಂತೆ ಮೈದಾನದ ಅಕ್ಕಪಕ್ಕದ ಜಾಗಗಳಲ್ಲಿ ಕನ್ಸರ್‌ವೆನ್ಸಿ ಜಾಗ ಒತ್ತುವರಿ ಆಗುತ್ತಿದ್ದು ಅದನ್ನು ತಡೆಯಬೇಕು ಮತ್ತು ಸರ್ಕಾರಿ ಆಸ್ಪತ್ರೆಗೆ ನೀರಿನ ಪೂರೈಕೆ ಸಮರ್ಪಕವಾಗಿ ಮಾಡಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಮನೋಹರ್‌, ಸರ್ಕಾರಿ ಆಸ್ಪತ್ರೆಗೆ ನೀರನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆ. ಆದರೆ ಆಸ್ಪತ್ರೆಯಲ್ಲಿ ನೀರಿನ ಸಂಗ್ರಹಣೆಗೆ ಅವರು ಸರಿಯಾದ ವ್ಯವಸ್ಥೆ ಮಾಡಿಕೊಂಡಿಲ್ಲದ ಕಾರಣ ಅವರಿಗೆ ನೀರಿನ ಕೊರತೆ ಕಾಣುತ್ತಿದೆ ಎಂದರು. ಸದಸ್ಯೆ ರೇಣುಕಾ ಮಾತನಾಡಿ, ಶುದ್ಧ ಕುಡಿಯುವ ನೀರನ್ನು ನಾಗರಿಕರಿಗೆ ಒದಗಿಸಬೇಕು ಎಂದರು. ಸದಸ್ಯರು ನಗರಸಭೆ ವ್ಯಾಪ್ತಿಯಲ್ಲಿನ ಸ್ಲಂ ಏರಿಯಾಗಳ ಹಕ್ಕುಪತ್ರ ಹೊಂದಿರುವವರಿಗೆ ಖಾತೆ ಮಾಡಿಸಿಕೊಡಲು ಸಮಯದ ನಿಗದಿ ಇದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಆಯುಕ್ತ ಮನೋಹರ್‌, ಖಾತೆ ಮಾಡಿಕೊಡುವ ಪ್ರಕ್ರಿಯೆ ಈಗಾಗಲೇ ಚಾಲನೆಗೊಂಡಿದೆ. ಅಲ್ಲಿನ ಮನೆ ಮನೆಗಳಿಗೆ ತೆರಳಿ ಅವರಿಂದ ಮಾಹಿತಿ ಪಡೆದು ನಿಗದಿತ ಅರ್ಜಿ ಮತ್ತು ದಾಖಲಾತಿ ಪಡೆದು 30 ದಿನದಲ್ಲಿ ಖಾತೆ ಮಾಡಿಕೊಡಬೇಕು. ಇದರಲ್ಲಿ ಲೋಪ ಮಾಡಿ ನಿಯಮ ಮೀರಿ ವರ್ತಿಸಿದರೆ ಸಂಬಂಧಪಟ್ಟ ಸಿಬ್ಬಂದಿಯನ್ನು ವಜಾಗೊಳಿಸಲಾಗುವುದು ಎಂದರು.

ಅಧ್ಯಕ್ಷೆ ಹಾಲಮ್ಮ ಶೇಖರ್‌, ಉಪಾಧ್ಯಕ್ಷೆ ಮೀನಾಕ್ಷಿ ಇದ್ದರು. ಸಭೆಯಲ್ಲಿ ಸದಸ್ಯರಾದ ಚೆನ್ನಪ್ಪ, ಫ್ರಾನ್ಸಿಸ್‌, ಮೂರ್ತಿ, ಭೈರಪ್ಪ ಗೌಡ, ವಿಶಾಲಾಕ್ಷಿ, ಶಿವರಾಜ್‌ ಅಂಜನಿ, ರಾಜು, ಬದರಿನಾರಾಯಣ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next