Advertisement

ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆಗೆ ಆಕ್ರೋಶ

01:22 PM Nov 21, 2019 | Naveen |

ಭದ್ರಾವತಿ: ವಿವಿಧ ಇಲಾಖೆಗಳಿಂದ ಆಗಬೇಕಾಗಿರುವ ಅಭಿವೃದ್ಧಿ ಕಾರ್ಯಗಳ ಕುರಿತು ತಾಪಂ ಸಭೆಯಲ್ಲಿ ಆಗುವ ಚರ್ಚೆ ಹಾಗೂ ನಿರ್ಣಯಗಳ ಪಾಲನೆಗೆ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಗಮನ ಹರಿಸದೆ ನಿರ್ಲಕ್ಷ್ಯ ಧೋರಣೆ ತೋರಿಸುತ್ತಿದ್ದಾರೆ ಎಂದು ತಾಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಬುಧವಾರ ತಾಪಂ ಸಭಾಂಗಣದಲ್ಲಿ ತಾಪಂ ಅಧ್ಯಕ್ಷೆ ಆಶಾ ಶ್ರೀಧರ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿದರು. ಸದಸ್ಯ ಧರ್ಮೇಗೌಡ ಮಾತನಾಡಿ, ತಾಪಂ ಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳು ಸಾರ್ವಜನಿಕರ ಸಮಸ್ಯೆಯ ಪರಿಹಾರಕ್ಕಾಗಿ ಇಲಾಖಾ ಅಧಿಕಾರಿಗಳು ಮಾಡಬೇಕಾದ ಕೆಲಸ ಆಗದಿರುವ ಬಗ್ಗೆ ಚರ್ಚಿಸಿ ಅವುಗಳ ಪಾಲನೆ ಆಗುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ. ಆದರೆ ಕೈಗೊಂಡ ನಿರ್ಣಯಗಳು ಎಷ್ಟು ಕಾರ್ಯಗತವಾಗಿವೆ ಎಂಬುದರ ಬಗ್ಗೆ ಆ ಇಲಾಖೆ ಅಧಿಕಾರಿಗಳು ಸಭೆಗೆ ಯಾವುದೇ ಮಾಹಿತಿ ನೀಡದೆ ಹಾರಿಕೆ ಉತ್ತರಗಳನ್ನು ನೀಡುವ ಮೂಲಕ ಸಭೆಗೆ ಅಗೌರವ ತೋರಿಸುತ್ತಾ ಬಂದಿದ್ದಾರೆ ಎಂದರು.

ಸದಸ್ಯ ದಿನೇಶ್‌ ಮಾತನಾಡಿ, ಅರಿಷಿಣಘಟ್ಟದ ಸೇತುವೆ ಹಾಳಾಗಿ 2-3ವರ್ಷ ಆಗಿದ್ದರೂ ಈವರೆಗೂ ಅದರ ದುರಸ್ತಿ ಆಗಿಲ್ಲ. ಅಲ್ಲಿ ಏನೇ ಅನಾಹುತವಾದರೂ ಅದಕ್ಕೆ ಸಂಬಂಧಪಟ್ಟ ನೀರಾವರಿ ಇಲಾಖೆಯವರೇ ಜವಾಬ್ದಾರಿ ಎಂದರು.

ಚರ್ಮೋದ್ಯೋಗ ಇಲಾಖೆ ಅಧಿಕಾರಿ ಸಭೆಯಲ್ಲಿ ಅನುಪಾಲನ ವರದಿ ಸಲ್ಲಿಸಿ ಮಾತನಾಡಿ, ನಮ್ಮ ಇಲಾಖೆಯಿಂದ ಮನೆ ನಿರ್ಮಾಣಕ್ಕೆ ನೀಡಲಾಗುವ ಸೌಲಭ್ಯ ಪಡೆಯಬೇಕಾದ ಫಲಾನುಭವಿಗಳು ಸರ್ಕಾರದ ಬೇರೆ ಯಾವುದೇ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣದ ಪ್ರಯೋಜನ ಪಡೆದಿರಬಾರದು. ಆ ರೀತಿ ಬೇರೆ ಯೋಜನೆಗಳಲ್ಲಿ ಮನೆ ಸೌಲಭ್ಯ ಪಡೆದಿರುವವರ ಹೆಸರನ್ನು ಕೈ ಬಿಡಲಾಗಿದೆ ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪೇಶ್‌ ರಾವ್‌, ಅಧಿ ಕಾರಿಗಳು ಈ ವಿಷಯವನ್ನು ಮುಂಚೆಯೇ ತಿಳಿಸಬೇಕಿತ್ತು. ಕೈಯಲ್ಲಿರುವ ಹಣ ಖರ್ಚು ಮಾಡಿ ಅರ್ಧ ಮನೆ ಕಟ್ಟಿ ಸರ್ಕಾರ ಮನೆ ನಿರ್ಮಾಣಕ್ಕೆ ಹಣ ನೀಡುತ್ತದೆ ಎಂದು ಕಾದು ಕುಳಿತಿರುವ ಜನರು ಈಗ ಏನು ಮಾಡಬೇಕು ಎಂದು ಪ್ರಶ್ನಿಸಿದರು.

ಶಾಲಾ ಕೊಠಡಿ ದುರಸ್ತಿಗೆ ಕ್ರಮ: ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದ ಹಾಳಾಗಿರುವ ಶಾಲಾ ಕೊಠಡಿಗಳ ದುರಸ್ತಿ ಬಗ್ಗೆ ಮಾಹಿತಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್‌, ಹಾನಿಗೊಳಗಾಗಿರುವ 108 ಶಾಲೆಗಳ 175 ಕೊಠಡಿಗಳ ದುರಸ್ತಿಗೆ ಸರ್ಕಾರದಿಂದ ಬಿಡುಗಡೆಯಾಗಿರುವ ಹಣದಲ್ಲಿ ವ್ಯವಸ್ಥೆ ಮಾಡಲಾಗುತ್ತಿದೆ ಎಂದರು.

Advertisement

ಕೆಲವು ಶಾಲೆಯಲ್ಲಿ ಮುಖ್ಯ ಶಿಕ್ಷಕರು, ಶಿಕ್ಷಕರು ಸರಿಯಾಗಿ ಶಾಲಾ ಅವಧಿಯಲ್ಲಿ ಇರುವುದಿಲ್ಲ. ಪದೇ ಪದೇ ತರಬೇತಿ ಇದೆ ಎಂದು ಹೋಗುತ್ತಾರೆ. ಮತ್ತೆ ಕೆಲವರು ಮೀಟಿಂಗ್‌ ಇದೆ ಎಂದು ಹೋಗುತ್ತಾರೆ. ಹೀಗಾದರೆ ಮಕ್ಕಳಿಗೆ ಪಾಠ ಹೇಗೆ ನಡೆಯುತ್ತದೆ ಎಂದು ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಶಾಲೆಯಲ್ಲಿ ಪ್ರಾರ್ಥನೆ ಆರಂಭವಾಗುವ ಅರ್ಧ ತಾಸು ಮುನ್ನ ಎಲ್ಲಾ ಶಿಕ್ಷಕರು ಆ ಸ್ಥಳದಲ್ಲಿ ಹಾಜರಿರಬೇಕು. ಮತ್ತು ಅದನ್ನು ಫೋಟೋ ತೆಗೆದು ಅಪ್‌ಲೋಡ್‌ ಮಾಡಿ ಹಾಕುವಂತೆ ಸೂಚಿಸಲಾಗಿದೆ. ಇನ್ನು ತರಬೇತಿ ವಿಷಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ತಿಳಿಸಿದೆ. ಈ ಬಾರಿ ಎಸ್‌ಎಸ್‌ ಎಲ್‌ಸಿ ಪರೀಕ್ಷೆ ವಿಧಾನ ಬದಲಾಗಿದ್ದು ಆದು ಹೇಗಿರುತ್ತದೆ ಎಂದು ಶಿಕ್ಷಕರಿಗೆ ತಿಳಿಸಿ ಮಕ್ಕಳಿಗೆ ತಿಳಿಸುವ ಕೆಲಸ ಮಾಡುವ ಪ್ರಯತ್ನದಲ್ಲಿದ್ದೇವೆ ಎಂದರು.

ತಾಪಂ ಕಾರ್ಯ ನಿರ್ವಹಣಾ ಧಿಕಾರಿ ತಮ್ಮಣ್ಣ ಗೌಡ ಮಾತನಾಡಿ, ಸಭೆಯಲ್ಲಿ ಕೈಗೊಳ್ಳುವ ನಿರ್ಣಯದ ಕುರಿತು ಆಯಾ ಇಲಾಖೆಯ ಅಧಿಕಾರಿಗಳು ಮುಂದಿನ ಸಭೆಯಲ್ಲಿ ಸಕಾರಾತ್ಮಕವಾದ ಅಂಶಗಳ ಅನುಪಾಲನಾ ವರದಿಯನ್ನು ಮುಂಚಿತವಾಗಿ ಸಲ್ಲಿಸಬೇಕು. ನೀವು ಆ ಕೆಲಸ ಮಾಡದಿರುವುದರಿಂದ ನಾವು ಇಲ್ಲಿ ಸದಸ್ಯರಿಂದ ಮಾತು ಕೇಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದರು. ಸಭೆಯಲ್ಲಿ ವಿವಿದ ಇಲಾಖೆಯ ಅಧಿಕಾರಿಗಳು ಭಾಗವಹಿಸಿ ವರದಿ ವಾಚಿಸಿದರು.

ತಾಪಂ ಅಧ್ಯಕ್ಷೆ ಆಶಾ ಶ್ರೀಧರ್‌ ಸಭೆಯ ಅಧ್ಯಕ್ಷತೆ ವಹಿಸಿದ್ದರು. ತಾಪಂ ಉಪಾಧ್ಯಕ್ಷೆ ಸರೋಜಮ್ಮ ಹಾಜ್ಯಾನಾಯ್ಕ ಇದ್ದರು. ಸದಸ್ಯರಾದ ಉಷಾ, ಅಣ್ಣಾಮಲೈ, ಮಂಜುನಾಥ್‌ ಕದಿರೇಶ್‌, ರುದ್ರಪ್ಪ, ಲಕ್ಷ್ಮೀ ದೇವಿ, ಪ್ರೇಂಕುಮಾರ್‌,ನಾಗರಾಜ್‌, ರಮೇಶ್‌, ಶಮಿಬಾನು, ಜಗದೀಶ್‌, ಶಕುಂತಲಾ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next