ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಬೇಕೆಂದು ಒತ್ತಾಯಿಸಿ ಕಾರ್ಮಿಕರು ಮತ್ತು ವಿವಿಧ ಸಂಘಟನೆಗಳು ನಡೆಸುತ್ತಿರುವ ಹೋರಾಟದ ಅಂಗವಾಗಿ ಶುಕ್ರವಾರ ನಗರದ ರಂಗಪ್ಪ ವೃತ್ತದಲ್ಲಿ ರಾಜ್ಯದ 28 ಸಂಸದರ ಭಾವಚಿತ್ರಗಳನ್ನು ಹಿಡಿದು ಪ್ರತಿಭಟನೆ ನಡೆಸಿ ರಸ್ತೆ ತಡೆ ಮಾಡಿದರು.
ಹಿರಿಯ ಸಿಐಟಿಯು ಕಾರ್ಮಿಕ ಮುಖಂಡ ಜೆ.ಎನ್. ಚಂದ್ರಹಾಸ ಕಾರ್ಮಿಕರನ್ನುದ್ದೇಶಿಸಿ ಮಾತನಾಡಿ, ಕಳೆದ 25 ವರ್ಷಗಳಿಂದ ಕೇವಲ 130 ರಿಂದ 150 ಕೋಟಿ ರೂ. ಮಾತ್ರ ಬಂಡವಾಳ ತೊಡಗಿಸಿ ಅಭಿವೃದ್ಧಿಗೊಳಿಸಿಲ್ಲ. ಅಗತ್ಯ ಬಂಡವಾಳ ತೊಡಗಿಸದೆ ಈಗ ನಷ್ಟದ ಹೆಸರಿನಲ್ಲಿ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ನೀತಿಯನ್ನು ಕ್ಷೇತ್ರದ ಪ್ರತಿಯೊಬ್ಬ ನಾಗರಿಕರು ಖಂಡಿಸಬೇಕಾಗಿದೆ ಎಂದರು.
ಸರ್ಕಾರ ಕಾರ್ಖಾನೆಯನ್ನು ತಾಂತ್ರಿಕ ನವೀಕರಣ ಮಾಡದೆ ಮಲತಾಯಿ ಧೋರಣೆ ತಾಳಿದೆ. ದೂರದೃಷ್ಟಿ ಹೊತ್ತು ಇದನ್ನು ಸ್ಥಾಪಿಸಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಸರ್.ಎಂ. ವಿಶ್ವೇಶ್ವರಯ್ಯ ಇವರ ಹೆಸರನ್ನು ಈ ಕ್ಷೇತ್ರದಿಂದ ಅಳಿಸಿ ಹಾಕುವ ಕೇಂದ್ರ ಸರ್ಕಾರದ ಕ್ರಮವನ್ನು ನಾವು ಬಲವಾಗಿ ಖಂಡಿಸುತ್ತೇವೆ ಎಂದರು.
ಈಗಾಗಲೇ ಎಂಪಿಎಂ ಕಾರ್ಖಾನೆ ಮುಚ್ಚಲ್ಪಟ್ಟು ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಪ್ರತಿಷ್ಠಿತ ವಿಐಎಸ್‌ಎಲ್ ಕಾರ್ಖಾನೆಯನ್ನು ಸಾಂಸ್ಕೃತಿಕವಾಗಿ ಉಳಿಸಲು ಮುಂದಾಗದ ಕೇಂದ್ರ ಸರಕಾರವನ್ನು ಎಚ್ಚರಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಹಾಲಿ ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ರಾಜ್ಯದ ಎಲ್ಲಾ 28 ಸಂಸದರು ಇಚ್ಚಾಶಕ್ತಿಯಿಂದ ಕಾರ್ಖಾನೆಯನ್ನು ಸಾರ್ವಜನಿಕ ವಲಯದಲ್ಲಿ ಉಳಿಸಲು ಕೇಂದ್ರ ಸರ್ಕಾರದೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನಕ್ಕೆ ಮುಂದಾಗಬೇಕಿದೆ. ಇಲ್ಲವಾದಲ್ಲಿ ಕ್ಷೇತ್ರದ ಜನತೆ ಮತ್ತು ಕಾರ್ಮಿಕರು ಹೋರಾಟ ತೀವ್ರಗೊಳಿಸಬೇಕಾಗುತ್ತದೆ ಎಂದರು.
ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್, ಜಯ ಕರ್ನಾಟಕ ಸಂಘದ ಪ್ರಮುಖರಾದ ಚನ್ನಪ್ಪ, ರಘುವೀರ್ ಸಿಂಗ್, ಫ್ರಾನ್ಸಿಸ್, ದೀಪಕ್, ಸುದೀಪ್ ಸೇರಿದಂತೆ ಅನೇಕರು ಕೇಂದ್ರ ಸರಕಾರದ ನೀತಿಯನ್ನು ಖಂಡಿಸಿ ಮಾತನಾಡಿ ನಂತರ ರಸ್ತೆಯಲ್ಲಿ ಮಲಗಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ಬೆಂಬಲಿಸಿ ನಿವೃತ್ತ ಕಾರ್ಮಿಕ ಸಂಘದ ಮುಖಂಡರಾದ ರವೀಂದ್ರ ರೆಡ್ಡಿ, ಶಂಕರಪ್ಪ, ತಿಪ್ಪೇಸ್ವಾಮಿ, ಶಿವಬಸಪ್ಪ ಪಾಟೀಲ್, ಮಂಜುನಾಥ ರಾವ್ ಪವಾರ್, ಕೆಂಪಣ್ಣ, ಬಲರಾಮೇ ಗೌಡ, ಗುತ್ತಿಗೆ ಕಾರ್ಮಿಕ ಸಂಘದ ಅಧ್ಯಕ್ಷ ಸುರೇಶ್, ರಾಕೇಶ್, ಅಂತೋಣಿ ಸೇರಿದಂತೆ ನೂರಾರು ಮಂದಿ ಭಾಗವಹಿಸಿದ್ದರು. ಸುಮಾರು ಅರ್ಧಗಂಟೆಗೂ ಅಕಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.