ಹಾವೇರಿ: ಧಾರ್ಮಿಕ ಕಾರ್ಯಕ್ರಮಗಳು, ಪೂಜೆ, ಮದುವೆ, ಮತ್ತಿತರ ಶುಭ ಸಮಾರಂಭಗಳಲ್ಲಿ ಅಗ್ರಸ್ಥಾನ ಪಡೆದಿರುವ ವೀಳ್ಯದೆಲೆ, ಎಲೆ-ಅಡಕೆ ಪ್ರಿಯರಿಗಂತೂ ವೀಳ್ಯದೆಲೆ ಜತೆಗಿರಲೇಬೇಕು. ಆದರೆ, ಇದೀಗ ವೀಳ್ಯದೆಲೆಗೆ ಮಾರುಕಟ್ಟೆಯಲ್ಲಿ ಬಂಗಾರದ ಬೆಲೆ ಬಂದಿದ್ದು, ಗ್ರಾಹಕರ ಕೈ ಕಚ್ಚುತ್ತಿದೆ.
ಹೌದು, ಕಳೆದ 15 ದಿನದಿಂದ ಜಿಲ್ಲೆಯ ಮಾರುಕಟ್ಟೆಯಲ್ಲಿ ವೀಳ್ಯದೆಲೆಯ ಬೆಲೆ ಬರೋಬ್ಬರಿ ಮೂರು ಪಟ್ಟು ಹೆಚ್ಚಳ ಕಂಡಿದ್ದು, ಬಲೆ ಏರಿಕೆಯ ತಾಪ ಇದೀಗ ಗ್ರಾಹಕರ ಜೇಬಿಗೆ ಕತ್ತರಿ ಹಾಕುತ್ತಿದೆ. ಒಂದು ಕಟ್ಟಿನ ವೀಳ್ಯದೆಲೆ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ 40-50 ರೂ.ಗೆ ಮಾರಾಟವಾಗುತ್ತದೆ. ಬೇಸಿಗೆ ಬಂದರೆ ಅಬ್ಟಾಬ್ಟಾ ಅಂದರೂ 60-80ರೂ. ಒಳಗೆ ಮಾರಾಟ ಆಗಿರುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೀಗ, ಮಾರುಟ್ಟೆಯಲ್ಲಿ ವೀಳ್ಯದೆಲೆಗೆ ಬಂಗಾರದ ಬೆಲೆ ಬಂದಿದ್ದು, ಗ್ರಾಹಕರು ವೀಳ್ಯದೆಲೆಯ ದರ ಕೇಳಿ ತಬ್ಬಿಬ್ಬುಗೊಳ್ಳುವಂತಾಗಿದೆ.
ಬೆಲೆ ಏರಿಕೆಗೆ ಕಂಗಾಲಾದ ಗ್ರಾಹಕ:
ಸದ್ಯ ಮಾರುಕಟ್ಟೆಯಲ್ಲಿ ವೀಳ್ಯದೆಲೆಗೆ ಚಿನ್ನದ ಬೆಲೆ ಬಂದಿದ್ದು, ಒಂದು ಕಟ್ಟಿಗೆ (100 ಎಲೆ) ಬರೋಬ್ಬರಿ 180-200 ರೂ.ವರೆಗೂ ಮಾರಾಟವಾಗುತ್ತಿದೆ. ಈ ಬೆಲೆ ಏರಿಕೆಗೆ ಗ್ರಾಹಕರು ಕಂಗಾಲಾಗಿ ಹೋಗಿದ್ದಾರೆ. ಔಷಧ ಗುಣವುಳ್ಳ ವೀಳ್ಯದೆಲೆಯನ್ನು ಹೆಚ್ಚಾಗಿ ಬಳಕೆ ಮಾಡುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಅಡಕೆಯೊಂದಿಗೆ ವೀಳ್ಯದೆಲೆ ಬೆರೆಸಿಕೊಂಡು ಜಗಿದರೆ, ಅತ್ತ ನಗರ ಪ್ರದೇಶದಲ್ಲಿ ಪಾನ್ ಮಸಾಲಾ ಪ್ರಿಯರು ತಂಬಾಕು ಉತ್ಪನ್ನಗಳ ಜೊತೆಗೆ ವೀಳ್ಯದೆಲೆ ಬಳಸಿಕೊಂಡು ಜಗಿಯುತ್ತಾರೆ. ಧಾರ್ಮಿಕ ಪೂಜಾ ಕಾರ್ಯಕ್ರಮಗಳಿಂದ ಹಿಡಿದು ದೊಡ್ಡದೊಡ್ಡ ಹಬ್ಬ ಹರಿದಿನಗಳು ಬಂದರೆ ಅಥವಾ ಮದುವೆ, ನಾಮಕರಣ, ಆರತಕ್ಷತೆ ಸೇರಿದಂತೆ ಶುಭ ಸಮಾರಂಭಗಳಲ್ಲಿ ವೀಳ್ಯದೆಲೆ ಖಾಯಂ ಸ್ಥಾನ ಪಡೆದಿದೆ. ಇಂತಹ ವೀಳ್ಯದೆಲೆಗೆ ಈಗ ಬಂಗಾರದ ಬೆಲೆ ಬಂದಿದ್ದು, ಬೆಲೆ ಏರಿಕೆ ಪರಿ ನೋಡಿ ಗ್ರಾಹಕರು ಗಾಬರಿಗೊಳ್ಳುವಂತಾಗಿದೆ. ಈಗಾಗಲೇ ಮಾರುಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಇದರ ನಡುವೆ ಈಗ ಬೆಲೆ ಏರಿಕೆ ಸರದಿ ವೀಳ್ಯದೆಲೆಯದ್ದಾಗಿದ್ದು, ಎಲೆ-ಅಡಕೆ ಹಾಕಿಕೊಳ್ಳುವವರ ಬಾಯಿ ಸುಡುವಂತೆ ಬೆಲೆ ದುಪ್ಪಟ್ಟಾಗಿದೆ.
Related Articles
ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ವೀಳ್ಯದೆಲೆ ಪೂರೈಕೆಯಾಗುತ್ತಿಲ್ಲ. ಮಳೆಗಾಲದಲ್ಲಿ 10-12 ಬಂಡಲ್ ವೀಳ್ಯದೆಲೆ ಪೂರೈಕೆಯಾಗುತ್ತಿತ್ತು. ಆದರೆ ಈಗ, 2-3 ಬಂಡಲ್ ಅಷ್ಟೇ ಪೂರೈಕೆಯಾಗುತ್ತಿದೆ. ಮೂಢಗಾಳಿ ಹಿನ್ನೆಲೆಯಲ್ಲಿ ಎಲೆಬಳ್ಳಿ ತೋಟಗಳಲ್ಲೂ ಇಳುವರಿ ಕುಂಠಿತಗೊಂಡಿದ್ದು, ಸದ್ಯ ಒಂದು ಕಟ್ಟಿಗೆ (100 ಎಲೆ) 180-200ರೂ. ಮಾರಾಟ ಮಾಡಲಾಗುತ್ತಿದೆ.
-ಶಫೀಕ್ ಅಹ್ಮದ್ ಮುಲ್ಲಾ, ವೀಳ್ಯದೆಲೆ ವ್ಯಾಪಾರಸ್ಥರು
ಕಳೆದ ವರ್ಷ ಸುರಿದ ಅಕಾಲಿಕ ಮಳೆ ಹಾಗೂ ಅತಿವೃಷ್ಟಿಯಿಂದಾಗಿ ಎಲೆಬಳ್ಳಿ ತೋಟಗಳು ನೆಲಕಚ್ಚಿವೆ. ಅಲ್ಲದೇ, ಅಧಿ ಕ ತೇವಾಂಶದಿಂದಾಗಿ ಎಲೆಬಳ್ಳಿ ವಿವಿಧ ರೋಗಕ್ಕೆ ತುತ್ತಾಗಿ ನಿರೀಕ್ಷಿತ ಮಟ್ಟದಲ್ಲಿ ಇಳುವರಿ ಬರುತ್ತಿಲ್ಲ. ಸದ್ಯ ಬೀಸುತ್ತಿರುವ ಮೂಢಗಾಳಿಗೆ ಮತ್ತಷ್ಟು ಎಲೆಬಳ್ಳಿಗಳು ಒಣಗುತ್ತಿದ್ದು, ಅವುಗಳನ್ನು ಉಳಿಸಿಕೊಳ್ಳಲು ಹರಸಾಹಸಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. –ಮಂಜಪ್ಪ ಹಾವನೂರು, ಎಲೆಬಳ್ಳಿ ಬೆಳೆಗಾರ
ಸದ್ಯದ ಮಾರುಕಟ್ಟೆಯಲ್ಲಿ ವೀಳ್ಯದೆಲೆ ದರ ಗಗನಕ್ಕೇರಿದ್ದು, ಧಾರ್ಮಿಕ ಪೂಜೆ, ಶುಭ ಸಮಾರಂಭಗಳಲ್ಲಿ ವೀಳ್ಯದೆಲೆ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡುವಂತಾಗಿದೆ. ಶುಭ ಸಮಾರಂಭಗಳಿಗೆ ಆಗಮಿಸಿದ್ದ ಅತಿಥಿಗಳಿಗೆ ಊಟದ ನಂತರ ಅಡಕೆ, ಎಲೆ ನೀಡಲಾಗುತ್ತಿತ್ತು. ಆದರೆ, ಈಗ ಅತಿಥಿಗಳಿಗೆ ಕೇವಲ ಸಿಹಿಮಿಶ್ರಿತ ಅಡಕೆ ಪುಡಿ ನೀಡಿ ಸತ್ಕರಿಸುವ ಸ್ಥಿತಿ ಎದುರಾಗಿದೆ.
-ಶಾರದಾ ಪೂಜಾರ, ಹಾವೇರಿ
ಅತಿವೃಷ್ಟಿ-ಮೂಢಗಾಳಿಗೆ ಬೆಳೆ ಹಾನಿ:
ಅದರೆ ಮಲೆನಾಡು ಪ್ರದೇಶವಾದ ಜಿಲ್ಲೆಯ ಸವಣೂರು ತಾಲೂಕು, ಹಾವೇರಿ ತಾಲೂಕಿನ ಗುತ್ತಲ, ನೆಗಳೂರು, ಹಾವನೂರ, ಕನವಳ್ಳಿ ಗ್ರಾಮ ಹಾಗೂ ಹಾನಗಲ್ಲ ತಾಲೂಕಿನ ಪ್ರದೇಶಗಳಲ್ಲಿ ವೀಳ್ಯದೆಲೆ ತೋಟಗಳು ಕಂಡು ಬರುತ್ತವೆ. ಆದರೆ, ಈಗ ಜಿಲ್ಲೆಯಲ್ಲಿ ಬೀಸುತ್ತಿರುವ ಮೂಢಗಾಳಿಗೆ ಅರ್ಧಕ್ಕೆ ಅರ್ಧದಷ್ಟು ವೀಳ್ಯದೆಲೆ ಇಳುವರಿ ಕುಂಠಿತಗೊಂಡಿದೆ. ಅಲ್ಲದೇ, ಕಳೆದ ವರ್ಷದ ಅತಿವೃಷ್ಟಿಯಿಂದ ಜಿಲ್ಲೆಯ ಕೆಲವು ಭಾಗದಲ್ಲಿನ ಎಲೆ ಬಳ್ಳಿ ತೋಟಗಳು ಸಂಪೂರ್ಣ ನಾಶವಾಗಿವೆ. ಹೀಗಾಗಿ, ನಿರೀಕ್ಷಿತ ಪ್ರಮಾಣದಲ್ಲಿ ವೀಳ್ಯದೆಲೆ ಮಾರುಕಟ್ಟೆಗೆ ಆಗಮಿಸದ ಪರಿಣಾಮ ಬೆಲೆ ಹೆಚ್ಚಳ ಕಂಡಿದೆ ಎನ್ನುವ ಮಾತುಗಳು ವ್ಯಾಪಾರಸ್ಥರಿಂದ ಕೇಳಿ ಬರುತ್ತಿದೆ
ವೀರೇಶ ಮಡ್ಲೂರ