Advertisement

Betting App: ಮಹಾದೇವನ ಹೆಸರಲ್ಲಿ ಮೋಸ

12:03 AM Oct 06, 2023 | Team Udayavani |

ಈ ವರ್ಷಾಂತ್ಯದಲ್ಲಿ ಚುನಾವಣೆಗೆ ಸಾಕ್ಷಿಯಾಗಲಿರುವ ಛತ್ತೀಸ್‌ಗಢದಲ್ಲಿ ಈಗ ಮಹಾದೇವ ಬೆಟ್ಟಿಂಗ್‌ ಹಗರಣ ಸದ್ದು ಮಾಡುತ್ತಿದೆ. ದುಬಾೖಯಲ್ಲಿದ್ದು ಕೊಂಡು ಸಾವಿರಾರು ಕೋಟಿ ರೂ. ಅಕ್ರಮ ವೆಸಗಿರುವ ಆರೋಪದ ಮೇಲೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ. ಬುಧವಾರವಷ್ಟೇ ಇ.ಡಿ. ರಣಬೀರ್‌ ಕಪೂರ್‌ಗೆ ಸಮನ್ಸ್‌ ನೀಡಿತ್ತು. ಗುರುವಾರ ಕಪಿಲ್‌ ಶರ್ಮ, ಹುಮಾ ಖುರೇಶಿ, ಹಿನಾ ಖಾನ್‌ಗೂ ಸಮನ್ಸ್‌ ನೀಡಲಾಗಿದೆ.

Advertisement

 ಏನಿದು ಮಹಾದೇವ ಬೆಟ್ಟಿಂಗ್‌ ಜಾಲ?

ಮಹಾದೇವ ಆನ್‌ಲೈನ್‌ ಬುಕ್‌ ಬೆಟ್ಟಿಂಗ್‌ ಆ್ಯಪ್‌ ಒಂದು ಅಂಬ್ರೆಲಾ ಸಿಂಡಿಕೇಟ್‌ ಆಗಿದ್ದು, ಈ ಆ್ಯಪ್‌, ಹಲವಾರು ಅಕ್ರಮ ಬೆಟ್ಟಿಂಗ್‌ ವೆಬ್‌ಸೈಟ್‌ಗಳಿಗೆ ವೇದಿಕೆ ಸೃಷ್ಟಿ ಮಾಡಿಕೊಡುತ್ತಿತ್ತು. ಇದು ಹೊಸ ಬಳಕೆದಾರರ ಸೇರ್ಪಡೆ, ಯೂಸರ್‌ ಐಡಿಗಳ ಸೃಷ್ಟಿ, ಬೇನಾಮಿ ಅಕೌಂಟ್‌ಗಳಿಗೆ ಹಣವನ್ನು ರವಾನಿಸುವ ಕೆಲಸ ಮಾಡುತ್ತಿತ್ತು. ದೇಶದ ಹೊರಗಿನ ಅಕ್ರಮ ಅಕೌಂಟ್‌ಗಳಿಗೆ ಭಾರೀ ಪ್ರಮಾಣದ ಹಣವನ್ನು ಅಕ್ರಮವಾಗಿ ಕಳುಹಿಸಿರುವ ಆರೋಪವೂ ಕೇಳಿಬಂದಿದೆ. ಭಾರತದಲ್ಲಿಯೂ ಜಾಹೀರಾತಿಗಾಗಿ ಭಾರೀ ಪ್ರಮಾಣದ ಹಣ ವೆಚ್ಚ ಮಾಡಿದ್ದು, ಹೊಸ ಬಳಕೆದಾರರನ್ನು ಸೇರಿಸಿಕೊಂಡಿದ್ದಾರೆ. ಜತೆಗೆ ದೇಶದಲ್ಲಿ ಫ್ರಾಂಚೈಸಿಗಳನ್ನೂ ಮಾಡಿಕೊಟ್ಟಿದ್ದಾರೆ.

 ಈ ಆ್ಯಪ್‌ ಕೆಲಸ ಮಾಡುವುದು ಹೇಗೆ?

ಈ ಆ್ಯಪ್‌ನ ಪ್ಲಾಟ್‌ಫಾರ್ಮ್ ಯುಎಇಯಲ್ಲಿದೆ. ಇದಕ್ಕೆಂದೇ ಪ್ರತ್ಯೇಕ ಕಾಲ್‌ ಸೆಂಟರ್‌ಗಳೂ ಇವೆ. ಇವುಗಳು ನೆದರ್ಲೆಂಡ್ಸ್‌, ನೇಪಾಲ, ಶ್ರೀಲಂಕಾ ಮತ್ತು ಯುಎಇನಲ್ಲಿವೆ. ಗ್ರಾಹಕರು ಈ ಕಾಲ್‌ಸೆಂಟರ್‌ಗಳಿಗೆ ಕರೆ ಮಾಡಿದಾಗ ಅವರು, ವಾಟ್‌Âಆ್ಯಪ್‌ ನಂಬರ್‌ ಮೂಲಕ ಎಲ್ಲ ಮಾಹಿತಿ ಶೇರ್‌ ಮಾಡುವಂತೆ ಕೇಳುತ್ತಾರೆ. ಈ ಮಾಹಿತಿಯನ್ನು ಭಾರತದಲ್ಲಿರುವ ಆಪರೇಟರ್‌ಗಳಿಗೆ ಹಂಚಲಾಗುತ್ತದೆ. ಈ ಆಪರೇಟರ್‌ಗಳು ಮುಂಬಯಿ, ದಿಲ್ಲಿ, ಚಂಡೀಗಢ‌ ಮತ್ತು ಛತ್ತೀಸ್‌ಗಢ‌ದ ಸಣ್ಣಪುಟ್ಟ ನಗರಗಳಲ್ಲಿ ಕಾರ್ಯ ನಿರ್ವಹಿಸುತ್ತಾರೆ.  ಸುಮಾರು 4 ಸಾವಿರದಿಂದ 5 ಸಾವಿರ ಆಪರೇಟರ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಇವರು ಗ್ರಾಹಕರಿಗೆ ಯುಪಿಐ ಮತ್ತು ಬ್ಯಾಂಕ್‌ ಅಕೌಂಟ್‌ಗಳ ಮೂಲಕ ಹಣ ರವಾನಿಸುತ್ತಾರೆ. ಈ ಪ್ಯಾನಲ್‌ ಆಪರೇಟರ್‌ಗಳು ನಕಲಿ ಬ್ಯಾಂಕ್‌ ಖಾತೆ ಹೊಂದಿದ್ದು, ಬಂದ ಹಣವನ್ನು ಹಂಚಿಕೆ ಮಾಡುತ್ತಾರೆ. ಈ ಪ್ಯಾನಲ್‌ ಆಪರೇಟರ್‌ಗಳು ದಿನಕ್ಕೆ 150ರಿಂದ 200 ಕೋಟಿ ರೂ. ವರೆಗೆ ಗಳಿಕೆ ಮಾಡುತ್ತಾರೆ. ಪ್ರತೀ ಸೋಮವಾರ ಗ್ರಾಹಕರ ಖಾತೆಗಳಿಗೆ ಹಣ ಹೋಗುತ್ತದೆ.

Advertisement

 417 ಕೋ.ರೂ. ಆಸ್ತಿ ವಶ

ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಛತ್ತೀಸ್‌ಗಡ ಸೇರಿದಂತೆ ಕೆಲವು ರಾಜ್ಯಗಳಲ್ಲಿ ದಾಳಿ ನಡೆಸಿದೆ. ಈ ಸಂದರ್ಭದಲ್ಲಿ 417 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ವಶ ಪಡಿಸಿಕೊಂಡಿದೆ.

 ಆರೋಪಿಗಳು ಯಾರು?

ಛತ್ತೀಸ್‌ಗಢ ಮೂಲದ ಸೌರಭ್‌ ಚಂದ್ರಶೇಖರ್‌(28) ಮತ್ತು ರವಿ ಉಪ್ಪಳ್‌(43) ಎಂಬವರೇ ಇದರ ರೂವಾರಿಗಳು. ಇವರಿಬ್ಬರು ಬದುಕು ಅರಸಿಕೊಂಡು ಯುಎಇಗೆ ಹೋಗಿದ್ದು, ಅಲ್ಲಿ ಮೊದಲಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಬಳಿಕ ಈ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ ರೂಪಿಸಿ, ಬೇರೆಯವರ ಅಕ್ರಮಕ್ಕೂ ವೇದಿಕೆ ಸೃಷ್ಟಿ ಮಾಡಿಕೊಟ್ಟರು. ಸದ್ಯ ಇವರ ಈ ಆನ್‌ಲೈನ್‌ ಬೆಟ್ಟಿಂಗ್‌ನಿಂದಾಗಿಯೇ 6,000 ಕೋಟಿ ರೂ. ಹಣ ಮಾಡಿದ್ದಾರೆ. ಈ ಅಕ್ರಮದಿಂದ ಬಂದ ಲಾಭದಲ್ಲಿ ಶೇ.80ರಷ್ಟನ್ನು ಇವರಿಬ್ಬರೇ ಇರಿಸಿಕೊಳ್ಳುತ್ತಿದ್ದರು.

 ಅಕ್ರಮ ಬೆಟ್ಟಿಂಗ್‌ ಜಾಲ

ಪೋಕರ್‌, ಕಾರ್ಡ್‌ ಗೇಮ್ಸ್‌, ಚಾನ್ಸ್‌ ಗೇಮ್ಸ್‌, ಕ್ರಿಕೆಟ್‌, ಬ್ಯಾಡ್ಮಿಂಟನ್‌, ಟೆನಿಸ್‌, ಫ‌ುಟ್‌ಬಾಲ್‌ ಪಂದ್ಯಗಳ ವೇಳೆ ಲೈವ್‌ ಬೆಟ್ಟಿಂಗ್‌ಗೆ ಅವಕಾಶ ಮಾಡಿಕೊಡುತ್ತಿದ್ದರು. ಜತೆಗೆ ಭಾರತದಲ್ಲಿನ ಚುನಾವಣೆ ವೇಳೆ ಬೆಟ್ಟಿಂಗ್‌ ಮಾಡಲಾಗುತ್ತಿತ್ತು. ಅಷ್ಟೇ ಅಲ್ಲ ತೀನ್‌ ಪಟ್ಟಿ, ಪೋಕರ್‌, ಡ್ರ್ಯಾಗನ್‌ ಟೈಗರ್‌, ವಚ್ಯುìವಲ್‌ ಕ್ರಿಕೆಟ್‌ ಗೇಮ್ಸ್‌ ಇತರ ಗೇಮ್ಸ್‌ಗಳನ್ನೂ ಆಡಲೂ ಅವಕಾಶ ಮಾಡಿಕೊಡಲಾಗುತ್ತಿತ್ತು.

 ಬಾಲಿವುಡ್‌ನ‌ವರಿಗೂ ಸಂಕಷ್ಟ

ಕಳೆದ ಫೆಬ್ರವರಿಯಲ್ಲಿ ಸೌರಭ್‌ ಚಂದ್ರಶೇಖರ್‌ ಯುಎಇಯಲ್ಲೇ ವಿವಾಹವಾಗಿದ್ದಾನೆ. ಬಾಲಿವುಡ್‌ನ‌ ರಣಬೀರ್‌, ಟೈಗರ್‌ ಶ್ರಾಫ್, ಸನ್ನಿ ಲಿಯೋನ್‌, ನೇಹಾ ಕಕ್ಕರ್‌, ವಿಶಾಲ್‌ ದೊಡ್ಲಾನಿ, ಭಾಗ್ಯಶ್ರೀ, ಕೃತಿ ಕರಬಂಧ, ನುಶ್ರುತಾ ಭರುಚಾ ಮತ್ತು ಕ್ರುತಾ ಅಭಿಷೇಕ್‌ ಭಾಗಿಯಾಗಿದ್ದರು. ಇವರಿಗೆ ಜಾರಿ ನಿರ್ದೇಶನಾಲಯ ಈ ಹಿಂದೆಯೇ ನೋಟಿಸ್‌ ನೀಡಿತ್ತು.  ಈಗ ರಣಬೀರ್‌ ಕಪೂರ್‌, ಕಪಿಲ್‌ ಶರ್ಮ, ಹಿಮಾ ಖುರೇಶಿ, ಹಿನಾ ಖಾನ್‌ರಿಗೂ  ಸಮನ್ಸ್‌ ನೀಡಲಾಗಿದೆ.

ಬರೋಬ್ಬರಿ 200 ಕೋ.ರೂ. ವೆಚ್ಚ

ಕುಟುಂಬಸ್ಥರು ಮತ್ತು ಬಾಲಿವುಡ್‌ ಗಣ್ಯರನ್ನು ಕರೆಸಿಕೊಂಡು, ದುಬಾೖಯಲ್ಲಿ ವಾಸ್ತವ್ಯದ ವ್ಯವಸ್ಥೆಗೆಂದೇ ಆರೋಪಿಗಳಿಬ್ಬರು 200 ಕೋಟಿ ರೂ. ವೆಚ್ಚ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯದ  ಮೂಲಗಳು ಹೇಳಿವೆ. ಮುಂಬಯಿ ಮೂಲಕ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಯೊಂದು ವ್ಯವಸ್ಥೆ ಮಾಡಿದ್ದು, ಇದಕ್ಕೆ ಹವಾಲ ಮೂಲಕವೇ  ಹಣ ನೀಡಲಾಗಿದೆ ಎಂದು ಅದು ತಿಳಿಸಿದೆ.

ಛತ್ತೀಸ್‌ಗಢ ಸಿಎಂ ರಾಜಕೀಯ ಸಲಹೆಗಾರರಿಗೆ ನಂಟು

ಛತ್ತೀಸ್‌ಗಢದ ಮುಖ್ಯಮಂತ್ರಿ ರಾಜಕೀಯ ಸಲಹೆಗಾರ ವಿನೋದ್‌ ವರ್ಮ ಮತ್ತು ವಿಶೇಷ ಕಾರ್ಯನಿರ್ವಹಣೆಯ ಇಬ್ಬರು ಅಧಿಕಾರಿಗಳಿಗೂ ಈ ಹಗರಣಕ್ಕೂ ನಂಟಿರುವ ಬಗ್ಗೆ ಇ.ಡಿ. ಶಂಕೆ ವ್ಯಕ್ತಪಡಿಸಿದ್ದು, ದಾಳಿಯನ್ನೂ ನಡೆಸಿದೆ. ಈ ಸಂದರ್ಭದಲ್ಲಿ ನಾಲ್ವರನ್ನು ಬಂಧಿಸಲಾಗಿದೆ. ಇವರನ್ನು ಅಕ್ರಮವಾಗಿ ಹಣ ಸಾಗಣೆ ಮಾಡಲು ಬಳಸಿಕೊಂಡಿರುವ ಸಾಧ್ಯತೆ ಇದೆ. ಹಗರಣ ಸಂಬಂಧ ಕೆಲವು ಪೊಲೀಸರನ್ನೂ ಇ.ಡಿ. ಬಂಧಿಸಿದೆ.

2021ರಲ್ಲೇ 429 ಮಂದಿ ಬಂಧನ

ಈ ಪ್ರಕರಣದಲ್ಲಿ ಇ.ಡಿ. ಪ್ರವೇಶಿಸುವ ಮುನ್ನ ಛತ್ತೀಸ್‌ಗಢ ಪೊಲೀಸರೇ ಕ್ರಮ ತೆಗೆದುಕೊಂಡಿದ್ದರು. 2021ರಲ್ಲಿ ಪೊಲೀಸರು ಕಾರ್ಯಾಚರಣೆಗಿಳಿದಿದ್ದು, 75 ಎಫ್ಐಆರ್‌ ಹಾಕಿದ್ದಾರೆ. 429 ಮಂದಿಯನ್ನು ಬಂಧಿಸಲಾಗಿದೆ. 191 ಲ್ಯಾಪ್‌ಟಾಪ್‌ಗ್ಳು, 858 ಸ್ಮಾರ್ಟ್‌ಫೋನ್‌ಗಳು, ಎರಡೂವರೆ ಕೋಟಿ ರೂ. ಮೌಲ್ಯದ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ. 3,033 ಬ್ಯಾಂಕ್‌ ಅಕೌಂಟ್‌ಗಳನ್ನು ಇದರಲ್ಲಿ ಬಳಕೆ ಮಾಡಲಾಗಿದ್ದು ಒಂದು ಸಾವಿರಕ್ಕೂ ಹೆಚ್ಚು ಅಕೌಂಟ್‌ಗಳನ್ನು ಜಪ್ತಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next