ಭದ್ರಾವತಿ: ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವಂತೆ ಹಾಗೂ ಮೈಕ್ರೋ ಫೈನಾನ್ಸ್ ಹಾವಳಿ ನಿಯಂತ್ರಿಸುವಂತೆ ಕೋರಿ ಸಂಯುಕ್ತ ಜನತಾದಳದಿಂದ ಮಿನಿ ವಿಧಾನ ಸೌಧದ ಮುಂದೆ ಕೆಲ ಕಾಲ ಸತ್ಯಾಗ್ರಹ ನಡೆಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಮದ್ಯಪಾನ ನಿಷೇಧ ಮಾಡುವುದರಿಂದ ಅಸಂಖ್ಯಾತ ಬಡ ಕುಟುಂಬಗಳು ನೆಮ್ಮದಿಯುತ ಜೀವನ ನಡೆಸಲು ಸಾಧ್ಯವಾಗುತ್ತದೆ. ಲಾಕ್‌ಡೌನ್‌ನಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಾಗಿದೆ. ಈಗಿನ ಮುಖ್ಯಮಂತ್ರಿಗಳು ಈ ಹಿಂದೆ ಉಪ ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸಾರಾಯಿ ನಿಷೇಧಗೊಳಿಸಿದ್ದನ್ನು ಈಗಲೂ ಜನತೆ ಸ್ಮರಿಸುತ್ತಾರೆ. ಆದ್ದರಿಂದ ಈಗ ಮದ್ಯಪಾನ ನಿಷೇಧ ಜಾರಿಗೆ ತರುವ ಮೂಲಕ ಬರಲಿರುವ ಗಾಂಧಿ ಜಂಯಂತಿಗೆ ವಿಶಿಷ್ಟ ಕೊಡುಗೆ ನೀಡಿದಂತಾಗುತ್ತದೆ ಎಂದರು.
ರಾಜ್ಯದಲ್ಲಿ 55ಕ್ಕೂ ಅಧಿಕ ಮೈಕ್ರೋ ಫೈನಾನ್ಸ್‌ಗಳು ಆರ್‌ಬಿಐ ಮಾರ್ಗಸೂಚಿ ನಿಯಮಕ್ಕೆ ವಿರುದ್ಧವಾಗಿ ಕಾರ್ಯ ನಿರ್ವಹಿಸುತ್ತಾ ಸಾರ್ವಜನಿಕರಿಗೆ, ಮಹಿಳೆಯರಿಗೆ ಸಾಲ ವಸೂಲಾತಿಗೆ ಕಿರುಕುಳ ನೀಡುತ್ತಾ ಆರ್ಥಿಕವಾಗಿ ಅವರನ್ನು ಶೋಷಣೆ ಮಾಡುತ್ತಿವೆ. ಆದ್ದರಿಂದ ಅಂತಹ ಮೈಕ್ರೋ ಫೈನಾನ್ಸ್‌ಗಳ ಪರವಾನಗಿ ರದ್ದುಗೊಳಿಸಿ ಬಡಜನರ ಫೈನಾನ್ಸ್ ಸಾಲ ಮನ್ನಾ ಮಾಡಬೇಕು ಎಂದರು.
ಅಡುಗೆ ಅನಿಲ ಸಿಲಿಂಡರ್ ವಿತರಿಸುವ ಗ್ಯಾಸ್ ಏಜೆನ್ಸಿಯವರು ಬಿಲ್‌ನಲ್ಲಿ ನಮೂದಿತವಾದ ಮೊತ್ತಕ್ಕಿಂತ ಅಧಿ ಕವಾಗಿ ರೂ. 30ರಿಂದ 40 ರವರೆಗೆ ಹೆಚಿನ ಹಣವನ್ನು ಗ್ರಾಹಕರಿಂದ ಪಡೆಯುವ ಮೂಲಕ ಸಾರ್ವಜನಿಕರ ಶೋಷಣೆ ಮಾಡುತ್ತಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪೊಲೀಸ್ ಆಯುಕ್ತರಾಗಿದ್ದ ಔರಾದ್‌ಕರ್ ವರದಿ ಜಾರಿಗೆ ತರುವ ಮೂಲಕ ಪೊಲೀಸರಿಗೆ ಹೆಚ್ಚಿನ ಸೌಲಭ್ಯ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ರಾಜ್ಯದಲ್ಲಿ ಈಗಾಲೇ ಶಾಲೆಗಳನ್ನು ತೆರಯಬಾರದು. ಈ ನಮ್ಮ ಬೇಡಿಕೆಗಳು ಈಡೇರದಿದ್ದರೆ ಪಕ್ಷದ ವತಿಯಿಂದ ರಾಜ್ಯಾದ್ಯಂತ ಶಾಂತಿಯುತ ಹೋರಾಟ ಮಾಡಲಾಗುವುದು ಎಂದು ಪಕ್ಷದ ರಾಜ್ಯ ಉಪಾಧ್ಯಕ್ಷ ಶಶಿಕುಮಾರ್ ಎಸ್. ಗೌಡ ತಿಳಿಸಿ ತಹಶೀಲ್ದಾರ್ ಶಿವಕುಮಾರ್ ಆವರಿಗೆ ಮನವಿ ಸಲ್ಲಿಸಿದರು. ಸುಬ್ಬೇಗೌಡ, ರವಿನಾಯ್ಕ, ರವಿ, ಚಂದ್ರಶೇಖರ್ ಇದ್ದರು.