ಸಿಂದಗಿ: ಕೋವಿಡ್ ಎರಡನೇ ಅಲೆಯಲ್ಲಿ ಮನುಕುಲ ಅತ್ಯಂತ ಸಂಕಷ್ಟ ಅನುಭವಿಸಿತು. ಕೋವಿಡ್ ಅಲೆ ಕಡಿಮೆಯಾಗಿದೆ ಎಂದು ನಿರ್ಲಕ್ಷಿಸುವಂತಿಲ್ಲ. ಮೂರನೇ ಅಲೆ ಬರುವ ಬಗ್ಗೆ ವಿಜ್ಞಾನಿಗಳು ಸಾಕಷ್ಟು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ನಾವು ಜಾಗೃತರಾಗಿರಬೇಕು ಎಂದು ಬಿಜೆಪಿ ಜಿಲ್ಲಾ ಅಸಂಘಟಿತ ಕಾರ್ಮಿಕರ ಪ್ರಕೋಷ್ಠಕ ಸಂಚಾಲಕ ಮುತ್ತು ಶಾಬಾದಿ ಹೇಳಿದರು.
ತಾಲೂಕಿನ ಯರಗಲ್ ಬಿ.ಕೆ. ಗ್ರಾಮದಲ್ಲಿ ಆರೆಸ್ಸೆಸ್ ಶಾಖಾ ಮಂಡಲದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಕೊರೊನಾ ಕುರಿತು ಜಾಗೃತಿ ಮೂಡಿಸಿ ಅವರು ಮಾತನಾಡಿದರು. ಮಾರಣಾಂತಿಕ ಕೋವಿಡ್-19 ಸೋಂಕಿನ ವಿರುದ್ಧ ಮೇಡ್ ಇನ್ ಇಂಡಿಯಾ ಲಸಿಕೆಯನ್ನು ಅಭಿವೃದ್ಧಿಪಡಿಸಿದ ಹಾಗೂ ಸೋಂಕು ಹರಡಿದ ಒಂದು ವರ್ಷದೊಳಗೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇತರ ಕ್ರಮಗಳನ್ನು ಹೆಚ್ಚಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಾರ್ಯ ಶ್ಲಾಘನೀಯ. ಕೋವಿಡ್-19 ವೈರಸ್ ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಉತ್ತಮ ಕಾರ್ಯ ಮಾಡಿದೆ.
ಮಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಸರ್ಕಾರ ಕೊರೊನಾ ನಿಯಂತ್ರಣಕ್ಕಾಗಿ ದಿಟ್ಟ ಕ್ರಮ ಕೈಗೊಂಡು ಯಶಸ್ವಿಯಾಗಿದೆ ಎಂದರು. ನಮ್ಮ ಸುತ್ತಲಿನ ಪರಿಸರ ಸ್ವತ್ಛತೆಯಿಟ್ಟುಕೊಳ್ಳುವ ಜೊತೆಗೆ ಗಿಡಗಳನ್ನು ಬೆಳೆಸಬೇಕು. ಪರಿಸರ ಬೆಳೆಸಬೇಕು. ವಾತಾವರಣದಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಬೇಕು. ಜೀವನದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಒಬ್ಬರ ಮಾಸ್ಕ್ ಇನ್ನೊಬ್ಬರು ಬಲಾಯಿಸಿಕೊಳ್ಳಬಾರದು. ಮೇಲಿಂದ ಮೇಲೆ ಸ್ಯಾನಿಟೈಸರ್ ಅಥವಾ ಸಾಬೂನ ಮೂಲಕ ಕೈ ತೊಳೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೂರನೇ ಅಲೆ ಎದುರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸನ್ನದ್ಧರಾಗಿ ನಿಂತಿವೆ. ಜೊತೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೊರೊನಾ ಕುರಿತು ವಿಧಿಸಿರುವ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವ ಮೂಲಕ ಕೊರೊನಾ ಮುಕ್ತ ದೇಶವನ್ನಾಗಿ ಮಾಡಲು ಸಹಕಾರ ನೀಡೋಣ ಎಂದರು. ಕೊರೊನಾ ವೇಳೆ ಪ್ರಧಾನಿ ಮೋದಿ ಗಟ್ಟಿ ತೀರ್ಮಾನ ಮತ್ತು ಸರಿಯಾದ ಸಮಯದಲ್ಲಿ ಲಾಕ್‌ಡೌನ್ ಮಾಡಿದರು. ಭಾರತದಲ್ಲಿ ಪ್ರತಿ ದಿನ ಆರು ಲಕ್ಷ ಪಿಪಿಇ ಕಿಟ್ ತಯಾರಾಗುತ್ತಿದೆ. ಈಗ ಜಗತ್ತಿನ ಮುಂದೆ ಭಾರತದ ಶಕ್ತಿ ಅನಾವರಣಗೊಂಡಿದೆ. ಏಳು ವರ್ಷದ ಆಡಳಿತ ಭಾರತವನ್ನು ಸಶಕ್ತಗೊಳಿಸಿದೆ. ಕೊರೊನಾದಿಂದ ದೇಶವನ್ನು ಕಾಪಾಡಲು ನಾವು ಸಮರ್ಥರಾಗಿದ್ದೇವೆ ಎಂದರು. ಕರೆಪ್ಪ ಪೂಜಾರಿ ಇದ್ದರು. ಆರೆಸ್ಸೆಸ್ ಮಂಡಲದ 87 ಸ್ವಯಂ ಸೇವಕರು ಭಾಗಿಯಾಗಿದ್ದರು.