Advertisement
ಬಟ್ಟೆ ಒಗೆಯುವ ಯಂತ್ರಕ್ಕೆ ಸಾಬೂನಿನ ದ್ರವ ಸುರಿದು, ಗುಂಡಿಯನ್ನೊತ್ತಿದ ನಂತರ ಒಗೆಯುವ ಕಾರ್ಯಾಚರಣೆ ಶುರುವಾಗಿ ಅದು ಮುಗಿಯುವವರೆಗೂ ಕಾಯತೊಡಗಿದೆ. ಒಂದು ತಾಸಿನ ನಂತರ ಯಂತ್ರ ಒಗೆದಿಟ್ಟ ವಸ್ತ್ರಗಳನ್ನು ತೆಗೆದು, ಅವುಗಳನ್ನು ಒಣಗಿಸಲು ಡ್ರೈಯರ್‌ನಲ್ಲಿ ತುಂಬಿದೆ. ಅದರ ಕೆಲಸ ಮುಗಿಯಲು ಮತ್ತೆ ಇನ್ನೊಂದು ತಾಸು. ಈ ಒಗೆದು ಒಣಗಿಸುವ ಕಾಯಕದ ನಡುವೆ ಸುಮ್ಮನೆ ಕುಳಿತಾಗ ಮನಸ್ಸು, ಕಲ್ಲಿನ ಮೇಲೆ ಕುಕ್ಕಿ, ಕಸುಕಿ ಬಟ್ಟೆಗಳನ್ನು ಒಗೆದು, ತಂತಿಗಳ ಮೇಲೆ ಹರವಿ ಒಣಗಿಸುತ್ತಿದ್ದ ಆ ದಿನಗಳನ್ನು ಮೆಲುಕು ಹಾಕತೊಡಗಿತು.
Related Articles
Advertisement
ಆಗೆಲ್ಲಾ ಮನೆಯ ಮುಂದೆ, ಹಿಂದೆ, ಎರಡೂ ಬದಿಯ ಖಾಲಿ ಜಾಗಗಳಲ್ಲಿ ತಂತಿಗಳನ್ನು ಕಟ್ಟಿರುತ್ತಿದ್ದರು. ಮನೆಯ ಹೊರಗೆ ಮಾತ್ರವಲ್ಲದೆ ಒಳಗೂ ತಂತಿ, ಹಗ್ಗಗಳದ್ದೇ ಪಾರುಪತ್ಯ. ಮಡಿ ಬಟ್ಟೆಗಳನ್ನು ಒಣಗಿಸಲು ಅಡುಗೆಮನೆಯ ಸೂರಿನಲ್ಲಿ ಸಣ್ಣಗಿನ ಬಿದಿರು ಕೋಲು ನೇತಾಡಿಕೊಂಡಿರುತ್ತಿತ್ತು. ಬಟ್ಟೆಗಳನ್ನು ಅದರ ಮೇಲೆ ಎಸೆದು, ನಂತರ ಉದ್ದನೆಯ ಕೋಲಿನ ಸಹಾಯದಿಂದ ಅದನ್ನು ಹರವಲು ಸ್ವಲ್ಪ ಮಟ್ಟಿಗಿನ ನೈಪುಣ್ಯ ಬೇಕಾಗಿತ್ತು.
ಮನೆಯ ಕೋಣೆಗಳಲ್ಲಿ ಕಪಾಟುಗಳಿರುತ್ತಿದ್ದರೂ ದಿನನಿತ್ಯದ ಬಟ್ಟೆಬರೆಗಳಿಗೆ ತಂತಿಗಳೇ ಆಶ್ರಯಧಾಮ. ಈ ತಂತಿಗಳ ಮೇಲೆ ಬಟ್ಟೆಗಳನ್ನು ಅದೆಷ್ಟೇ ಓರಣವಾಗಿ ಜೋಡಿಸಿದ್ದರೂ, ಮನೆಯ ಎಲ್ಲ ಸದಸ್ಯರೂ ಅದೇ ಶಿಸ್ತನ್ನು ಅನುಸರಿಸದ ಕಾರಣ ಬಟ್ಟೆಗಳು ವಿಚಿತ್ರ ರೀತಿಯಲ್ಲಿ ಮೇಲಿನಿಂದ ಕೆಳಗೆ ನೇತುಬಿದ್ದಿರುತ್ತಿದ್ದವು. ನನಗೆ ಅಂಥ ಸ್ಥಿತಿಯಲ್ಲಿರುವ ಬಟ್ಟೆಗಳನ್ನು ಕಂಡರೆ ಅದೇನೋ ಕೆಟ್ಟ ಸಿಡುಕು. ಹುಚ್ಚಿಯಂತೆ ಅಲ್ಲಿರುವ ಬಟ್ಟೆಗಳನ್ನೆಲ್ಲಾ ನೆಲಕ್ಕೆ ಕೆಡವಿ, ಮತ್ತೆ ಜೋಡಿಸಿ ಹಾಕುವವರೆಗೂ ನೆಮ್ಮದಿ ಇರುತ್ತಿರಲಿಲ್ಲ. ಆದರೇನು? ಆ ವ್ಯವಸ್ಥೆ ತಾತ್ಕಾಲಿಕವಷ್ಟೆ. ಅವ್ಯವಸ್ಥೆಯೇ ಶಾಶ್ವತ! ಈ ರೀತಿ ಬಾವಲಿಗಳಂತೆ ನೇತಾಡುತ್ತಿದ್ದ ಬಟ್ಟೆಗಳಿಗೆ ಅಮ್ಮ “ಜೋಲಾಮಾಲೆ’ ಎನ್ನುತ್ತಿದ್ದಳು. ನಾವೂ ಅರ್ಥ ತಿಳಿಯದೆ ಅದನ್ನೇ ಉಪಯೋಗಿಸುತ್ತಿದ್ದೆವು. ಅದರ ಅರ್ಥ ತಿಳಿಯಲು ಹುಡುಕಿದಾಗ, “ಜೋಲಾಮಾಲೆ’ಯ ಮೂಲಪದ “ಜೋಮಾಲೆ’ ಇರಬಹುದೇ ಎಂಬ ಗೊಂದಲ ಕಾಡಿತು. ಬೇಂದ್ರೆಯವರ “ಕುರುಡು ಕಾಂಚಾಣ’ ಕವಿತೆಯಲ್ಲಿ “ಸಣ್ಣ ಕಂದಮ್ಮಗಳ ಕಣ್ಣೀನ ಕವಡೀಯ ತಣ್ಣನ್ನ ಜೋಮಾಲೆ ಕೊರಳೊಳಗಿತ್ತೋ..’ ಎಂಬ ಸಾಲಿನಲ್ಲಿರುವಂತೆ ಜೋಮಾಲೆಯೆಂದರೆ ಉದ್ದನೆಯ ಹಾರ.
ಈ ಬಟ್ಟೆ ಒಣಗಿಸುವ ಕೆಲಸ ನೆರೆಹೊರೆಯವರಲ್ಲಿ ಆತ್ಮೀಯ ವಾತಾವರಣವನ್ನು ನಿರ್ಮಿಸುತ್ತಿತ್ತು. ವಠಾರದಲ್ಲಿ ಬದುಕು ಸಾಗಿಸಿದವರಿಗೆ ಈ ವಿಷಯ ಅನುಭವಕ್ಕೆ ಬಂದೇ ಇರುತ್ತದೆ. ಎಲ್ಲರ ಮನೆ ಬಟ್ಟೆಗಳನ್ನು ಒಣಗಿಸಲು ಮನೆಯ ಮೇಲಿರುವ ಟೆರೇಸಿನಲ್ಲಿ ತಂತಿಗಳನ್ನು ಒಟ್ಟಾಗಿ ಕಟ್ಟಿರುತ್ತಿದ್ದುದು ಸಾಮಾನ್ಯ. ಹೆಂಗಳೆಯರೆಲ್ಲ ಒಗೆದಿಟ್ಟ ಬಟ್ಟೆಗಳನ್ನು ಬಕೇಟುಗಳಲ್ಲಿ ತುಂಬಿಕೊಂಡು ಮಾಳಿಗೆ ಮೇಲೇರಿ ಬಟ್ಟೆಗಳನ್ನು ಹರವುತ್ತಾ, ಪರಸ್ಪರ ಹರಟುತ್ತಾ ಸುಖದುಃಖಗಳನ್ನು ಹಂಚಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಸಂಜೆಯ ವೇಳೆ ಇದ್ದಕ್ಕಿದ್ದಂತೆ, ಮಳೆಹನಿಗಳು ಬೀಳತೊಡಗಿದರೆ, ಆ ಹೊತ್ತಿನಲ್ಲಿ ಮನೆಯಲ್ಲಿದ್ದವರು ತಮ್ಮದರ ಜೊತೆಗೆ ಉಳಿದವರ ಬಟ್ಟೆಗಳನ್ನೂ ತೆಗೆದು, ನಂತರ ಆಯಾ ಮನೆಯವರಿಗೆ ತಲುಪಿಸುತ್ತಿದ್ದರು. ಒಣಗಿದ ಬಟ್ಟೆಗಳನ್ನು ಮಳೆಯಿಂದ ಕಾಪಾಡಿ, ಜತನದಿಂದ ತಲುಪಿಸಿದವರಿಗೆ ತಮ್ಮಿಂದ ಇತರರಿಗೆ ಸಣ್ಣಉಪಕಾರವಾಯೆ¤ಂಬ ಧನ್ಯತಾಭಾವವಾದರೆ, ಉಪಕೃತರಾದವರ ಹೃದಯ ಕೃತಜ್ಞತೆಯಿಂದ ತುಂಬಿ ಭಾರ! ಬಿಸಿಲು, ಮಳೆಗಾಳಿಗಳಿಗೆ ತಮ್ಮನ್ನು ಒಡ್ಡಿಕೊಂಡಿರುತ್ತಿದ್ದ ಈ ಜಡ ತಂತಿಗಳು ಕೂಡ ಇಂಥದ್ದೊಂದು ಸೌಹಾರ್ದವನ್ನು ಸದ್ದಿಲ್ಲದೆ ಪ್ರಹಹಿಸುವ ಸುವರ್ಣ ಸೇತುವೆಗಳಾಗಿದ್ದವೆಂದರೆ ಅತಿಶಯೋಕ್ತಿಯಲ್ಲ!
-ತ್ರಿವೇಣಿ ಶ್ರೀನಿವಾಸರಾವ್, ಶಿಕಾಗೊ