ಅಡಿಲೇಡ್: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ಪುರುಷರ ಕ್ರಿಕೆಟ್ ತಂಡವು ಬಾರ್ಡರ್ ಗಾವಸ್ಕರ್ ಟ್ರೋಫಿ (BGT) ಟೆಸ್ಟ್ ಸರಣಿಯ ಮೊದಲ ಪಂದ್ಯವನ್ನು ಗೆದ್ದುಕೊಂಡಿದೆ. ಎರಡನೇ ಪಂದ್ಯವು ಹಗಲು ರಾತ್ರಿ ಪಂದ್ಯವಾಗಿದ್ದು, ಮೊದಲ ಬಾರಿಗೆ ಆಸೀಸ್ ನೆಲದಲ್ಲಿ ಪಿಂಕ್ ಬಾಲ್ ಪಂದ್ಯ ಗೆಲ್ಲಲು ಟೀಂ ಇಂಡಿಯಾ ಯೋಜನೆ ಹಾಕಿಕೊಂಡಿದೆ.
ಈ ಬಾರಿ ಟೆಸ್ಟ್ ಸರಣಿ ಆರಂಭಕ್ಕೆ ಮೊದಲೇ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ ಕಾಡಿತ್ತು. ಅಭ್ಯಾಸ ಪಂದ್ಯದ ವೇಳೆ ಕೆಎಲ್ ರಾಹುಲ್ (KL rahul) ಮತ್ತು ಶುಭಮನ್ ಗಿಲ್ (Shubman Gill) ಗಾಯಗೊಂಡಿದ್ದರು. ಸರಿಯಾದ ಸಮಯದಲ್ಲಿ ಗುಣಮುಖರಾದ ರಾಹುಲ್ ಪರ್ತ್ ಪಂದ್ಯದಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದ ಗಿಲ್ ಅವರು ಮೊದಲ ಪಂದ್ಯದಿಂದ ಹೊರಬಿದ್ದಿದ್ದರು. ಅವರ ಬದಲಿಗೆ ದೇವದತ್ತ ಪಡಿಕ್ಕಲ್ ಆಡಿದ್ದರು.
ಶುಕ್ರವಾರ (ನ 29) ಬ್ಯಾಟರ್ ಶುಭಮನ್ ಗಿಲ್ ಅಭ್ಯಾಸಕ್ಕೆ ಹಿಂದಿರುಗಿದ್ದಾರೆ. ಅಡಿಲೇಡ್ ಟೆಸ್ಟ್ ಪಂದ್ಯದ ಮೊದಲು ಇದು ಭಾರತಕ್ಕೆ ಭಾರಿ ಬೂಸ್ಟ್ ನೀಡುತ್ತಿದೆ. ಮೊದಲು ಕ್ಯಾನ್‌ಬೆರಾದಲ್ಲಿ ಪ್ರೈಮ್ ಮಿನಿಸ್ಟರ್ಸ್ ಇಲೆವನ್ ವಿರುದ್ದದ ಅಭ್ಯಾಸ ಪಂದ್ಯಕ್ಕೂ ಮುನ್ನ ಗಿಲ್ ಇಂಡಿಯಾ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ.
ಮೊದಲ ಪಂದ್ಯಕ್ಕೆ ಅಲಭ್ಯರಾಗಿದ್ದ ನಾಯಕ ರೋಹಿತ್ ಶರ್ಮಾ ಕೂಡಾ ಮರಳಿದ್ದಾರೆ. ಹೀಗಾಗಿ ಕೆಎಲ್ ರಾಹುಲ್ ಅವರು ಮತ್ತೆ ಮಧ್ಯಮ ಕ್ರಮಾಂಕದಲ್ಲಿ ಆಡಬೇಕಾದ ಪರಿಸ್ಥಿತಿಯಿದೆ. ಅಡಿಲೇಡ್ ಪಂದ್ಯದಲ್ಲಿ ರಾಹುಲ್ ಬಹುತೇಕ ಆರನೇ ಕ್ರಮಾಂಕದಲ್ಲಿ ಜುರೆಲ್ ಬದಲು ಆಡುವ ಸಾಧ್ಯತೆಯಿದೆ.