Advertisement

Bengaluru: ಆಟೋ ಬುಕ್ಕಿಂಗ್‌ ರದ್ದುಪಡಿಸಿದ ಯುವತಿಗೆ ನಿಂದನೆ

03:38 PM Sep 06, 2024 | Team Udayavani |

ಬೆಂಗಳೂರು: ಓಲಾ ಆಟೋ ಬುಕಿಂಗ್‌ ರದ್ದುಗೊಳಿಸದಕ್ಕೆ ಹೊರರಾಜ್ಯದ ವಿದ್ಯಾರ್ಥಿನಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ಮಾಡಿದ ಆಟೋ ಚಾಲಕನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ.

Advertisement

ದೊಡ್ಡಕಲ್ಲಸಂದ್ರದ ಮುತ್ತುರಾಜ್‌ (45) ಬಂಧಿತ.

ಸೆ.2ರಂದು ರಾಜಾಜಿನಗರದ ಡಾ.ರಾಜ್‌ ಕುಮಾರ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಬಿಹಾರ ಮೂಲದ ವಿದ್ಯಾರ್ಥಿನಿ ನೀತಿ ಶರ್ಮಾ ಎಂಬವರು ನೀಡಿದ ದೂರಿನ ಮೇರೆಗೆ ಆಟೋ ಚಾಲಕನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ನೀತಿ ಶರ್ಮಾ ಮತ್ತು ಆಕೆಯ ಸ್ನೇಹಿತೆ ಓಲಾ ಆ್ಯಪ್‌ನಲ್ಲಿ ಆಟೋಕ್ಷಾ ಬುಕ್‌ ಮಾಡಿದ್ದರು. ನೀತಿ ಬುಕ್‌ ಮಾಡಿದ್ದ ಆಟೋ ನಿಗದಿತ ಸ್ಥಳಕ್ಕೆ ಮೊದಲು ಬಂದಿದೆ. ಈ ವೇಳೆ ಸ್ನೇಹಿತೆ ಬುಕ್‌ ಮಾಡಿದ್ದ ಆಟೋವನ್ನು ಕ್ಯಾನ್ಸಲ್‌ ಮಾಡಿದ್ದಾರೆ. ಬಳಿಕ ಇಬ್ಬರು ಒಂದೇ ಆಟೋ ರಿಕ್ಷಾ ಏರಿ ಹೊರಟ್ಟಿದ್ದಾರೆ.

ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಆಟೋ ಚಾಲಕ ಮುತ್ತುರಾಜ್‌, ನೀತಿ ಹಾಗೂ ಆಕೆಯ ಸ್ನೇಹಿತೆ ಪ್ರಯಾಣಿಸುತ್ತಿದ್ದ ಆಟೋ ತಡೆದು ಏಕೆ ಬುಕಿಂಗ್‌ ಕ್ಯಾನ್ಸಲ್‌ ಮಾಡಿದ್ದು ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ನೀತಿ ಸ್ನೇಹಿತೆ ಬೇಗ ಕಾಲೇಜಿಗೆ ಹೋಗಬೇಕಿತ್ತು. ನಾನು ಬುಕ್‌ ಮಾಡಿದ್ದ ಆಟೋ ಬೇಗ ಬಂದಿದ್ದರಿಂದ ನಿಮ್ಮ ಆಟೋ ಕ್ಯಾನ್ಸಲ್‌ ಮಾಡಿದ್ದಾಗಿ ಹೇಳಿದ್ದಾರೆ. ಅದರಿಂದ ಕೋಪಗೊಂಡ ಆಟೋ ಚಾಲಕ, ನೀತಿಯನ್ನು ಅಚಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.

Advertisement

ಇದನ್ನು ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಲು ಮುಂದಾದಾಗ, ಆಕೆಯ ಕೈಗೆ ಹಲ್ಲೆ ಮಾಡಿ ಮೊಬೈಲ್‌ ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಬಳಿಕ ನೀತಿ ಪ್ರಯಾಣಿಸುತ್ತಿದ್ದ ಆಟೋ ಚಾಲಕ ಮಧ್ಯ ಪ್ರವೇಶಿಸಿ, ಮುತ್ತುರಾಜನನ್ನು ಸಮಾಧಾನಪಡಿಸಿ ಸ್ಥಳದಿಂದ ಕಳುಹಿಸಿದ್ದಾರೆ.

ಈ ಸಂಬಂಧ ನೀತಿ ತಮ್ಮ ಎಕ್ಸ್‌ ಖಾತೆಯಲ್ಲಿ ಆಟೋ ಚಾಲಕ ಮುತ್ತುರಾಜ್‌ ವರ್ತನೆ ವಿಡಿಯೋ ಹಂಚಿಕೊಂಡು ಘಟನೆಯನ್ನು ವಿವರಿಸಿ ಪೋಸ್ಟ್‌ ಮಾಡಿದ್ದರು. ಓಲಾ ಕಂಪನಿ ಹಾಗೂ ನಗರ ಪೊಲೀಸರಿಗೂ ಟ್ಯಾಗ್‌ ಮಾಡಿದ್ದರು. ಘಟನೆ ನಡೆದ ಸ್ಥಳದ ಆಧಾರದ ಮೇಲೆ ಮಾಗಡಿ ರಸ್ತೆ ಠಾಣೆ ಪೊಲೀಸರು, ನೀತಿ ದೂರಿಗೆ ಸ್ಪಂದಿಸಿದ್ದಾರೆ. ನೀತಿಯಿಂದ ದೂರು ಪಡೆದು ಪ್ರಕರಣ ದಾಖಲಿಸಿ, ಆಟೋ ಚಾಲಕ ಮುತ್ತುರಾಜ್‌ನನ್ನು ಬಂಧಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.