ಕುಷ್ಟಗಿ: ತಾಲೂಕಿನ ನಿಡಶೇಸಿಯ ಕರ್ನಾಟಕ ರಾಜ್ಯ ತೋಟಗಾರಿಕೆ ಅಭಿವೃದ್ಧಿ ಏಜೆನ್ಸಿ(ಕೆಎಸ್ ಎಚ್‌ಡಿಎ) ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರವು ಹಲವು ಯಶಸ್ವಿ ಪ್ರಯೋಗಗಳಿಗೆ ಸಾಕ್ಷಿಯಾಗಿದೆ.
ಅನ್ನದಾತರ ದೈನಂದಿನ ಆದಾಯದ ಬೆಳೆಯಾದ, ಆಯಾ ಪ್ರದೇಶಕ್ಕೆ ಸೀಮಿತವೆನಿಸಿದ ವೀಳ್ಯದೆಲೆ(ಎಲೆಬಳ್ಳಿ)ಯನ್ನು ಪಾಲಿಹೌಸ್ (ನೆರಳು ಪರದೆ)ನಲ್ಲಿ ಬೆಳೆದು ಸೈ ಎನಿಸಿದೆ.
ರೇಷ್ಮೆಯಂತೆ ನವಿರಾದ ಎಲೆ: ಸಾಮಾನ್ಯವಾಗಿ ಎಲೆಬಳ್ಳಿ ಬಯಲು ಪ್ರದೇಶದಲ್ಲಿ ಅಂತರ್ಜಲ ನೀರಾವರಿ ಆಧಾರಿತವಾಗಿ ಬೆಳೆಯುವುದು. ಈ ಭಾಗದ ಯರಗೇರಾ, ಮುದುಟಗಿ ಮೊದಲಾದ ಗ್ರಾಮಗಳಲ್ಲಿ ಇದನ್ನು ಪಾರಂಪರಿಕವಾಗಿ ಬೆಳೆಯಲಾಗುತ್ತಿದೆ. ನಿಡಶೇಸಿ ತೋಟಗಾರಿಕಾ ಕ್ಷೇತ್ರದ 10 ಗುಂಟೆಯ ಪಾಲಿಹೌಸ್‌ನಲ್ಲಿ 1,000 ಬಳ್ಳಿ ಬೆಳೆಸಿರುವುದು ಉತ್ತರ ಕರ್ನಾಟಕದಲ್ಲಿ ಎಲ್ಲಿಯೂ ಇಲ್ಲವೆನ್ನಬಹುದು. ಇದು 3 ತಿಂಗಳ ಬೆಳೆಯಾಗಿದ್ದು, ಎಲೆಗಳು ಅಗಲವಾಗಿ ರೇಷ್ಮೆಯಂತೆ ನವಿರಾಗಿವೆ.
ಮೂರು ಪಟ್ಟು ಆದಾಯ: ತೆರೆದ ಕೃಷಿಯಲ್ಲಿ 1 ಎಕರೆಯಲ್ಲಿ ವೀಳ್ಯದೆಲೆಯ ಉತ್ಪನ್ನ 10 ಗುಂಟೆ ಪಾಲಿಹೌಸ್‌ಗೆ ಸಮವೆನಿಸಿದೆ. ತೆರೆದ ಕೃಷಿಯಲ್ಲಿ ವೀಳ್ಯದೆಲೆಗೆ ನೀಡುವ ಆಹಾರದಲ್ಲಿ ಬಳ್ಳಿಯ ಆಧಾರಕ್ಕಾಗಿ ಬೆಳೆಸುವ ನುಗ್ಗೆ, ಬೊರಲಾ, ಚಾಗಟಿಮರಗಳಿಗೆ ಶೇ.50 ಉಪಯೋಗವಾದರೆ ಉಳಿದ ಶೇ.50 ವೀಳ್ಯದೆಲೆ ಬಳ್ಳಿಗೆ ಉಪಯೋಗವಾಗುತ್ತದೆ. ಪ್ರತಿ ಬಳ್ಳಿಗೆ 500 ವೀಳ್ಯದೆಲೆ ಉತ್ಪನ್ನ ತೆರೆದ ಕೃಷಿಯಲ್ಲಿ ಸಾಧ್ಯವಿದೆ. ಅದೇ ಸಂರಕ್ಷಿತ ಪಾಲಿಹೌಸ್‌ನಲ್ಲಿ ಮೂರುಪಟ್ಟು ಸಾಧ್ಯವಿದ್ದು, ಚೆನ್ನಾಗಿ ನಿರ್ವಹಣೆ ಮಾಡಿದರೆ 2,500 ಎಲೆಗಳವರೆಗೆ ನಿರೀಕ್ಷಿಸಬಹುದು. ಪಾಲಿಹೌಸ್‌ನಲ್ಲಿ ಬೆಳೆದ ವೀಳ್ಯದೆಲೆಗೂ, ತೆರೆದ ಕೃಷಿಯಲ್ಲಿ ಬೆಳೆದ ಎಲೆಗೂ ವ್ಯತ್ಯಾಸ ಗುರುತಿಸಬಹುದಾಗಿದ್ದು, ಪ್ರತಿ ಪೆಂಡಿ 3,500 ರೂ.ಗೆ ಮಾರಾಟವಾಗಿದೆ. ಹನುಮಸಾಗರ, ಕುಷ್ಟಗಿ, ಕೊಪ್ಪಳ, ಗಜೇಂದ್ರಗಡ ಸ್ಥಳೀಯ ಮಾರುಕಟ್ಟೆಯಲ್ಲಿ 6 ಸಾವಿರ ಎಲೆ(225 ಪೆಂಡಿ) ಗೆ 1500 ರೂ. ಬೆಲೆ ಸಿಗುತ್ತದೆ. ಶಿವಮೊಗ್ಗ, ಬೆಂಗಳೂರು, ಬೆಳಗಾವಿ, ಮುಂಬೈನಲ್ಲಿ 2,500 ರೂ. ಬೆಲೆ ಸಿಗುವುದು ಖಾತ್ರಿಯಾಗಿದೆ. ಹೊರಗಡೆ ಮಾರುಕಟ್ಟೆಯಾದರೆ 2,500 ರೂ. ಆದಾಯವಿದ್ದರೆ ಸ್ಥಳೀಯ ಮಾರುಕಟ್ಟೆಯಲ್ಲಿ 1500 ರೂ. ಇದೆ. ಹೊರಗಡೆ ಮಾರು ಕಟ್ಟೆಯಾದರೆ 5.50 ಲಕ್ಷ ರೂ. ಆಗುತ್ತದೆ. ಇದರಲ್ಲಿ 1.50 ಲಕ್ಷ ರೂ. ಖರ್ಚು ತೆಗೆದರೂ 4 ಲಕ್ಷ ರೂ. ಆದಾಯ ಸಾಧ್ಯವಿದೆ. ತೆರೆದ ಕೃಷಿಯಲ್ಲಿ 3 ಲಕ್ಷ ರೂ.ವರೆಗೆ ಆದಾಯ ನಿರೀಕ್ಷಿಸಬಹುದಾಗಿದೆ.
ವಾರ್ಷಿಕ 18 ಲಕ್ಷ ಎಲೆ: ಪಾಲಿಹೌಸ್ ನಲ್ಲಿ ಬಿದಿರು ಕೋಲಿಗೆ ವೀಳ್ಯದೆಲೆಯ ಬಳ್ಳಿ ಹಬ್ಬಿಸಲಾಗಿದ್ದು, ಆಧಾರಕ್ಕೆ ಗಿಡ ಬೆಳೆಸಿಲ್ಲ. ಪ್ರತಿ ಬಳ್ಳಿಗೆ 1500 ವೀಳ್ಯದೆಲೆ ನಿರೀಕ್ಷಿಸಬಹುದಾಗಿದೆ. ಒಮ್ಮೆ ನಾಟಿ ಮಾಡಿದರೆ ಕನಿಷ್ಟ 40 ವರ್ಷ ಅದಕ್ಕಿಂತ ಹೆಚ್ಚು ಇಳುವರಿ ಬರುತ್ತದೆ. 10 ಗುಂಟೆಯಲ್ಲಿ 1 ಸಾವಿರ ಬಳ್ಳಿಗಳಿಂದ ವರ್ಷಕ್ಕೆ 18 ಲಕ್ಷ ಎಲೆ ನಿರೀಕ್ಷಿಸಬಹುದಾಗಿದೆ. ಪೆಂಡಿ (ಬಂಡಲ್) ಲೆಕ್ಕದಲ್ಲಿ 3ಸಾವಿರ ಪೆಂಡಿಯಂತಾದರೆ ಹೆಚ್ಚು ಕಡಿಮೆ 600 ಪೆಂಡಿ ಬರುತ್ತದೆ 1 ಪೆಂಡಿಗೆ 850 ರೂ.ದಿಂದ 1500 ರೂ. ದರ ಇದೆ. ಚಳಗಾಲ, ಬೇಸಿಗೆಯಲ್ಲಿ 1500 ರೂ. ಮಳೆಗಾಲದಲ್ಲಿ 850 ಬೆಲೆ ಇರುತ್ತದೆ. ಪಾಲಿಹೌಸ್ ನಲ್ಲಿ ಬೆಳೆದ ವೀಳ್ಯದೆಲೆ ಗುಣಮಟ್ಟ, ಶೈನಿಂಗ್, ಎಲೆಗಳ ಗಾತ್ರ ತೆರೆದ ಕೃಷಿಯಲ್ಲಿ ನಿರೀಕ್ಷಿಸಲು ಸಾಧ್ಯವಿಲ್ಲ ಎನ್ನುತ್ತಾರೆ ನಿಡಶೇಸಿ ತೋಟಗಾರಿಕಾ ಕ್ಷೇತ್ರದ ಸಹಾಯಕ ನಿರ್ದೇಶಕ ವಿನಾಯಕರಡ್ಡಿ ಬಿ. ಮಾಲಿಪಾಟೀಲ.
ಸಹಾಯಕ ಅಧಿಕಾರಿಗಳಾದ ಆಂಜನೇಯ ದಾಸರ್, ಶಿವಪ್ಪ ಶಾಂತಗೇರಿ, ಪ್ರಗತಿಪರ ಎಲೆಬಳ್ಳಿ ಕೃಷಿಕ ನಿಂಗಪ್ಪ ಕಾರಿ, ಪ್ರಗತಿಪರ ಬೆಳೆಗಾರ ರಮೇಶ ಕೊನೆಸಾಗರ ಹಾಜರಿದ್ದರು.
ಸಂಪೂರ್ಣ ಸಾವಯವ ಕೃಷಿ ಆಧಾರಿತ ಬೆಳೆಯಾಗಿದ್ದು, ಯಾವುದೇ ರಾಸಾಯನಿಕ ಸೋಕಿಸುವಂತಿಲ್ಲ. ಈ ಪಾಲಿಹೌಸ್‌ನ ಬೆಳೆಗೆ ಸೆಗಣಿ ಗೊಬ್ಬರ ಹಾಗೂ ಪ್ರಾಯೋಗಿಕವಾಗಿ ಎರೆ ಜಲ ಬಳಸಿರುವುದು ಎಲೆಗಳು ಉತ್ಕೃಷ್ಟವಾಗಿವೆ. ಮುಂದಿನ ಹಂತದಲ್ಲಿ ಕಲ್ಕತ್ತಾ, ಕರಿ ಎಲೆ ಬೆಳೆಸಲಾಗುವುದು. ಪಾಲಿಹೌಸ್ ಗೆ ಸರ್ಕಾರದಿಂದ ಶೇ. 50 ಸಹಾಯಧನ ಲಭ್ಯವಿದೆ. –
ವಿನಾಯಕರಡ್ಡಿ ಬಿ. ಮಾಲಿಪಾಟೀಲ, ಸಹಾಯಕ ನಿರ್ದೇಶಕರು, ಇಸ್ರೇಲ್ ಮಾದರಿ ತೋಟಗಾರಿಕೆ ಕ್ಷೇತ್ರ ನಿಡಶೇಸಿ.
ಮಂಜುನಾಥ ಮಹಾಲಿಂಗಪುರ