ಬೆಂಗಳೂರು: ಮೊಬೈಲ್ ಆ್ಯಪ್ ಮೂಲಕ ಕ್ರಿಕೆಟ್ ಬೆಟ್ಟಿಂಗ್ ಆಡುತ್ತಿದ್ದ ಆರೋಪಿಯನ್ನು ಸಿಸಿಬಿಯ ವಿಶೇಷ ವಿಚಾರಣಾ ದಳದ ಅಧಿಕಾರಿಗಳು ಬಂಧಿಸಿದ್ದಾರೆ. ನೆಲಮಂಗಲದ ನಟರಾಜ (35) ಬಂಧಿತ. ಆರೋಪಿಯಿಂದ 8.50 ಲಕ್ಷ ರೂ. ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಕ್ರಿಕೆಟ್ ಬುಕ್ಕಿಗಳಾದ ನೆಲಮಂಗಲದ ಅರುಣ್ ಹಾಗೂ ಬೆಂಗಳೂರಿನ ವೀರು ಅಲಿಯಾಸ್ ವೀರೂಬಾಯ್ ಎಂಬುವರ ಪತ್ತೆಗೆ ಶೋಧ ನಡೆಯುತ್ತಿದೆ. ತಲೆಮರೆಸಿಕೊಂಡಿರುವ ಆರೋಪಿ ವೀರು ಮುಂಬೈ ಹಾಗೂ ದೆಹಲಿ ಮೂಲದ ಕ್ರಿಕೆಟ್ ಬುಕ್ಕಿಗಳ ಜತೆ ಸಂಪರ್ಕದಲ್ಲಿದ್ದು,
“ಕ್ರಿಕೆಟ್ ಆನ್ ಲೈನ್’ ಎಂಬ ಮೊಬೈಲ್ ಆ್ಯಪ್ ಮೂಲಕ ನಗರ ಹಾಗೂ ಹೊರ ಜಿಲ್ಲೆಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುತ್ತಿದ್ದಾನೆ. ಈ ಆ್ಯಪ್ ಮೂಲಕವೇ ಪ್ರತಿ ಬಾಲ್‌ಗೆ ಬೆಟ್ಟಿಂಗ್ ಕಟ್ಟುತ್ತಿದ್ದರು. ಇತ್ತೀಚೆಗೆ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆದ ಏಕದಿನ ಕ್ರಿಕೆಟ್ ಪಂದ್ಯಾವಳಿಗೆ ಸಂಬಂಧಪಟ್ಟಂತೆ ತಂಡಗಳ ಸೋಲು ಮತ್ತು ಗೆಲುವಿನ ಕುರಿತು ಆ್ಯಪ್ ಮೂಲಕ ಬೆಟ್ಟಿಂಗ್ ಆಡುತ್ತಿದ್ದರು.
ಈ ಹಿನ್ನೆಲೆಯಲ್ಲಿ ಆರೋಪಿ ನಟರಾಜ ಸ್ಥಳೀಯವಾಗಿ ಬೆಟ್ಟಿಂಗ್‌ನಲ್ಲಿ ಪಳಗಿದ್ದು, ಬೆಟ್ಟಿಂಗ್ ಆಡುವವರ ಬಳಿ ಹಣ ಸಂಗ್ರಹಿಸಿಕೊಂಡು ನಗರದಲ್ಲಿರುವ ವೀರೂಬಾಯ್‌ಗೆ ಕೊಡಲು ತರುತ್ತಿದ್ದ. ಈ ಖಚಿತ ಮಾಹಿತಿ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪ್ರಾಥಮಿಕ ಮಾಹಿತಿ ಪ್ರಕಾರ “ಕ್ರಿಕೆಟ್ ಆನ್ ಲೈನ್’ ಆ್ಯಪ್ ಭಾರತದಲ್ಲೇ ಸಿದ್ದಪಡಿಸಲಾಗಿದೆ.
ಗೂಗಲ್ ಪ್ಲೇ ಸ್ಟೋರ್‌ನಿಂದ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವ ಬೆಟ್ಟಿಂಗ್ ಆಡುವ ವ್ಯಕ್ತಿ ಮೊದಲಿಗೆ ಯಾವ ಪಂದ್ಯ(ಏಕದಿನ, 20-20 ಹಾಗೂ ಇತರೆ) ಎಂದು ಆಯ್ಕೆ ಮಾಡಿಕೊಳ್ಳಬೇಕು. ಬಳಿಕ ಬುಕ್ಕಿಗಳ ಜತೆ ಒಪ್ಪಂದ ಮಾಡಿಕೊಂಡು, ನಿಗದಿತ ಕ್ರಿಕೆಟ್ ಆಟಗಾರ, ಪ್ರತಿ ಬಾಲ್, ರನ್, ಫೋರ್, ಸಿಕ್ಸರ್‌ಗಳಿಗೆ ಹಣ ಹೂಡಿಕೆ ಮಾಡಬಹುದು. ಯಾವ ಬಾಲ್‌ಗೆ ಬ್ಯಾಟ್ಸ್‌ಮ್ಯಾನ್ ಸಿಕ್ಸ್ ಅಥವಾ ಫೋರ್ ಒಡೆಯುತ್ತಾನೆ.
ಯಾರ ಬೌಲಿಂಗ್‌ಗೆ ವಿಕೆಟ್ ಉರುಳುತ್ತದೆ ಎಂಬಿತ್ಯಾದಿ ಆಯ್ಕೆಗಳು ಅಲ್ಲಿಯೇ ಇರುತ್ತವೆ. ಅಷ್ಟೇ ಅಲ್ಲದೆ, ಅಂತಿಮವಾಗಿ ಯಾವ ತಂಡ ಗೆಲ್ಲುತ್ತದೆ? ಸೋಲುತ್ತದೆ? ಎಂಬುದನ್ನು ಆ್ಯಪ್ ಮೂಲಕವೇ ಆಯ್ಕೆ ಮಾಡಿಕೊಳ್ಳಬೇಕು. ನಂತರ ವಾಟ್ಸ್‌ಆ್ಯಪ್ ಹಾಗೂ ಫೋನ್ ಮೂಲಕ ಮಾತಾಡಿಕೊಂಡು ಇಂತಿಷ್ಟು ಹಣ ಹೂಡಿಕೆ ಮಾಡುತ್ತಾರೆ. ಆರೋಪಿಗಳ ಜಾಲ ದೊಡ್ಡದಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.