Advertisement

ಸೇವೆಯಲ್ಲಿ ದೇವರನ್ನು ಕಾಣಿ

05:05 PM May 12, 2019 | Team Udayavani |

ಭದ್ರಾವತಿ: ಸೇವಾಕಾರ್ಯವೇ ನಿಜವಾದ ಶ್ರೀಮಂತಿಕೆಯ ಪ್ರತೀಕ ಎಂದು ಮೈಸೂರು ಅವಧೂತ ದತ್ತ ಪೀಠದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಹೇಳಿದರು.

Advertisement

ಶುಕ್ರವಾರ ನ್ಯೂಟೌನ್‌ ಶಿವ ಸಾಯಿ ಕೃಪಾ ಧಾಮ ಟ್ರಸ್ಟ್‌ ಮತ್ತು ಪ್ರಶಾಂತಿ ಸೇವಾ ಟ್ರಸ್ಟ್‌ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 12 ದಿನಗಳ ಅತಿ ರುದ್ರ ಮಹಾಯಜ್ಞದ 3ನೇ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಆಶೀರ್ವಚನ ನೀಡಿದರು.

ಅನೇಕರಲ್ಲಿ ಹಣವಿರುತ್ತದೆ. ಆದರೆ ಅದನ್ನು ಸೇವಾಕಾರ್ಯಗಳಿಗೆ ಕೊಡುವ ಮನಸ್ಸಿರುವುದಿಲ್ಲ. ಕೆಲವರಲ್ಲಿ ಹಣದ ಕೊರತೆಯಿರುತ್ತದೆ. ಆದರೆ ತಮ್ಮ ಬಳಿ ಲಭ್ಯವಿರುವ ತನು ಮನ ಧನವನ್ನು ಸೇವಾಕಾರ್ಯಗಳಿಗೆ ಮುಕ್ತ ಮನಸ್ಸಿನಿಂದ ನೀಡುತ್ತಾರೆ. ಅಂತಹವರೇ ನಿಜವಾದ ಶ್ರೀಮಂತರು. ಸೇವೆಯಲ್ಲಿ ದೇವರನ್ನು ಕಾಣುವ ಮನಸ್ಥಿತಿಮ ಬೆಳೆಸಿಕೊಂಡಾಗ ಸಿಗುವ ಆನಂದ ಅಪರಿಮಿತ. ಅದನ್ನು ಅನುಭವಿಸಿದಾಗ ಮಾತ್ರ ಸೇವೆಯ ಮೌಲ್ಯದ ಅರಿವಾಗುತ್ತದೆ. ನಾವು ಮಾಡುವ ಪ್ರತಿಯೊಂದು ಉತ್ತಮ ಸೇವಾಕಾರ್ಯವೂ ಆ ಭಗವಂತನಿಗೆ ಸಲ್ಲಿಕೆಯಾಗುತ್ತದೆ. ಸೇವಾಕಾರ್ಯದಲ್ಲಿ ನಿರತರಾದವರನ್ನು ದೇವರು, ಗುರುಗಳು ಎಂದಿಗೂ ಕೈಬಿಡುವುದಿಲ್ಲ. ಒಂದಲ್ಲ ಒಂದು ದಿನ ಅವರ ಶ್ರಮ ಸಾರ್ಥಕಗೊಳ್ಳುತ್ತದೆ ಎಂದರು.

ನಾವು ಏನನ್ನು ಗಳಿಸಿದರೂ ಅದು ಈ ಸಮಾಜದಿಂದಲೇ ಗಳಿಸಿದ ಸಂಪತ್ತಾಗಿರುವುದರಿಂದ ಅದನ್ನು ಮರಳಿ ಸಮಾಜಕ್ಕೆ ನೀಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬರ ಮೇಲಿರುತ್ತದೆ. ಸಮಾಜದಲ್ಲಿ ಅನ್ನದಾನ ವಿದ್ಯಾದಾನ, ಆರೋಗ್ಯ ಸೇವೆ ಎಲ್ಲವನ್ನು ಹೆಚ್ಚು, ಹೆಚ್ಚು ಮಾಡುವುದರಿಂದ ನಾವು ಪಡೆದ ವಿದ್ಯೆ ಸಂಪತ್ತು ಎಲ್ಲವೂ ಸಾರ್ಥಕವಾಗುತ್ತದೆ. ಸೇವಾ ಮನೋಭಾವನೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳದೆ ಹೋದರೆ ಗಳಿಸಿದ ವಿದ್ಯೆ, ಸಂಪತ್ತು ಎಲ್ಲವೂ ನಿರರ್ಥಕ ಎಂದರು.

ಶಿವಮೊಗ್ಗ ರಾಮಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮೀಜಿ, ಮಹಾಯಜ್ಞ ಪ್ರಧಾನ ಅರ್ಚಕ ಕೆ.ಎಸ್‌. ಲಕ್ಷ್ಮೀನಾರಾಯಣ ಸೋಮಯಾಜಿ, ಪ್ರಶಾಂತಿ ಸೇವಾ ಟ್ರಸ್ಟ್‌ ಜಿಲ್ಲಾಧ್ಯಕ್ಷ ಎಂ. ದೇವೇಂದ್ರಪ್ಪ, ಹಿರಿಯ ಸಾಯಿಭಕ್ತರಾದ ರಾಜಗೋಪಾಲ್, ಸುಬ್ರಮಣ್ಯಂ ವಿಮಲಮ್ಮ, ಡಾ| ನಾಗರಾಜ್‌ ಆಚಾರ್ಯ ಇನ್ನಿತರರಿದ್ದರು. ಸಾಯಿ ಬಾಬಾ ಅವರ ಪವಾಡ, ಜೀವನ ಚರಿತ್ರೆ ಕುರಿತು ಜಗನ್ನಾಥ ನಾಡಿಗೇರ್‌ ಮಾತನಾಡಿದರು. ಸತ್ಯ ಸಾಯಿ ಬಾಬಾ ಸೇವಾಸಂಸ್ಥೆಗಳ ರಾಜ್ಯ ಸಂಯೋಜಕ ಪ್ರಭಾಕರ ಬೀರಯ್ಯ ಸ್ವಾಗತಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next