Advertisement

ವೃದ್ಧ ದಂಪತಿ ಸೇರಿ 6 ಜನರಲ್ಲಿ ಕೋವಿಡ್

01:22 PM Jul 10, 2020 | Naveen |

ಭದ್ರಾವತಿ: ನಗರದಲ್ಲಿ ಗುರುವಾರ ಇಬ್ಬರು ದಂಪತಿ ಸೇರಿದಂತೆ ಆರು ಜನರಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ಪತ್ತೆಯಾಗಿದೆ.

Advertisement

ಗಾಂಧಿ ನಗರ: ಗಾಂಧಿನಗರದಲ್ಲಿ 60 ವರ್ಷದ ವೃದ್ಧನಲ್ಲಿ ಪಾಸಿಟಿವ್‌ ಕಾಣಿಸಿದ್ದು, ಈತ ಬೆಂಗಳೂರಿನಿಂದ ಬಂದಿದ್ದನೆನ್ನಲಾಗಿದೆ.

ಹೊಸಮನೆ: ಹೊಸಮನೆಯ ಹಿಂದೂ ಮಹಾಸಭಾ ಗಣಪತಿ ದೇವಾಲಯದ ಸಮೀಪ ಕಳೆದ 10 ದಿನಗಳ ಹಿಂದೆ ಕೆಎಸ್‌ಆರ್‌ಟಿಸಿ ಬಸ್‌ ಚಾಲಕನೋರ್ವನಲ್ಲಿ ಕೋವಿಡ್ ಸೋಂಕಿನ ಪಾಸಿಟಿವ್‌ ಪತ್ತೆಯಾದ ಹಿನ್ನೆಲೆಯಲ್ಲಿ ಆತನ ವೃದ್ಧ ತಂದೆ (70)ತಾಯಿ (65)ಯ ಗಂಟಲ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಇಬ್ಬರು ದಂಪತಿಗಳಲ್ಲಿ ಕೋವಿಡ್ ಪಾಸಿಟಿವ್‌ ಇರುವುದು ದೃಢಪಟ್ಟಿದೆ.

ಕಡದಕಟ್ಟೆ: ಕಡದಕಟ್ಟೆ ಬಳಿ 40 ವರ್ಷದ ಓರ್ವ ಪುರುಷನಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದೆ.

ವಿಶ್ವೇಶ್ವರ ನಗರ: ಕಳೆದ ವಾರ ವಿಶ್ವೇಶ್ವರ ನಗರದಲ್ಲಿ ಬೆಂಗಳೂರಿನಿಂದ ಬಂದಿದ್ದ ಇಬ್ಬರು ಸಹೋದರಿಯರಲ್ಲಿ ಕಾಣಿಸಿಕೊಂಡಿದ್ದ ಪಾಸಿಟಿವ್‌ ಪ್ರಕರಣದ ಸಂಬಂಧ ಹೊಂದಿರುವ ಅದೇ ಮನೆಯ 49 ವರ್ಷ ವಯಸ್ಸಿನ ಮಹಿಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

Advertisement

ಬಸವೇಶ್ವರ ಸರ್ಕಲ್‌ಮಾರ್ಕೆಟ್‌ ಬಳಿ: ಹಳೇನಗರದ ಬಸವೇಶ್ವರ ಸರ್ಕಲ್‌ ಸಮೀಪದ ಮಾರುಕಟ್ಟೆಯ ಸನಿಹದ ತಿರುವಿನಲ್ಲಿರುವ ಬೆತ್ತದ ಬುಟ್ಟಿ ಹೆಣೆಯುವ 27 ವರ್ಷದ ಯುವಕನಲ್ಲಿ ಕೋವಿಡ್ ಪಾಸಿಟಿವ್‌ ಕಾಣಿಸಿಕೊಳ್ಳುವ ಮೂಲಕ ಗುರುವಾರ ಸಂಜೆ ವೇಳೆಗೆ ಆರು ಪಾಸಿಟಿವ್‌ ಪ್ರಕರಣ ಪತ್ತೆಯಾದಂತಾಗಿದೆ.

ಈ ಎಲ್ಲಾ ಸ್ಥಳಕ್ಕೆ ತಹಶೀಲ್ದಾರ್‌ ಶಿವಕುಮಾರ್‌ ,ನಗರಸಭಾ ಆಯುಕ್ತ ಮನೋಹರ್‌, ಪರಿಸರ ಇಂಜನಿಯರ್‌ ರುದ್ರೇಗೌಡ, ತಾಲೂಕು ಮುಖ್ಯ ವೈದ್ಯಾಧಿಕಾರಿ ಡಾ| ಗಾಯತ್ರಿ, ಆರೋಗ್ಯ ಇಲಾಖೆ ಮುಖ್ಯ ಸಿಬ್ಬಂದಿ ನೀಲೇಶ್‌ ರಾಜ್‌ ಹಾಗೂ ಪೊಲೀಸ್‌ ಅಧಿಕಾರಿಗಳು ತೆರಳಿ ಸೋಂಕಿತರ ನಿವಾಸದ ಪ್ರದೇಶದ 100 ಮೀ. ವ್ಯಾಪ್ತಿಯ ಪ್ರದೇಶವನ್ನು ಸೀಲ್‌ಡೌನ್‌ ಮಾಡಿ, ಆರು ಜನ ಸೋಂಕಿತರನ್ನು ಶಿವಮೊಗ್ಗದ ಮೆಗ್ಗಾನ್‌ ಆಸ್ಪತ್ರೆಯ ಕೋವಿಡ್‌ ಚಿಕಿತ್ಸಾ ಕೇಂದ್ರಕ್ಕೆ ಕಳುಹಿಸಿದರು.

ಇದರೊಂದಿಗೆ ಭದ್ರಾವತಿ ತಾಲೂಕಿನಲ್ಲಿ ಈವರೆಗೆ ಒಟ್ಟು 32 ಜನರಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣ ಪತ್ತೆಯಾದಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next