ಮೈಸೂರು: ರೈತರಿಂದ ಗ್ರಾಹಕರಿಗೆ ನೇರವಾಗಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ತಲುಪಿಸುವ ಉದ್ದೇಶದಿಂದ ನಿಸರ್ಗ ಫೌಂಡೇಷನ್‌ನಿಂದ ವಾರ್‍ಯಾಂತದಲ್ಲಿ ನಡೆಸುವ ರೈತ ಸಂತೆಗೆ ಈ ವಾರವೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು.
ಮೈಸೂರಿನ ಜೆ.ಪಿ.ನಗರದ ಜೆಎಸ್‌ಎಸ್ ಕಾಲೇಜು ಬಳಿ ನಿಸರ್ಗ ಫೌಂಡೇಷನ್ ಆಯೋಜಿಸಿದ್ದ ನಾವು ವಲಸಿಗರಲ್ಲ-ನೆಲೆಸಿಗರು ಹಾಗೂ ಸಾವಯವ ರೈತ ಸಂತೆ ಉತ್ತಮವಾಗಿ ನಡೆಯಿತು. ತುಳಸಿ ಗಿಡಕ್ಕೆ ನೀರು ಹಾಕುವ ಮೂಲಕ ಚಿಂತಕ ಪ್ರೊ.ಕಾಳೇಗೌಡ ನಾಗವಾರ ರೈತಸಂತೆ ಉದ್ಘಾಟಿಸಿದರು.
ಮಹದೇಶ್ವರ ಬೆಟ್ಟದ ತಪ್ಪಲ ಸುತ್ತಮುತ್ತಲಿನ ಪ್ರದೇಶಗಳಿಂದ ಆಗಮಿಸಿದ್ದ ಸಾವಯವ ಕೃಷಿಕರು ತಾವು ಬೆಳೆದ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾರಾಟ ಮಾಡಿದರು. ಜೆ.ಪಿ.ನಗರ ಸುತ್ತಮುತ್ತಲಿನ ಪ್ರದೇಶದ ಜನರು ಉತ್ಸುಕತೆಯಿಂದ ಆಗಮಿಸಿ ಸಾವಯವ ಪದಾರ್ಥಗಳನ್ನು ಖರೀದಿಸುತ್ತಿದ್ದುದು ಕಂಡುಬಂತು.
ಸಾವಯವ ಕೃಷಿಯ ಬೆಳೆಗಳಲ್ಲಿ ಪ್ರಮುಖವಾಗಿ ನವಣೆ, ಸಜ್ಜೆ, ಬರಗು ಮುಂತಾದ ಸಿರಿಧಾನ್ಯಗಳು ಹಾಗೂ ರೈತರೇ ತಯಾರಿಸಿದ ಉಪ್ಪಿನ ಕಾಯಿ, ತಿಂಡಿ-ತಿನಿಸುಗಳು, ಬಾಳೆ ಹಣ್ಣು, ಬೆಲ್ಲ, ಈರುಳ್ಳಿ, ಬೆಳ್ಳುಳ್ಳಿ ಮುಂತಾದ ಸಾವಯವ ಪದಾರ್ಥಗಳ ಮಾರಾಟ ಹಾಗೂ ಪ್ರದರ್ಶನ ನಡೆಯಿತು.
ಸರ್ಕಾರಿ ಆಯುರ್ವೇದ ಕಾಲೇಜಿನ ಡಾ.ರಾಜೇಂದ್ರ, ಮಾಜಿ ಮೇಯರ್ ಬಿ.ಎಲ್.ಭೈರಪ್ಪ, ಚಾಮರಾಜನಗರ ಜಿಲ್ಲಾ ರೈತಸಂಘದ ಅಧ್ಯಕ್ಷ ಹೊನ್ನೂರು ಪ್ರಕಾಶ್ ಇತರರಿದ್ದರು.