Advertisement

ವಿಐಎಸ್‌ಎಲ್ ಖಾಸಗೀಕರಣಕ್ಕೆ ವಿರೋಧ

10:41 AM Jul 24, 2019 | Team Udayavani |

ಭದ್ರಾವತಿ: ವಿಐಎಸ್‌ಎಲ್ ಕಾರ್ಖಾನೆಯ ಖಾಸಗೀಕರಣ ಹಾಗೂ 1 ಸಾವಿರ ಎಕರೆ ನಗರ ಪ್ರದೇಶವನ್ನು ಕೇಂದ್ರ ಸರಕಾರ ಖಾಸಗಿ ವ್ಯಕ್ತಿಗಳಿಗೆ ನೀಡಲು ಮುಂದಾಗಿರುವುದನ್ನು ವಿಐಎಸ್‌ಎಲ್ ನಿವೃತ್ತ ಕಾರ್ಮಿಕರು ಖಂಡಿಸಿ ಕಾರ್ಖಾನೆಯ ಮುಖ್ಯದ್ವಾರದ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಸಿದರು.

Advertisement

ನಿವೃತ್ತ ಕಾರ್ಮಿಕ ಕಲ್ಯಾಣ ಕೇಂದ್ರದ ಅಧ್ಯಕ್ಷ ಜೆ.ಎಸ್‌. ನಾಗಭೂಷಣ್‌ ಅಧ್ಯಕ್ಷತೆಯಲ್ಲಿ ಸಭೆ ಸೇರಿ ನಂತರ ಕಾರ್ಖಾನೆಯ ಮುಂಭಾಗ ಪ್ರತಿಭಟಿಸಿದ ನಿವೃತ್ತ ಕಾರ್ಮಿಕರು ಭಾರತ ರತ್ನ ಸರ್‌.ಎಂ. ವಿಶ್ವೇಶ್ವರಯ್ಯ ಸಂಸ್ಥಾಪಿಸಿದ ಕಾರ್ಖಾನೆಗೆ ನೂರು ವರ್ಷಗಳು ತುಂಬಿದ್ದು, ಶತಮಾನ ಆಚರಿಸುವ ಸಂದರ್ಭದಲ್ಲಿ ಶೋಕಾಚರಣೆ ಆಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆಯ ಜೊತೆಗೆ ಕೋಟ್ಯಂತರ ರೂ. ಬೆಲೆ ಬಾಳುವ ನಗರ ಪ್ರದೇಶ, ಪ್ರತಿಷ್ಟಿತ ಅತಿಥಿಗೃಹ, ಸ್ಟೇಡಿಯಂ, ಶಾಲಾ- ಕಾಲೇಜುಗಳು, ದೇವಸ್ಥಾನ, ಚರ್ಚ್‌ ಮಸೀದಿ ಹಾಗೂ ವಸತಿಗೃಹಗಳ ಜೊತೆಗೆ ಖಾಲಿ ಜಾಗವನ್ನು ಖಾಸಗಿ ವ್ಯಕ್ತಿಗಳಿಗೆ ವಹಿಸಲು ಸಿದ್ಧತೆ ನಡೆದಿದೆ.

ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸುವುದನ್ನು ಬಿಟ್ಟು ಖಾಸಗೀಕರಣಗೊಳಿಸಲು ಜಾಗತಿಕ ಟೆಂಡರ್‌ ಕರೆದಿರುವುದು ಖಂಡನೀಯ. ಕಾರ್ಖಾನೆ ದುಸ್ಥಿತಿಗೆ ಸೈಲ್ ಅಧಿಕಾರಿಗಳೇ ಕಾರಣಕರ್ತರಾಗಿದ್ದು, ತಾತ್ಸಾರ, ಬೇಜವಾಬ್ದಾರಿ, ಮಲತಾಯಿ ಧೋರಣೆಗೆ ಇಂದಿನ ಸ್ಥಿತಿಗೆ ಕಾರಣವಾಗಿದೆ. ಸೈಲ್ ಆಡಳಿತಕ್ಕೆ ಒಳಪಟ್ಟ ಹೊರ ರಾಜ್ಯ ಕಾರ್ಖಾನೆಗಳು ಸುಮಾರು 10 ವರ್ಷಗಳಲ್ಲಿ 75 ಸಾವಿರ ರೂ. ಬಂಡವಾಳ ತೊಡಗಿಸಿ ವಿಐಎಸ್‌ಎಲ್ ಕಾರ್ಖಾನೆಗೆ ಕೇವಲ 150 ಕೋಟಿ ರೂ. ಮಾತ್ರ ಒದಗಿಸಿರುವುದು ಸರಿಯಾದ ಕ್ರಮವಲ್ಲ ಎಂದರು.

ಖಾಸಗಿ ವ್ಯಕ್ತಿಗಳಿಗೆ ವಹಿಸಲುದ್ದೇಶಿಸಿರುವ ನಗರ ಪ್ರದೇಶವನ್ನು ದೀರ್ಘಾವಧಿ ಆಧಾರದಡಿ ಹಾಗೂ ಪರವಾನಗಿ ಆಧಾರದಡಿ ವಾಸವಿರುವ ಸುಮಾರು 2500 ನಿವೃತ್ತ ಕಾರ್ಮಿಕರಮನೆಗಳನ್ನು ರಕ್ಷಿಸಕೊಳ್ಳಬೇಕಿದೆ. ಯಾವುದೇ ಕಾರಣಕ್ಕೂ ಖಾಸಗಿ ವ್ಯಕ್ತಿಗಳ ಪಾಲಾಗದಂತೆ ನಿವೃತ್ತ ಕಾರ್ಮಿಕರು ಎಚ್ಚರ ವಹಿಸುವಮೂಲಕ ತೀವ್ರ ಹೋರಾಟ ಮಾಡಬೇಕಿದೆ. ಕೂಡಲೇ ಖಾಸಗೀಕರಣ ಕೈ ಬಿಟ್ಟು ಸೂಕ್ತ ಬಂಡವಾಳ ತೊಡಗಿಸಿ ನೂತನ ತಂತ್ರಜ್ಞಾನದಿಂದ ಕಾರ್ಖಾನೆಯನ್ನು ಅಭಿವೃದ್ಧಿಪಡಿಸಲು ಮುಂದಾಗಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ನಿವೃತ್ತ ಕಾರ್ಮಿಕ ಸಂಘದ ಪದಾಧಿಕಾರಿಗಳಾದ ಬಿ. ಮಂಜುನಾಥ್‌, ಎಸ್‌.ಎಚ್. ಹನುಮಂತರಾವ್‌, ಜಿ.ಕೆ. ರವೀಂದ್ರರೆಡ್ಡಿ, ಕೆಂಪಯ್ಯ, ಎಲ್. ಬಸವರಾಜ್‌, ಮುಖಂಡರಾದ ಕಬ್ಬಡಿ ಕೃಷ್ಣೇಗೌಡ, ಬಿ.ಜಿ. ರಾಮಲಿಂಗಯ್ಯ, ಕೆ.ಎನ್‌. ಭೈರಪ್ಪ ಗೌಡ, ಹಾ. ರಾಮಪ್ಪ, ಎಸ್‌.ಬಿ. ಶಿವಲಿಂಗಯ್ಯ, ನರಸಿಂಹಾಚಾರ್‌, ರಮೇಶ್‌, ಜಿ. ಶಂಕರ್‌, ಶಿವಬಸಪ್ಪ ಪಾಟೀಲ್, ಎಸ್‌.ಎಸ್‌. ಭೈರಪ್ಪ, ಮರಿಯಪ್ಪ, ಕಾರ್ಮಿಕ ಸಂಘದ ಅಧ್ಯಕ್ಷ ಜೆ. ಜಗದೀಶ್‌ ಮತ್ತಿತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next