Advertisement

ರೈತರ ಒಪ್ಪಿಗೆ ಪಡೆದೇ ಭೂ ಸ್ವಾಧೀನ ಕಾರ್ಯ

05:15 PM Mar 02, 2020 | Naveen |

ಬೀರೂರು: ಭದ್ರಾ ಮೇಲ್ದಂಡೆ ಯೋಜನೆಗೆ ಜಮೀನುಗಳ ಭೂಸ್ವಾ ಧೀನ ಪ್ರಕ್ರಿಯೆ ಆರಂಭವಾಗಿದ್ದು, ರೈತರೊಂದಿಗೆ ಚರ್ಚಿಸಿ ಒಪ್ಪಿಗೆ ಪಡೆದು ಜಮೀನುಗಳ ಭೂ ಸ್ವಾಧೀನ ಪ್ರಕ್ರಿಯೆ, ಕಾನೂನಿನ ಚೌಕಟ್ಟಿನಲ್ಲಿ ನಡೆಯಬೇಕು ಎಂದು ತರೀಕೆರೆ ಉಪವಿಭಾಗಾಧಿಕಾರಿ ಬಿ.ಆರ್‌.ರೂಪ ಹೇಳಿದರು.

Advertisement

ಪಟ್ಟಣದ ವಾಸವಿ ಕಲ್ಯಾಣ ಮಂದಿರದಲ್ಲಿ ಭೂಸ್ವಾಧೀನಕ್ಕೊಳಪಟ್ಟಿರುವ ರೈತರೊಂದಿಗಿನ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಭದ್ರಾ ಮೇಲ್ದಂಡೆ ಯೋಜನೆಯಡಿ ಪ್ಯಾಕೇಜ್‌-04 ತುಮಕೂರು ಶಾಖಾ ಕಾಲುವೆ ಕಾಮಗಾರಿಗಾಗಿ ಬೇಕಾದಂತಹ ಗೌಡನಕಟ್ಟೆಹಳ್ಳಿ, ಬಿಸಲೆರೆ, ಅರೇಹಳ್ಳಿ, ಚಿಕ್ಕನಲ್ಲೂರು, ಬಾಸೂರು, ಚಿಕ್ಕಬಾಸೂರು, ಕಲ್ಲೇನಹಳ್ಳಿ, ಆಡಿಗೆರೆ, ನಾಗಗೊಂಡನಹಳ್ಳಿಗಳಿಗೆ ಸೇರಿದಂತೆ ಹಲವು ಗ್ರಾಮಗಳ ಭೂಮಿ ಅಗತ್ಯವಿದ್ದು, ಸದರಿ ಜಮೀನುಗಳಿಗೆ ದಿನಾಂಕ/25/10/2018 ರ  ಸೂಚನೆಯಂತೆ ಸರ್ಕಾರದ ಮಾರ್ಗಸೂಚಿಯನ್ವಯ ಈ ಪ್ರಕ್ರಿಯೆ ಅ ಧಿಸೂಚನೆ ಹೊರಡಿಸಿದ ಹಿಂದಿನ ಮೂರು ವರ್ಷದ ಅಕ್ಕಪಕ್ಕ ಗ್ರಾಮದ ಜಮೀನಿನ ಮಾರುಕಟ್ಟೆಯ ದರವನ್ನ ಪರಿಷ್ಕರಿಸಿ ನಂತರ ದರ ನಿಗದಿಯಾಗಲಿದೆ. ಇದು ಸರ್ಕಾರದ ನಿಯಾಮವಳಿ ಪ್ರಕಾರವೇ ಸರ್ಕಾರ ರೈತರಿಗೆ ಪರಿಹಾರ ಬರುತ್ತದೆ. ಪರಿಹಾರ ಭೂಮಿಗೆ ಸಂಬಂಧಿಸಿದ್ದು, ನಂತರ ಸರ್ಕಾರದ ವತಿಯಿಂದ ಜಂಟಿ ಸರ್ವೇಯನ್ನ ಕಂದಾಯ, ತೋಟಗಾರಿಕೆ, ಅರಣ್ಯ, ಕೃಷಿ ಇಲಾಖೆಗೆ ಒಳಪಡುವ ವಿವಿಧ ಬೆಳೆಗಳ ಮಾರುಕಟ್ಟೆಯ ದರವನ್ನ ನಿಗದಿಪಡಿಸಲಾಗುತ್ತದೆ ಎಂದರು.

ಇದಾದ ನಂತರ ಸರ್ಕಾರ ನೀಡುವ ಪರಿಹಾರದ ಮೊತ್ತ ಕಡಿಮೆಯಾಗಿದೆ ಎಂದು ತಮ್ಮ ಆಕ್ಷೇಪಣೆ ಇದ್ದಲ್ಲಿ ರೈತರು ನ್ಯಾಯಾಲಯದ ಮೊರೆ ಹೋಗಬಹುದಾಗಿದೆ. ರೈತರ ಒಪ್ಪಿಗೆ ಇದ್ದಲ್ಲಿ ದಾಖಲೆ ಪರಿಶೀಲಿಸಿ ಪರಿಹಾರ ಮೊತ್ತ ನಿಗದಿಗೊಳಿಸಲಾಗುವುದು ಎಂದು ಹೇಳಿದರು.

ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಮಾತನಾಡಿ, ಕ್ಷೇತ್ರದ ರೈತರ ಹಿತ ಕಾಪಾಡುವಲ್ಲಿ ಶ್ರಮವಹಿಸುತ್ತೇನೆ. ನಮ್ಮ ಭಾಗದ ಹಲವು ಕೆರೆಗಳಿಗೆ ನೀರು ಬರುತ್ತಿರುವುದು ರೈತರಲ್ಲಿ ಖುಷಿ ತರಿಸಿದೆ. ರೈತರಿಗೆ ತಮ್ಮ ಜಮೀನಿಗೆ ಸಿಗಬೇಕಾದ ಪರಿಹಾರದ ಬಗ್ಗೆ ಸಂಕೋಚವಿಲ್ಲದೆ ಸಭೆಯಲ್ಲಿ ಕೋರಿಕೆ ಸಲ್ಲಿಸಬಹುದು. ನಿಮ್ಮ ಅಹವಾಲನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ನ್ಯಾಯ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮುಂದುವರಿಸುತ್ತೇನೆ. ಭೂಸ್ವಾದೀನಕ್ಕೊಳಪಟ್ಟ ರೈತರ ತ್ಯಾಗ ಮುಂದಿನ ಪೀಳಿಗೆಯ ಏಳ್ಗೆಗೆ ಮೆಟ್ಟಿಲಾಗಲಿದೆ ಎಂದರು.

ಆಡಿಗೆರೆ ಗ್ರಾಮಸ್ಥ ಎ.ಈ.ಜಯಣ್ಣ ಮಾತನಾಡಿ, ಸರ್ಕಾರ ನೀಡುವ ಹಣ ಕ್ರಮೇಣ ಕರಗಿ ಹೋಗಬಹುದು. ಆದರೆ ರೈತನ ಸುಪರ್ದಿಯಲ್ಲಿರುವ ಜಮೀನು ಅವನ ವಂಶಾವಳಿಯನ್ನು ಸಾಕುವ ಸಾಮರ್ಥ್ಯ ಹೊಂದಿರುತ್ತದೆ. ಹೀಗಾಗಿ ಇದನ್ನು ಗಣನೆಗೆ ತೆಗೆದುಕೊಂಡು ಸೂಕ್ತ ದರ ನಿಗದಿಪಡಿಸುವುದು ಉತ್ತಮ. ಈಗಾಗಲೇ ಭೂಸ್ವಾ ಧೀನಪಡಿಸಿಕೊಂಡಿರುವ ಸ್ಥಳಗಳಲ್ಲಿ ನೀಡಿರುವ ಪರಿಹಾರ ಗಮನಿಸಿ ಎಕರೆಗೆ 45 ರಿಂದ 60 ಲಕ್ಷ ರೂ.ವರೆಗೆ ಪರಿಹಾರ ನೀಡಿದರೆ ಎಲ್ಲಾ ರೈತರಿಗೂ ಅನುಕೂಲವಾಗುತ್ತದೆ ಎಂದರು.

Advertisement

ಬಿಸಿಲೆರೆ ಸೋಮಶೇಖರ್‌ ಮಾತನಾಡಿ, ಭದ್ರಾ ಮೇಲ್ದಂಡೆಯ ಕಾಲುವೆ ಹರಿಯುವುದು ಎಲ್ಲಾ ರೈತರಲ್ಲಿ ಸಂತಸ ಮೂಡಿಸಿದೆ. ಒಂದು ಎಕರೆ ಜಮೀನು ಹೋದರೂ ಉಳಿದ ಮೂರು ಎಕರೆ ಜಮೀನಿಗೆ ನೀರಾವರಿ ಕಲ್ಪಿಸಿದಂತಾಗುತ್ತದೆ. ಹೀಗಾಗಿ ಸರ್ಕಾರ ಯಾವುದೇ ಬೆಲೆ ನಿಗದಿ ಮಾಡಿದರೂ ತೃಪ್ತಿ ಇದೆ ಎಂದರು.

ಸಭೆಯ ನಂತರ ರೈತರು ತಮ್ಮ ಜಮೀನಿನ ವಿವರ, ನಷ್ಟವಾಗಬಹುದಾದ ಭೂಮಿಗೆ ಪರಿಹಾರದ ಬಗ್ಗೆ ಬರವಣಿಗೆಯ ಮೂಲಕ ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳಿಗೆ ಅಹವಾಲು ನೀಡಿದರು. ಜಿಪಂ ಸದಸ್ಯ ಕೆ.ಆರ್‌.ಮಹೇಶ್‌ ಒಡೆಯರ್‌, ತಹಶೀಲ್ದಾರ್‌ ಉಮೇಶ್‌, ಶಿರಸ್ತೇದಾರ್‌ ಶಿವಮೂರ್ತಿ ನಾಯ್ಕ, ಭದ್ರಾ ಮೇಲ್ದಂಡೆ ಎಇಇ ಜಗದೀಶ್‌, ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ, ರೈತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next