ಬಹುಪಯೋಗಿ ವೀಳ್ಯದೆಲೆ ಯಾರಿಗೆ ತಾನೆ ಬೇಡ? ಪ್ರತಿಯೊಬ್ಬರ ಮನೆಯಲ್ಲೂ ವೀಳ್ಯದೆಲೆಗಳ ಬಳಕೆ ಇದ್ದೇ ಇರುತ್ತೆ. ಅದರಲ್ಲೂ ಶುಭಕಾರ್ಯಗಳಿದ್ದಲ್ಲಿ ಅದಕ್ಕೇ ಪ್ರಥಮ ಸ್ಥಾನ. ಮನೆಯಲ್ಲಿ ಯಾರಿಗಾದರೂ ಶೀತವಾದಾಗ ಅಥವಾ ಅಜೀರ್ಣ ಸಮಸ್ಯೆಗೆ ತುತ್ತಾದಾಗ ಸಹಾಯಕ್ಕೆ ಬರುವ ಔಷಧಿ ವೀಳ್ಯದೆಲೆ. ಪೂಜಾ ಕಾರ್ಯ, ಆರೋಗ್ಯ ಸೇರಿದಂತೆ ಹಲವು ಸಂದರ್ಭಗಳಲ್ಲಿ ಬಳಕೆಯಾಗಿರುವ ಇನ್ನೂ ಹಲವು ಉಪಯೋಗಗಳಿರುವ ವೀಳ್ಯದೆಲೆಯನ್ನು ಮನೆಯಲ್ಲಿ ಬೆಳೆಯುವವರು ಕಡಿಮೆ. ಅಗತ್ಯ ಬಿದ್ದಾಗ ಸಂತೆಗೋ ಅಂಗಡಿಗೋ ಹೋಗಿ ಕೊಂಡು ತರಬಹುದಲ್ಲ ಎಂದೇ ಎಲ್ಲರ ಯೋಚನೆ.
ವೀಳ್ಯದೆಲೆಯನ್ನು ಬೆಳೆಯಲು ಹೆಚ್ಚಿನ ಜಾಗವೇನೂ ಬೇಕಿಲ್ಲ. ಸರಳ ಉಪಾಯ ಮಾಡಿದರೆ ಎಷ್ಟು ಚಿಕ್ಕ ಜಾಗದಲ್ಲೂ ವೀಳ್ಯವನ್ನು ಬೆಳೆಯಬಹುದು. ಒಂದು ಹಳೆಯ ಪ್ಲಾಸ್ಟಿಕ್ ಬಕೆಟ್ ಅಥವಾ ಚೀಲದಲ್ಲಿ ಮೂರು ತೂತು ಮಾಡಿ, ಮಣ್ಣು ತುಂಬಿರಿ. ಒಣಗಿದ ಸಗಣಿ ಗೊಬ್ಬರ ಹಾಗೂ ಹಸಿರು ಎಲೆಗಳನ್ನು ಆ ಮಣ್ಣಿನಲ್ಲಿ ಬೆರಸಿ. ನಂತರ ವೀಳ್ಯದೆಲೆಯ ಸಸಿ ನೆಟ್ಟು ಮನೆಯ ಹೊರಗೆ ಅಥವಾ ಮಹಡಿ ಮೇಲೆ ಬಿಸಿಲು ಬೀಳುವ ಕಡೆ ಇಡಿ. ದಿನಕ್ಕೆ ಒಂದು ಬಾರಿ ನೀರು ಹಾಕಿ. ಅಡುಗೆ ಮನೆಯಲ್ಲಿ ಕತ್ತರಿಸಿ ಉಳಿದ ತರಕಾರಿಗಳು ಮತ್ತು ಕೊಳೆತ ಹಣ್ಣು ತರಕಾರಿ, ಸೊಪ್ಪನ್ನು ಈ ಗಿಡಕ್ಕೆ ಹಾಕಿ ಮಣ್ಣು ಮುಚ್ಚಿ. ಈ ರೀತಿ ಮಾಡಿದರೆ ಗಿಡ ಸೊಗಸಾಗಿ ಬೆಳೆಯುತ್ತದೆ. ವೇಸ್ಟ್ ಮ್ಯಾನೇಜ್‌ಮೆಂಟ್ ಜೊತೆಗೆ ಸೊಂಪಾಗಿ ಬೆಳೆದ ವೀಳ್ಯದೆಲೆಯೂ ನಿಮ್ಮದಾಗುತ್ತದೆ.
ವೀಳ್ಯದೆಲೆಯಲ್ಲಿ ಮೈಸೂರು, ರಾಸ್ಥಾನ, ಆಂಧ್ರ, ಮದರಾಸ್ ಎಲೆಗಳು ಎಂಬ ವಿಧಗಳಿವೆ. ಇದರಲ್ಲಿ ಕಪ್ಪು ಎಲೆಗಳು ಸ್ವಲ್ಪ ಖಾರ. ವೀಳ್ಯದೆಲೆ ಬೆಳೆಯಲು ಕೆಂಪು ಮಣ್ಣು ಉತ್ತಮ. ಮನೆಯಲ್ಲಿ ಉಳಿಯುವ ಹಸಿರು ತ್ಯಾಜ್ಯವನ್ನು ಬಳಸಿದರೆ ಬಳ್ಳಿ ಚೆನ್ನಾಗಿ ಹಬ್ಬುತ್ತದೆ. ವೀಳ್ಯದೆಲೆಗೆ ವೈಟ್ ಪ್ಯಾಚಸ್ ಅನ್ನೋ ರೋಗ ಬರುವ ಅವಕಾಶವಿರುತ್ತದೆ. ಇದಕ್ಕೆ ಮೋನೋಕ್ರಟೋಫಾಸ್ ಅನ್ನು ಲೀ. 5 ಎಂ.ಎಲ್ ರೀತಿ ಬೆರೆಸಿ ಸಿಂಪಡಿಸಬೇಕು.
ಗಿಡಬಳ್ಳಿಗೆ ಆಸರೆಯಾಗಿ ಕಾಂಪೌಂಡ್ ಸರಳಿಗೆ ಅಥವಾ ಒಂದು ಬಲಿಷ್ಠ ದಾರದ ಆಸರೆಯೊಂದಿಗೆ ಹಬ್ಬಿಸಿ ಬೆಳೆಸಿದರೆ ವೀಳ್ಯದೆಲೆ ಹುಲುಸಾಗಿ ಬೆಳೆದು ನೋಡುವ ಕಣ್ಣಿಗೆ ಹಬ್ಬವುಂಟು ಮಾಡುತ್ತದೆ. ಪಾಟ್‌ಗಳಲ್ಲೂ ಇದನ್ನು ಬೆಳೆಯಬಹುದು. ಆದರೆ ಪ್ರತಿ 6 ತಿಂಗಳಿಗೊಂದು ಸಲ ಮಣ್ಣನ್ನು ಬದಲಾಯಿಸಬೇಕು. ಒಂದು ಬಳ್ಳಿಯಲ್ಲಿ ಹೆಚ್ಚಾ ಕಮ್ಮಿ 50-60 ಎಲೆಗಳು ಇರುತ್ತವೆ. ಪ್ರತಿದಿನ ನೀರು ಕೊಡುವುದು ಕಡ್ಡಾಯ. ಮಳೆಗಾಲದಲ್ಲಿ ಎರಡು, ಮೂರು ದಿನಕ್ಕೊಮ್ಮೆ ನೀರು ಹಾಕಿದರೆ ಸಾಕು. ಎರಡು, ಮೂರು ತಿಂಗಳಿಗೊಮ್ಮೆ ಪಾಟ್‌ನಲ್ಲಿರುವ ಕಳೆಯನ್ನು ತೆಗೆದರೆ ಗಿಡ ಸೋಂಪಾಗಿ ಬೆಳೆಯುತ್ತದೆ.
– ರತ್ನಮ್ಮ ಎ.ಆರ್.